ಗುಡಿಸಲುಗಳೇ ಮುಕ್ತವಾಗಿಲ್ಲ: ಬಯಲು ಶೌಚಮುಕ್ತ ಇನ್ನೆಲ್ಲಿ..?

ತುಮಕೂರು
     ಭಾರತ ಈಗ ಬಯಲು ಶೌಚಮುಕ್ತ ರಾಷ್ಟ್ರ. ನಮ್ಮದು ಬಯಲು ಶೌಚಮುಕ್ತ ಗ್ರಾಮವೆಂದು ಭಾರತದ ಗ್ರಾಮಗಳು ತಾವಾಗಿಯೇ ಘೋಷಿಸಿಕೊಂಡಿವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮತ್ತು ಸ್ವಚ್ಛತೆಯ ಪ್ರತೀಕವಾಗಿದ್ದ ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನದ ಸಂದರ್ಭದಲ್ಲಿ ಇದು ಸಾಧ್ಯವಾಗಿರುವುದು ಹೆಮ್ಮೆಯ ವಿಚಾರ: … ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 2 ರಂದು ಮಾಡಿದ ಭಾಷಣದ ಸಾರಾಂಶವಿದು.
    ಮಹಾತ್ಮಗಾಂಧೀಜಿಯ 150ನೇ ಜನ್ಮದಿನದ ಅಂಗವಾಗಿ ಸಾಬರಮತಿ ಆಶ್ರಮದಲ್ಲಿ ಆಯೋಜಿಸಿದ್ದ ಸ್ವಚ್ಛ ಭಾರತ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆ ಪಡೆದು ಗ್ರಾಮೀಣ ಪ್ರದೇಶಗಳ ಜನರು ತಮ್ಮ ಗ್ರಾಮವನ್ನು ಬಯಲು ಶೌಚದಿಂದ ಮುಕ್ತಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.
     60 ತಿಂಗಳುಗಳಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸುವ ಮೂಲಕ ದೇಶದ ಸುಮಾರು 60 ಕೋಟಿ ಜನರಿಗೆ ಶೌಚಾಲಯದ ಸೌಲಭ್ಯ ಒದಗಿಸಿದ್ದೇವೆ. ಈ ಯಶಸ್ಸನ್ನು ಕಂಡು ವಿಶ್ವವೇ ಬೆರಗಾಗಿದೆ. ಸ್ವಚ್ಛ ಭಾರತ ಯೋಜನೆಯು 75 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಹೇಳಿದ್ದರು.
    ಈ ಹೇಳಿಕೆಯ ಮರುದಿನವೇ ರಾಷ್ಟ್ರಾದ್ಯಂತ ವ್ಯಾಪಕ ಟೀಕೆಗಳು ಎದುರಾದವು. ಹಲವು ರಾಜ್ಯಗಳಲ್ಲಿ ಇನ್ನೂ ಬಯಲು ಶೌಚ ಜೀವಂತ ಇರುವ ಬಗ್ಗೆ ಸಾಕಷ್ಟು ಉದಾಹರಣೆಗಳು ಹರಿದು ಬಂದವು. ಆಯಾ ರಾಜ್ಯಗಳ ಮಂತ್ರಿವರ್ಯರೇ ಅಲ್ಲಿನ ಅಂಕಿ ಅಂಶಗಳನ್ನು ಸಾಬೀತು ಪಡಿಸಲು ಮುಂದಾದರು. ಸರ್ಕಾರದ ಹೇಳಿಕೆಗೂ, ವಾಸ್ತವಕತೆಗೂ ಸಾಕಷ್ಟು ವ್ಯತ್ಯಾಸವಿದೆ. ಇದೊಂದು ಅವೈಜ್ಞಾನಿಕ ನಿರ್ಧಾರ ಎಂದೇ ಹೆಚ್ಚು ತಜ್ಞರು ಅಭಿಪ್ರಾಯಪಟ್ಟರು. 
     ಯಾವ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪ್ರಧಾನಿಗಳು ಈ ಘೋಷಣೆ ಮಾಡಿದರೋ ತಿಳಿಯದು. ಆದರೆ ವಾಸ್ತವಕ್ಕೆ ಭಿನ್ನವಾದ ಈ ಘೋಷಣೆಯಂತೂ ಭಾರತದ ಪರಿಸ್ಥಿತಿಯನ್ನು ಅಣಕಿಸುವಂತಿದೆ. ಕೆಲವು ವಿಷಯಗಳಲ್ಲಿ ಇತರೆ ರಾಜ್ಯಗಳಿಗಿಂತ ಮುಂದುವರೆದಿರುವ ಕರ್ನಾಟಕದಲ್ಲೇ ಬಯಲು ಶೌಚಮುಕ್ತ ಸಾಧ್ಯವಾಗಿಲ್ಲ. ಇನ್ನು ತೀರಾ ಹಿಂದುಳಿದಿರುವ, ಬಡ ಜನರೇ ಹೆಚ್ಚಿರುವ ಉತ್ತರ ಭಾರತದ ಎಲ್ಲಾ ರಾಜ್ಯಗಳಲ್ಲೂ ಇದು ಸಾಧ್ಯವಾಗಿದೆಯೇ ಎಂಬ ಪ್ರಶ್ನೆಗಳಿಗೆ ಅಲ್ಲಿನ ಸ್ಥಿತಿಗತಿಗಳೇ ಉತ್ತರ ನೀಡಬೇಕು.
     ತುಮಕೂರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಉದಾಹರಣೆಯನ್ನೇ ತೆಗೆದುಕೊಂಡರೆ 2014-15ರ ಅವಧಿಯಲ್ಲಿ ಸ್ವಚ್ಛ ಭಾರತ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣದ ಕ್ರಾಂತಿಯೇ ನಡೆಯಿತು. ಅಂದರೆ, ಬಹುದೊಡ್ಡ ಪ್ರಚಾರ ಆರಂಭವಾಯಿತು. ಸರ್ಕಾರದ ಸೌಲಭ್ಯದ ಜೊತೆಗೆ ಆನಂತರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿಯೂ ಇದನ್ನು ಸೇರ್ಪಡೆ ಮಾಡಲಾಯಿತು. ಹಣ ಸಿಗುತ್ತದೆ ಕಟ್ಟಿಸಿಕೊಳ್ಳಿ ಎಂದು ಗ್ರಾಮೀಣ ಜನರನ್ನು ಹುರಿದುಂಬಿಸಲಾಯಿತು. 
      ಕೋಟ್ಯಂತರ ರೂಪಾಯಿಗಳ ಹಣ ಒಂದೆರಡು ವರ್ಷಗಳಲ್ಲಿ ಖರ್ಚಾಯಿತು. ಗ್ರಾಮಗಳಲ್ಲಿ ಶೌಚಾಲಯಗಳು ನಿರ್ಮಾಣವಾಗಿವೆ ಎಂದು ಅಧಿಕಾರಿಗಳು ವರದಿ ಕೊಟ್ಟರು. ಅಧಿಕಾರಿಗಳಿಗೆ ಇಷ್ಟು ಸಾಕಾಗಿತ್ತು. ವಾಸ್ತವವಾಗಿ ನೋಡಿದರೆ ಅದೆಷ್ಟೋ ಹಳ್ಳಿಗಳ ಮನೆಗಳಲ್ಲಿ ಇಂದಿಗೂ ಶೌಚಾಲಯಗಳಿಲ್ಲ. ಶೌಚಾಲಯಗಳನ್ನು ಕಟ್ಟಿಸಿಕೊಂಡವರು ಅದನ್ನು ಉಪಯೋಗಿಸುತ್ತಿಲ್ಲ. ಶೌಚಾಲಯದ ಕೊಠಡಿಗಳು ಸೌದೆ ಬಳಕೆಗೆ ಅಥವಾ ಮತ್ತಿನ್ನಾವುದೋ ವಸ್ತುಗಳ ಬಳಕೆಗೆ ಸೀಮಿತವಾಗಿದೆ. 
     ಸತತವಾಗಿ ಎದುರಾದ ಬರಗಾಲದ ಪರಿಸ್ಥಿತಿಯಿಂದಾಗಿ ಗ್ರಾಮೀಣ ಜನರು ತತ್ತರಿಸಿ ಹೋದರು. ಕುಡಿಯಲು ನೀರಿಲ್ಲದೆ ಪರಿತಪಿಸಿದರು. ಇಂತಹ ಸಮಯದಲ್ಲಿ ಶೌಚಾಲಯಗಳನ್ನು ಬಳಕೆ ಮಾಡಿ ಎಂದು ಹೇಳುವ ಧೈರ್ಯ ಯಾರಿಗೂ ಇರಲಿಲ್ಲ. ನೀರಿನ ಅಗತ್ಯತೆ ಇಲ್ಲದೆ ಶೌಚಾಲಯಗಳನ್ನು ಬಳಸುವುದಾದರೂ ಹೇಗೆ? ಇನ್ನೂ ಮುಂದುವರಿದು ಹೇಳಬೇಕೆಂದರೆ ಗ್ರಾಮೀಣ ಸಮುದಾಯದ ಬಹಳಷ್ಟು ಜನ ಕೆರೆ ಕಟ್ಟೆಗಳ ಅಂಗಳ, ಬೇಲಿಯ ಹಿಂದೆ ಹೋಗುವ ಅಭ್ಯಾಸವನ್ನು ಇನ್ನೂ ಬಿಟ್ಟಿಲ್ಲ. 
      ಸ್ವಚ್ಛ ಭಾರತ ಯೋಜನೆ ಜಾರಿಗೆ ಬಂದದ್ದು 2014ರ ಅಕ್ಟೋಬರ್ ತಿಂಗಳಿನಲ್ಲಿ. ಈ ಯೋಜನೆಯಡಿ ಸರ್ಕಾರವು ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿದೆಯೇ ಹೊರತು ಅದರ ಬಳಕೆ ಇತ್ಯಾದಿಗಳ ಬಗ್ಗೆ ಗಮನ  ಹರಿಸಲೇ ಇಲ್ಲ. ನೀರಿನ ಲಬ್ಯತೆ ಮತ್ತು ಪೂರೈಕೆಯನ್ನು ಸಂಪೂರ್ಣ ಕಡೆಗಣಿಸಲಾಯಿತು. ಇನ್ನೂ ಕೆಲವು ಕಡೆ ವರದಿಯಾಗಿರುವ ರೀತಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾದ ಶೌಚಾಲಯಗಳ ಜೊತೆಗೆ ಸೆಪ್ಟಿಕ್ ಟ್ಯಾಂಕ್‍ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈ ಟ್ಯಾಂಕುಗಳ ನಿರ್ಮಾಣಕ್ಕೆ ಮಾನದಂಡ ರೂಪಿಸಿಲ್ಲ. ಇಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಹೇಗೆ ಬಳಸಬೇಕು? ಎಲ್ಲಿಗೆ ಬಳಸಬೇಕು? ಇದರ ವಿಲೇವಾರಿ ಹೇಗೆ? ಎಂಬ ಯಾವುದೇ ವೈಜ್ಞಾನಿಕ ವಿವರಣೆಗಳಿಲ್ಲ.
      ಸರ್ಕಾರಗಳು ಬಯಲು ಶೌಚಮುಕ್ತ ಮಾಡುವುದಕ್ಕೆ ವಿಶೇಷ ಆಸಕ್ತಿ ವಹಿಸಿ ಹಣವನ್ನು ಖರ್ಚು ಮಾಡಿದವೇ ಹೊರತು ನಿಜವಾದ ಅರ್ಥದಲ್ಲಿ ಗ್ರಾಮೀಣ ಜನರ ಪರಿವರ್ತನೆ ಆಗಬೇಕಿರುವುದು ಎಲ್ಲಿ ಎಂಬ ಬಗ್ಗೆ ಅರಿಯುವಲ್ಲಿ ವಿಫಲವಾದರು. ಬಯಲು ಶೌಚ ಪದ್ಧತಿ ನಮ್ಮ ಗ್ರಾಮೀಣ ಸಮುದಾಯಗಳಲ್ಲಿ ಒಂದು ಸಾಮಾಜಿಕ ಜಾಡ್ಯ. ಇದನ್ನು ಹೋಗಲಾಡಿಸಬೇಕೆಂದರೆ ಮೊದಲು ಗುಡಿಸಲು ಮುಕ್ತ ಹಳ್ಳಿಗಳನ್ನು ನಿರ್ಮಾಣ ಮಾಡಬೇಕು. ಅಲ್ಲೆಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. 
       ಯಾವುದಾದರೂ ಗೊಲ್ಲರಹಟ್ಟಿ, ತಾಂಡ್ಯ ಇತ್ಯಾದಿ ಪ್ರತ್ಯೇಕ ಹಟ್ಟಿ ವಾಸಿಗಳನ್ನು ನೋಡಿಕೊಂಡು ಬಂದರೆ ಅಲ್ಲಿನ ಸಮಸ್ಯೆಗಳ ಅರಿವಾಗುತ್ತದೆ.  ಅವರಿಗೆ ಮನೆಗಳೇ ಇಲ್ಲ. ಸೂರೇ ಇಲ್ಲದ ಜನರಿಗೆ ಶೌಚ ಕಟ್ಟಿಸಿಕೊಳ್ಳಿ ಎಂದರೆ ಅವರ ಕಿವಿಗೆ ಹೋಗುತ್ತದೆಯೇ? ಸರ್ಕಾರ ಮೊದಲು ಗಮನ ಹರಿಸಬೇಕಾದುದು ಗುಡಿಸಲು ಮುಕ್ತ ಗ್ರಾಮಗಳ ಕಡೆಗೆ. ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಡೆಗೆ. ಇಷ್ಟೆಲ್ಲ ಆದ ನಂತರ ಶೌಚಾಲಯಗಳ ಬಳಕೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಿದರೆ ಆಗ ಮಾತ್ರ ಉದ್ದೇಶ ಸಫಲವಾದೀತು. 
     1999 ರಲ್ಲಿ ಸಂಪೂರ್ಣ ನೈರ್ಮಲ್ಯ ಆಂದೋಲನ ಆರಂಭವಾಯಿತು. 2012 ರಲ್ಲಿ ನಿರ್ಮಲ ಭಾರತ ಅಭಿಯಾನ ಎಂದು ಪುನರ್ ರೂಪಿಸಿ ಪ್ರೋತ್ಸಾಹ ಧನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಲಾಯಿತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಭಾರತ ಅಭಿಯಾನ ಎಂದು ನಾಮಕರಣ ಮಾಡಲಾಯಿತು. ಪ್ರೋತ್ಸಾಹ ಧನವನ್ನು 12 ಸಾವಿರ ರೂ.ಗಳಿಗೆ ಏರಿಸಲಾಯಿತು. ಇದಕ್ಕಾಗಿಯೇ ಕೆಲವರನ್ನು ರಾಯಭಾರಿಗಳಾಗಿ ಗುರುತಿಸಿ ಕಸ ಹೊಡೆಯುವ ಪೊರಕೆ ಹಿಡಿದು ನಿಂತು ವಿಶೇಷ ಅಭಿಯಾನ ಆರಂಭಿಸಲಾಯಿತು. ಈ ಅಭಿಯಾನ ಅದೆಷ್ಟು ಪ್ರಚಾರ ಪಡೆಯಿತು ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. 
     2014-15ರ ಅವಧಿಯಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಅನೇಕ ಶೌಚಾಲಯಗಳಿಗೆ ಒಂದು ಕಂತಿನ ಹಣವಷ್ಟೇ ಬಿಡುಗಡೆಯಾಗಿದೆ. ಸಂಪೂರ್ಣ ಹಣ ಇನ್ನೂ ಬಿಡುಗಡೆಯಾಗಿಲ್ಲ. ತಮ್ಮದೆ ಹಣದಲ್ಲಿ ಶೌಚಾಲಯ ಕಟ್ಟಿಸಿಕೊಂಡಿರುವ ಫಲಾನುಭವಿಗಳು ಸರ್ಕಾರದ ಪ್ರೋತ್ಸಾಹ ಧನ ತಮ್ಮ ಖಾತೆಗೆ ಬಂದು ಬೀಳಲಿದೆ ಎಂದು ನಂಬಿಕೊಂಡು ಕೂತು ಬಹಳ ವರ್ಷಗಳೇ ಕಳೆದವು. ಇಂದಿಗೂ ಈ ಹಣ ಅವರಿಗೆ ತಲುಪಿಲ್ಲ. ಸರ್ಕಾರದ ವರದಿಗಳಲ್ಲಿ ಮಾತ್ರ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಅದರ ಬಳಕೆಯಾಗುತ್ತಿವೆ ಎಂದು ಹೇಳುತ್ತಿವೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap