ಬಜೆಟ್‍ನಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ : ಜಿ ಎಸ್ ಬಿ

ತುಮಕೂರು
 
    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್‍ನಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಲ್ಲೂ ತಮ್ಮ ಕನಸಿನ ಯೋಜನೆಗಳಾದ ಜಲಗ್ರಾಮ ಕ್ಯಾಲೆಂಡರ್, ಕಿಂಡಿ ಅಣೆಕಟ್ಟು ಯೋಜನೆ, ಏತನೀರಾವರಿ, ಕುಡಿಯುವ ನೀರು ಸೇರಿದಂತೆ ನೀರಾವರಿ ಯೋಜನೆಗಳಿಗೆ ಒತ್ತು ನೀಡಲಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
    ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮೂಲಕ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ  ಮತ್ತು ಕುಡಿಯುವ ನೀರಿನ ಯೋಜನೆ ಜೊತೆಗೆ, ಕರ್ನಾಟಕ ರಾಜ್ಯದಲ್ಲಿ ನದಿ ನೀರಿನ ಯೋಜನೆಯಡಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ಮಹತ್ವಕಾಂಕ್ಷೆ ಯೋಜನೆಗಳಿಂದ ರಾಜ್ಯದ ರೈತರಿಗೆ ಅನೂಕೂಲವಾಗಲಿದೆ. ಈ ಯೋಜನೆಗಳ  ಜಾರಿಗೆ ನಿರಂತರವಾಗಿ ಶ್ರಮಿಸುವುದರ ಜೊತೆಗೆ ಕೇಂದ್ರ ಸರ್ಕಾರದ ಅನುದಾನ ತರಲು ಶ್ರಮಿಸಲಾಗುವುದು ಎಂದು ತಿಳಿಸಿದರು.
    ರಾಜ್ಯದ 76 ತಾಲ್ಲೂಕುಗಳಲ್ಲಿ ಅಂತರ್ಜಲದ ಸ್ಥಿತಿ ಗಂಭೀರವೆಂದು ಗುರುತಿಸಲಾಗಿದ್ದು, ನೀರಿನ ಕೊರತೆ ಅನುಭವಿಸುತ್ತಿರುವ ಈ ತಾಲ್ಲೂಕುಗಳಲ್ಲಿ ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಚಟುವಟಿಕೆಗಳಿಗಾಗಿ 4.75 ಲಕ್ಷ ಹೆಕ್ಟೇರುಗಳಿಗೆ 100 ಜಲಾನಯನ ನಿರ್ವಹಣಾ ಯೋಜನೆಗಳನ್ನು ಮಂಜೂರು ಮಾಡಿದೆ. ಅಲ್ಲದೆ, ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಲಕ್ಷ ಹೆಕ್ಟೇರ್‍ಗಳಲ್ಲಿನ 810 ಅತಿ ಸಣ್ಣ ಜಲಾನಯನ ಪ್ರದೇಶಗಳಲ್ಲಿ ಜಲಾಮೃತ ಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ. ನೀರಿನ ಆಯವ್ಯಯ ನೀರಿನ ಆಡಿಟ್  ಮತ್ತು  ನೀರಿನ ಕೊರತೆ ನೀಗಿಸುವ ಕಾರ್ಯತಂತ್ರದ ಅಡಿಯಲ್ಲಿ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಜಲಗ್ರಾಮ ಕ್ಯಾಲೆಂಡರ್ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
    ಕರಾವಳಿ ಪ್ರದೇಶದಲ್ಲಿ  ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ಯೋಜನೆಗಳನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸುವ ಕುರಿತು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು. ದೇಶದ ಜಲಕ್ಷಾಮ ಅನುಭವಿಸುತ್ತಿರುವ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅಟಲ್ ಭೂ-ಜಲ ಯೋಜನೆಯನ್ನು ಕೇಂದ್ರ ಸರ್ಕಾರವು ಘೋಷಿಸಿದ್ದು, ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿರುವ 1202 ಕೋಟಿ ರೂಗಳನ್ನು ಉಪಯೋಗಿಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅವಶ್ಯಕ ಕಾರ್ಯಕ್ರಮಗಳನ್ನು ಮುಂದಿನ ಐದು ವರ್ಷಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
 
   ನೀರು ಸಂರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಲ್ಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಫ್ಲಡ್ ಇರಿಗೇಶನ್ ಪದ್ಧತಿಯನ್ನು ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತಿಸಲು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು. 2020-21ನೇ  ಸಾಲಿನಲ್ಲಿ  ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯವನ್ನು ಜಲಸಂಪನ್ಮೂಲ  ಇಲಾಖೆಯ ಮೂಲಕ ಕಲ್ಪಿಸಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಬೇಡಿಕೆಗಳ ಸ್ವೀಕೃತವಾಗಿದ್ದು, ನೀರಿನ ಮೂಲದ ಲಭ್ಯತೆ ಹಾಗೂ ತಾಂತ್ರಿಕ ಅನುಕೂಲತೆಯನ್ನು ಆಧರಿಸಿ ಹೊಸ ಏತ ನೀರಾವರಿ ಯೋಜನೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗಳನ್ನು 5000 ಕೋಟಿ ರೂಗಳ ವೆಚ್ಚದಲ್ಲಿ  ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
   ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಹಾಗೂ ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು  ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕವನ್ನು ಮುಂದಿನ ನಾಲ್ಕು  ವರ್ಷಗಳಲ್ಲಿ ಕಲ್ಪಿಸಲು ಮನೆ-ಮನೆಗೆ ಗಂಗೆ ಎಂಬನೂತನ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು ಅನುಷ್ಠಾನ ಮಾಡಲಾಗುವುದು. 2020-21ನೇ ಸಾಲಿನಲ್ಲಿ 1 ಲಕ್ಷ ಮನೆಗಳಿಗೆ ನೀರಿನ ಸಂಪರ್ಕವನ್ನು ನೀಡಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ  ನೀರಿನ ಪೂರೈಕೆಯಲ್ಲಿ ಸಮನ್ವಯ ಸಾಧಿಸಲು ಹಾಗೂ ಶುದ್ಧ ಕುಡಿಯುವ ನೀರನ್ನು ಪೂರೈಸಲು ಸಮಗ್ರ ನೀತಿ ರೂಪಿಸಲಾಗುವುದು. ಹಾಗೂ ಸಂಬಂಧಿಸಿದ ಇಲಾಖೆ  ಮತ್ತು ಸಂಸ್ಥೆಗಳನ್ನು ಒಂದೇ ಸಚಿವಾಲಯದಡಿ ತರಲಾಗುವುದು ಎಂದು ತಿಳಿಸಿದರು.
   ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರಲು ಬೆಂಗಳೂರು-1, ಕರ್ನಾಟಕ-1 ಮಾದರಿಯಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ  ಪ್ರತೀ ಗ್ರಾಮದಲ್ಲಿ ಗ್ರಾಮ-1 ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಗ್ರಾಮ-1 ಕೇಂದ್ರಗಳು ಸರ್ಕಾರದ ವಿವಿಧ ಯೋಜನೆಗಳ ರಾಜ್ಯದ ವಿವಿಧ ಕೃಷಿ ಮಾರುಕಟ್ಟೆ/ಮಂಡಿ ದರಗಳ ಮಾಹಿತಿ ಪ್ರಚುರಪಡಿಸುವುದರರೊಂದಿಗೆ ಸಕಾಲ ಹಾಗೂ ಸೇವಾ ಸಿಂಧು ಯೋಜನೆಗಳ ಸೇವೆ, ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
   ತುಮಕೂರು ಜಿಲ್ಲೆಯ ತಿಪಟೂರು ಕಲ್ಪತರು ನಾಡು ಎಂದೇ ಖ್ಯಾತಿಯಾಗಿದೆ. ಇಲ್ಲಿಯ ತೆಂಗು ಬೆಳೆಗಾರರಿಗೆ ಸಹಾಯವಾಗಲು ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ಬೆಳಗಾವಿ, ಹುಬ್ಬಳ್ಳಿ ಮಂಗಳೂರು, ಶಿವಮೊಗ್ಗ, ಹಾಸನ, ತುಮಕೂರು ಮತ್ತು ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ 353 ಕೋಟಿ ರೂ ವೆಚ್ಚದಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
   ಇದರಿಂದ ಕೈಗಾರಿಕಾ ಉದ್ಯಮ ಕ್ಷೇತ್ರಗಳ ಉನ್ನತ ಮಟ್ಟದ ಡೊಮೈನ್‍ಗಳಲ್ಲಿ ಕೌಶಲ್ಯ ತರಬೇತಿ ನೀಡುವುದರ  ಮೂಲಕ ರಾಜ್ಯದ ಯುವ ಜನತೆಗೆ ಉದ್ಯೋಗವಕಾಶವನ್ನು ಹೆಚ್ಚಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ 12,600 ವಿದ್ಯಾರ್ಥಿಗಳಿಗೆ ಉದ್ಯೋಗ ನಿಯುಕ್ತಿಗೊಳಿಸುವ ಗುರಿಯನ್ನು ಹೊಂದಲಾಗಿದೆ. ಕೆ-ಸೇಫ್ ಅಡಿಯಲ್ಲಿ  ಮುಧೋಳ, ಯಲಬುರ್ಗಾ, ತೀರ್ಥಹಳ್ಳಿ ನರಸಿಂಹರಾಜಪುರ, ಗೋಣಿಕೊಪ್ಪ, ಕುಣಿಗಲ್, ದೇವನಹಳ್ಳಿ ಬೈಂದೂರು, ಮುಂಡಗೋಡ ಮತ್ತು ಶಿರಹಟ್ಟಿಯಲ್ಲಿ ಒಟ್ಟು 10 ಹೊಸ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ನೇರಳಪುರದ ಕುಮಾರ್, ಲಕ್ಷ್ಮಣ್‍ಗೌಡ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap