ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲಾ : ಸೋಮಶೇಖರ್

ಬೆಂಗಳೂರು

     ಮೈಸೂರು ಹಾಗೂ ರಾಜ್ಯಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದ್ದು, ಪ್ರತಿ ವರ್ಷ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಾಡಿನ 10 ಗಣ್ಯರಿಗೆ ಜಿಲ್ಲಾಡಳಿತದಿಂದ ಗೌರವಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

     ನಗರದ ಕೆ.ಆರ್. ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಕೊರೋನಾ ಸೋಂಕು ಇರುವ ಕಾರಣ ಈ ಬಾರಿ ಗಣ್ಯರನ್ನು ಗುರುತಿಸುವ ಕೆಲಸ ಆಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸಾಧಕರನ್ನು ಆಯ್ಕೆ ಮಾಡಿ ಗೌರವಿಸಲಾಗುವುದು ಎಂದರು.

     ಮೈಸೂರು ಜಯಚಾಮರಾಜೇಂದ್ರ ಮೃಗಾಲಯ ತೆರೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದ್ದು, ಮುಂದಿನ ಎರಡು ಮೂರು ದಿನದಲ್ಲಿ ಆದೇಶ ಹೊರಬೀಳಲಿದೆ. ಕೋವಿಡ್ 19 ಸೋಂಕು ನಿಯಂತ್ರಣ ಕ್ರಮಗಳನ್ನು ಮೃಗಾಲಯದಲ್ಲಿ ಕೈಗೊಳ್ಳಲಾಗುವುದು ಎಂದರು.

     ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಸೂಪರ್ ಸಿಎಂ ರೀತಿ ವರ್ತಿಸಿಲ್ಲ. ಅವರು ಯಾವುದೇ ಕ್ಷೇತ್ರದಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ. ನಾನು ಅಧಿಕಾರ ವಹಿಸಿಕೊಂಡು 3 ತಿಂಗಳು ಕಳೆದಿದೆ. ಆದರೆ ನನಗೆ ಈವರೆಗೂ ಅಂತಹ ಯಾವುದೇ ಸನ್ನಿವೇಶ ಎದುರಾಗಿಲ್ಲ. ತಮಗೆ ತಿಳಿದ ಮಟ್ಟಿಗೆ ನನ್ನ ಸಹೋದ್ಯೋಗಿ ಸ್ನೇಹಿತರಿಗೂ ಅಂತಹ ಅನುಭವ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

     ಸಿದ್ದರಾಮಯ್ಯ ಅವರು ರಾಜಕೀಯ ಉದ್ದೇಶಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ. ಇನ್ನು ಯಾವ ವರ್ಗಾವಣೆ ವಿಷಯಕ್ಕೂ ವಿಜಯೇಂದ್ರ ಅವರು ಹಸ್ತಕ್ಷೇಪ ಮಾಡಿಲ್ಲ. ಅಲ್ಲದೆ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವ ಶಾಸಕರು ಇಲ್ಲವೇ ಸಚಿವರಿಗೆ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸುವಂತೆ ಮುಖ್ಯಮಂತ್ರಿಗಳು ಇವತ್ತಿನವರೆಗೂ ಹೇಳಿರುವುದು ನನ್ನ ಗಮನಕ್ಕಂತೂ ಬಂದಿಲ್ಲ ಎಂದರು.

       ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮುಖ್ಯಮಂತ್ರಿಗಳ ಹುದ್ದೆ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಇನ್ನೂ 3 ವರ್ಷ ಆಡಳಿತ ನಡೆಸಲಿದ್ದಾರೆ. ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಸಮಸ್ಯೆ ಇಲ್ಲ. ಸುಮ್ಮನೆ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದರು.

      ಯಡಿಯೂರಪ್ಪ ಅವರು ಎಂದೂ ಮಾತು ತಪ್ಪದವರು. ನಮಗೆ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಇನ್ನು ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಎಲ್ಲೂ ಅಸಮಾಧಾನ ಇಲ್ಲ. ವಿಧಾನಪರಿಷತ್ ಸದಸ್ಯ ಸ್ಥಾನದ ಬಗ್ಗೆ ಯಾರೂ ಲಾಬಿ ನಡೆಸುತ್ತಿಲ್ಲ. ಮೈಸೂರು ಸೇರಿದಂತೆ ಆಯಾ ಭಾಗದ ಮುಖಂಡರು, ಆಕಾಂಕ್ಷಿಗಳು ಅಲ್ಲಿನ ಸಚಿವರು, ಸಂಸದರು ಹಾಗೂ ಶಾಸಕರಲ್ಲಿ ಚರ್ಚೆ ಮಾಡುವುದು ಸಹಜ. ಇದನ್ನೇ ಲಾಬಿ ಎನ್ನಲಾಗದು ಎಂದು ಸಚಿವ ಸೋಮಶೇಖರ್ ತಿಳಿಸಿದರು.

      ಮಾಜಿ ಸಚಿವ ಎಚ್. ವಿಶ್ವನಾಥ್ ಮಾತ್ರವಲ್ಲ, ಆರ್.ಶಂಕರ್, ಎಂಟಿಬಿ ನಾಗರಾಜ್, ಪ್ರತಾಪ್ ಗೌಡ ಪಾಟೀಲ್ ಎಲ್ಲರೂ ಪರಿಷತ್ತಿನ ಆಕಾಂಕ್ಷಿತರಿದ್ದು, ಇವರೆಲ್ಲರಿಗೂ ಸ್ಥಾನ ನೀಡುವಂತೆ ನಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

      ಕೋವಿಡ್ 19 ಸೋಂಕು ಜಿಲ್ಲೆಯಲ್ಲಿ ಈಗಾಗಲೇ ನಿಯಂತ್ರಣಕ್ಕೆ ಬಂದಿದೆ. ಆದರೆ, ಮುಂಬೈ ಸೇರಿದಂತೆ ಹೊರ ರಾಜ್ಯದಿಂದ ಬಂದವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಇವರೆಲ್ಲರ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಯಾರೂ ಭಯ ಪಡುವುದು ಬೇಡ ಎಂದು ಸಚಿವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap