ಕಣ್ಮರೆಯಾದ ಪಾಲಿಕೆ-ಸ್ಮಾರ್ಟ್ ಸಿಟಿ ಕಂಪನಿ ನಡುವಿನ ಹೊಂದಾಣಿಕೆ..! 

ತುಮಕೂರು:
     ಬಹುಕೋಟಿ ರೂಗಳ ವೆಚ್ಚದಲ್ಲಿ ಪ್ರಗತಿ ಪಥದಲ್ಲಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅತಂತ್ರ ಸ್ಥಿತಿಯಲ್ಲಿ ಮುಂದುವರೆದಿದ್ದು, ನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಕಂಪನಿಯ ನಡುವೆ ಒಂದಕ್ಕೊಂದು ಸಂಬಂಧವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ .ಮಹಾನಗರ ಪಾಲಿಕೆಯ ಆರು ವಾರ್ಡ್‍ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಈ ಭಾಗಗಳಲ್ಲಿ ಇರುವ ಕಾರ್ಪೋರೇಟರ್‍ ಗಳಿಗೆ ಕಾಮಗಾರಿಗಳ ಸಂಪೂರ್ಣ ಮಾಹಿತಿ ಇರಬೇಕು.
 
      ಆದರೆ ಬಹಳಷ್ಟು ಕಡೆಗಳಲ್ಲಿ ಮಾಹಿತಿಯ ಕೊರತೆ ಕಂಡು ಬರುತ್ತಿದೆ. ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆಯ ನಡುವೆ ಹೊಂದಾಣಿಕೆ ಇಲ್ಲವೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಪಾಲಿಕೆಯಿಂದ ಮುಕ್ತ ಹಾಗೂ ಪ್ರತ್ಯೇಕ ಎಂಬುದನ್ನು ಒಪ್ಪಬಹುದಾದರೂ ಮಾಹಿತಿ ಇರಬೇಕಲ್ಲವೆ ಎಂಬ ಮಾತುಗಳು ಕೆಲವು ಸದಸ್ಯರಿಂದಲೆ ಕೇಳಿಬರುತ್ತಿವೆ. 
      ಪಾಲಿಕೆಯಲ್ಲಿ ಆಯುಕ್ತರಾಗಿದ್ದ ಭೂಬಾಲನ್ ವರ್ಗಾವಣೆಯಾಗಿದ್ದಾರೆ. ಇವರು ಸ್ಮಾಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಾಲಿಕೆಗೆ ಪೂರ್ಣಾವಧಿ ಆಯುಕ್ತರಿಲ್ಲ. ಇದನ್ನೆಲ್ಲ ನೋಡಿದರೆ ಒಂದು ರೀತಿಯ ಅಯೋಮಯ ಎನ್ನುವಂತಹ ಚಿತ್ರಣ ಕಂಡು ಬರುತ್ತಿದೆ. ಕೆಲವು ಸದಸ್ಯರುಗಳೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಅಸಮಧಾನ ವ್ಯಕ್ತ ಪಡಿಸುತ್ತಿದ್ದಾರೆ. 
      “ತುಮಕೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಅಸ್ಪಷ್ಟವಾಗಿವೆ ಹಾಗೂ ಅವೈಜ್ಞಾನಿಕವಾಗಿವೆ” – ಇದು ತುಮಕೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ಜೆ.ಕುಮಾರ್ (7 ನೇ ವಾರ್ಡ್- ಅಗ್ರಹಾರ) ಮಾಡುತ್ತಿರುವ ನೇರ ಆರೋಪ .”ಸ್ಮಾರ್ಟ್ ಸಿಟಿ ಕಾಮಗಾರಿಗೆ ಒಂದು ಮಾಡೆಲ್ ಎಂಬುದೇ ಇಲ್ಲ.
 
       ಹೀಗಾಗಿ ಎಲ್ಲಿ -ಏನು ಕಾಮಗಾರಿ ನಡೆಯುತ್ತಿದೆ? ಯಾರು ಮಾಡುತ್ತಿದ್ದಾರೆ? ಇನ್ನೆಷ್ಟು ದಿನಗಳಲ್ಲಿ ಪೂರ್ಣವಾಗಲಿದೆ? ಇದರಿಂದ ಆಗುವ ಪ್ರಯೋಜನ ಏನು? ಎಂಬುದೇ ಅಸ್ಪಷ್ಟವಾಗಿದೆ. ಹಂತ-ಹಂತವಾಗಿ ಕಾಮಗಾರಿ ಕೈಗೊಳ್ಳುವ ಬದಲು, ಏಕ ಕಾಲದಲ್ಲಿ ಎಲ್ಲ ಕಾಮಗಾರಿಗಳನ್ನು ಚಾಲನೆಗೊಳಿಸಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಕಾಮಗಾರಿಗಳಿಂದ ಕುಡಿಯುವ ನೀರು ಪೂರೈಕೆ, ಒಳಚರಂಡಿ ಹಾಗೂ ಬಿ.ಎಸ್.ಎನ್.ಎಲ್. ಲೈನ್‍ಗಳಿಗೆ ಪದೇ ಪದೇ ತೊಂದರೆ ಆಗುತ್ತಿದೆ. ಇನ್ನು ಎಲ್ಲೆಲ್ಲೂ ರಸ್ತೆ ಅಗೆತದಿಂದ ಸಂಚಾರಕ್ಕೆ ಆಗುತ್ತಿರುವ ಅಡಚಣೆಯನ್ನಂತೂ ವರ್ಣಿಸಲು ಸಾಧ್ಯವಿಲ್ಲ.
        ಅದರಲ್ಲೂ ಈ ಮಳೆಗಾಲದಲ್ಲಿ ಭಾರಿ ಅಪಾಯ ಎದುರಾಗುತ್ತಿದೆ. ಹೀಗಿದ್ದರೂ ಸದ್ಯಕ್ಕೆ ಈ ಬಗ್ಗೆ ಹೇಳುವವರು- ಕೇಳುವವರು ಇಲ್ಲದಂತಾಗಿದೆ” ಎಂದು ಅವರು `ಪ್ರಜಾಪ್ರಗತಿ’ಯೊಡನೆ ಮಾತನಾಡುತ್ತ ಆಕ್ರೋಶದಿಂದಲೇ ನುಡಿದರು.
 “ಜನರ ತೆರಿಗೆ ಹಣದಿಂದ ಆಗುತ್ತಿರುವ ಕಾಮಗಾರಿಗಳಿವು. ಆದ ಕಾರಣ ಜನರ ತೆರಿಗೆ ಹಣ ಯಾವ ಕಾರಣಕ್ಕೂ ಪೋಲು ಆಗಬಾರದು. ಆದರೆ ಈಗ ಇಲ್ಲಿ ಆಗುತ್ತಿರುವುದೇ ಬೇರೆ. ಸ್ಮಾರ್ಟ್‍ಸಿಟಿ ಕಾಮಗಾರಿ ಎಂಬ ಹೆಸರಿನಲ್ಲಿ ಮನಬಂದಂತೆ ಕಾಮಗಾರಿಗಳು ನಡೆಯುತ್ತಿವೆ. ಇದನ್ನು ನೋಡಿದರೆ ಕೋಟ್ಯಂತರ ರೂ.ಗಳು ವ್ಯರ್ಥವಾದೀತೆಂಬ ಆತಂಕ ಉಂಟಾಗುತ್ತಿದೆ” ಎನ್ನುವ ಅವರು, ನಗರಾದ್ಯಂತ ಲಕ್ಷಾಂತರ ರೂ. ವೆಚ್ಚದಲ್ಲಿ ಅಳವಡಿಸಿರುವ ಸ್ಟೀಲ್ ಕಸದ ಡಬ್ಬವನ್ನು ಉದಾಹರಿಸಿದರು. 
    “ಒಂದು ಜೊತೆ ಸ್ಟೀಲ್ ಕಸದ ಡಬ್ಬಕ್ಕೆ 12 ಸಾವಿರ ರೂ. ಆಗಿದೆ. ಆದರೆ ಇದರ ಬದಲಾಗಿ ಫೈಬರ್ ಡಬ್ಬ ಬಳಸಿದ್ದರೆ ಕೇವಲ 4 ಸಾವಿರ ರೂ.ಗಳ ವೆಚ್ಚ ಆಗುತ್ತಿತ್ತು. ಸ್ಮಾರ್ಟ್‍ಸಿಟಿ ಕಾಮಗಾರಿ ಹೇಗೆ ನಡೆಯುತ್ತಿದೆ ಎನ್ನಲು ಇದೊಂದು ಉದಾಹರಣೆ ಸಾಕು” ಎಂದರು .”ನೋಡಿ, ನಗರದ ಬಿ.ಎಚ್.ರಸ್ತೆಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಕಾಂಕ್ರಿಟ್ ಡೆಕ್‍ಗಳನ್ನು ನಿರ್ಮಿಸಲಾಗಿದೆ. ಹಾಲಿ ಇರುವ ರಸ್ತೆಯ ಮಟ್ಟಕ್ಕಿಂತ ಒಂದು ಅಡಿ ಎತ್ತರಕ್ಕೆ ಇದನ್ನು ನಿರ್ಮಿಸಲಾಗಿದೆ. ಏಕೆ ಈ ರೀತಿ ರಸ್ತೆಯ ಮಟ್ಟದಿಂದ ಎತ್ತರಿ ಸಲಾಗಿದೆ ಎಂಬ ನನ್ನ ಪ್ರಶ್ನೆಗೆ ಸ್ಮಾರ್ಟ್‍ಸಿಟಿ ಕಂಪನಿಯಿಂದ ಉತ್ತರ ಸಿಕ್ಕಿಲ್ಲ. ಹೋಗಲಿ, ಇಡೀ ರಸ್ತೆಯನ್ನು ಅಷ್ಟು ಎತ್ತರಕ್ಕೆ ಎತ್ತರಿಸಲು ಸಾಧ್ಯವೇ ಎಂಬುದಕ್ಕೂ ಉತ್ತರ ಲಭಿಸಿಲ್ಲ. ಇದು ಅಸ್ಪಸ್ಟತೆಗೆ ಹಾಗೂ ಅವೈಜ್ಞಾನಿಕತೆಗೆ ನಿದರ್ಶನದಂತಿದೆ” ಎಂದು ಜೆ.ಕುಮಾರ್ ಉದ್ಗರಿಸಿದರು.
     “ಇನ್ನು ತುಮಕೂರು ನಗರದ ಕೆರೆಗಳಿಗೆ ನೀರು ತುಂಬಿಸಲಾಗುವುದೆಂದು ಯೋಜನೆ ಮಾಡಲಾಗುತ್ತಿದೆ. ಅದು ಓ.ಕೆ. ಆದರೆ ಈ ಕೆರೆಗಳಿಗೆ ಪುರಾತನ ಕಾಲದಿಂದಲೂ ಇರುವ ರಾಜಗಾಲುವೆಗಳ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಸ್ಮಾರ್ಟ್‍ಸಿಟಿ ಕಂಪನಿ ತಲೆಕೆಡಿಸಿಕೊಂಡೇ ಇಲ್ಲ. ರಾಜಗಾಲುವೆಗಳು ಎಷ್ಟಿವೆ? ಮೂಲ ಅಳತೆ ಎಷ್ಟು? ಈಗಿನ ಅಳತೆ ಎಷ್ಟು? ಒತ್ತುವರಿ ಆಗಿರುವುದೆಷ್ಟು? ತೆರವುಗೊಳಿಸಲು ಏನು ಕ್ರಮ ಕೈಗೊಳ್ಳಲಾಗುವುದು? ಎಂಬುದು ಮಾತ್ರ ನಿಗೂಢವಾಗಿದೆ. ನಗರದ ಅಮಾನಿಕೆರೆಯ ರಾಜಗಾಲುವೆಯ ಹೂಳೆತ್ತಲು ಈ ಹಿಂದೆ ಎರಡು ಬಾರಿ ಬಿಲ್ ಮಾಡಿರುವುದನ್ನು ಬಿಟ್ಟರೆ, ನಿಜವಾಗಿ ಆ ರಾಜಗಾಲುವೆಗಳ ಒತ್ತುವರಿಯನ್ನು ತೆರವುಮಾಡಿಸಲಾಗಿದೆಯೇ ಎಂಬುದೇ ಗೊತ್ತಾಗುತ್ತಿಲ್ಲ. ಇದು ನಮ್ಮ ಸ್ಮಾರ್ಟ್‍ಸಿಟಿ ಕಾಮಗಾರಿ” ಎಂದು ಮತ್ತೊಂದು ಉದಾಹರಣೆ ಕೊಟ್ಟರು.
      “ನಾವು ಚುನಾಯಿತರಾಗಿ ಒಂದು ವರ್ಷ ಮೂರು ತಿಂಗಳುಗಳಾಗಿವೆ. ಈ ಅವಧಿಯಲ್ಲಿ ಒಂದೇ ಒಂದು ಹೊಸ ಬೀದಿ ದೀಪ ಹಾಕಿಸಲು ಸಾಧ್ಯವಾಗಿಲ್ಲ. ಕಾರಣ ಇನ್ನು ಮುಂದೆ ಸ್ಮಾರ್ಟ್‍ಸಿಟಿ ವತಿಯಿಂದಲೇ ಎಲ್.ಇ.ಡಿ. ಬೀದಿದೀಪ ಅಳವಡಿಸಲಾಗು ವುದೆಂದು ಹೇಳುತ್ತಾ ಬರಲಾಗಿದೆ. ಆದರೆ ಈವರೆಗೆ ಸ್ಮಾರ್ಟ್‍ಸಿಟಿ ವತಿಯಿಂದ ಆ ಕೆಲಸ ಆಗಿಲ್ಲ. ಮೂರು ಬಾರಿ ಟೆಂಡರ್ ಕರೆಯುವ ಪ್ರಕ್ರಿಯೆ ನಡೆದಿದ್ದರೂ, ತಾಂತ್ರಿಕ ಕಾರಣಗಳಿಂದ ಅದು ಸಫಲವಾಗುತ್ತಿಲ್ಲ. ಹೀಗಾದರೆ ಪಾಲಿಕೆಯ ಸದಸ್ಯರಾದ ನಾವು ಏನು ಮಾಡಬೇಕು?” ಎಂಬ ಪ್ರಶ್ನೆಯನ್ನು ಮುಂದಿಟ್ಟರು.
     “ಮಹಾತ್ಮಗಾಂಧಿ ರಸ್ತೆಯ ಕನ್ಸರ್‍ವೆನ್ಸಿಗಳಲ್ಲಿ ಪಾಲಿಕೆಯಿಂದಲೇ ಈ ಮೊದಲು ಕಾಂಕ್ರಿಟ್ ಕಾಮಗಾರಿ ಮಾಡಲಾಗಿತ್ತು. ಅದೇ ಸ್ಥಳದಲ್ಲಿ ಸ್ಮಾರ್ಟ್‍ಸಿಟಿ ಕಂಪನಿಯಿಂದ ಲಕ್ಷಾಂತರ ರೂ. ವಿನಿಯೋಗಿಸಿ ಮತ್ತೊಮ್ಮೆ ನೆಪಕ್ಕೆ ಕಾಂಕ್ರಿಟ್ ಹಾಕಿ, ಪಾರ್ಕಿಂಗ್ ಜಾಗವೆಂದು ತೋರಿಸಲಾಯಿತು. ಇನ್ನು ಉಪ್ಪಾರಹಳ್ಳಿ ಮೇಲ್ಸೇತುವೆಯ ಕೆಳ ಭಾಗ ಸ್ಮಾರ್ಟ್‍ಸಿಟಿಯಿಂದ ಬಣ್ಣ ಬಳಿದಿದ್ದು, ಆ ಬಣ್ಣ ಉದುರಿಹೋಗುತ್ತಿದೆ. ನಗರದಲ್ಲಿ ರಸ್ತೆಗಳನ್ನು ಅಗೆದು ಆರೆಂಟು ತಿಂಗಳುಗಳಾಗುತ್ತಿದ್ದರೂ, ಅದನ್ನು ಸಂಬಂಧಿಸಿದ ಏಜೆನ್ಸಿಯವರು ರೆಸ್ಟೊರೇಷನ್ ಮಾಡದೆ, ರಸ್ತೆಗಳೆಲ್ಲ ಹಾಳಾಗಿವೆ” ಎಂದು ಜೆ.ಕುಮಾರ್ ವಿಷಾದದಿಂದಲೇ ವಿವರಿಸಿದರು.
ಪಾಲಿಕೆ ಇಂಜಿನಿಯರಿಂಗ್ ವಿಭಾಗದ ನಿರ್ಲಕ್ಷ್ಯ
    “ನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಯಬೇಕಾದರೂ, ಪಾಲಿಕೆಯ ಎನ್.ಓ.ಸಿ. ಪಡೆಯಬೇಕೆಂಬುದು ನಿಯಮ. ಅದರಂತೆ ಪಾಲಿಕೆಯು ನಿಯಮ-ನಿಬಂಧನೆಗಳಿಗೆ ಅನುಸಾರವಾಗಿ ಎನ್.ಓ.ಸಿ. ನೀಡಿದೆ. ಆದರೆ ಸಂಬಂಧಿಸಿದ ಏಜೆನ್ಸಿಯು ಸದರಿ ನಿಯಮ-ನಿಬಂಧನೆಗಳನ್ನು ಪಾಲಿಸುತ್ತಿದೆಯೇ ಎಂಬುದನ್ನು ಪಾಲಿಕೆಯ ಇಂಜಿನಿಯರಿಂಗ್ ವಿಭಾಗವು ನಿಯಮಿತವಾಗಿ ಪರಿಶೀಲಿಸಬೇಕು. ಲೋಪದೋಷಗಳಿದ್ದರೆ ಮೇಲಧಿಕಾರಿಗಳಿಗೆ ವರದಿ ಮಾಡಿ ಕ್ರಮ ಕೈಗೊಳ್ಳಬೇಕು. ಸಮಸ್ಯೆಗಳ ಬಗ್ಗೆ ಆಯಾ ವಾರ್ಡ್‍ನ ಸದಸ್ಯರ ಗಮನಕ್ಕೂ ತರಬೇಕು.
 
       ಪ್ರಸ್ತುತ ಪಾಲಿಕೆಯ ಇಂಜಿನಿಯರಿಂಗ್ ವಿಭಾಗ ಈ ವಿಷಯದಲ್ಲಿ ವಿಫಲವಾಗಿದೆ ಹಾಗೂ ನಿರ್ಲಕ್ಷೃತನದಿಂದ ನಡೆದುಕೊಂಡಿದೆ. ಆಯಾ ವಾರ್ಡ್‍ಗಳ ಕಿರಿಯ ಇಂಜಿನಿಯರ್‍ರಿಂದ ಹಿಡಿದು ಆ ವಾರ್ಡ್ ಒಳಪಡುವ ಎಕ್ಸಿಕ್ಯುಟೀವ್ ಇಂಜಿನಿಯರ್‍ವರೆಗೂ ಯಾವೊಬ್ಬ ಇಂಜಿನಿಯರ್‍ಗಳೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ” ಎಂದು ಅವರು ಪಾಲಿಕೆಯ ಇಂಜಿನಿಯರಿಂಗ್ ಶಾಖೆಯ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಸ್ಮಾರ್ಟ್‍ಸಿಟಿ ಮತ್ತು ಪಾಲಿಕೆಗೆ ಐ.ಎ.ಎಸ್. ಅಧಿಕಾರಿ ಬೇಕು
       “ಸ್ಮಾರ್ಟ್‍ಸಿಟಿ ಕಂಪನಿ ಮೂಲಕ ಕೋಟ್ಯಂತರ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ಇದನ್ನು ಗಮನಿಸಲು ಮತ್ತು ನಿರ್ದಾಕ್ಷಿಣ್ಯವಾಗಿ ನಿರ್ವಹಣೆ ಮಾಡಲು ವ್ಯವಸ್ಥಾಪಕ ಹುದ್ದೆಗೆ ಓರ್ವ ಐ.ಎ.ಎಸ್. ಅಧಿಕಾರಿಯನ್ನೇ ಕಡ್ಡಾಯವಾಗಿ ನೇಮಿಸಬೇಕು. ಅದೇ ರೀತಿ ಮಹಾನಗರ ಪಾಲಿಕೆಯ ಆಡಳಿತ ಚುರುಕಾಗಿರಬೇಕಾದರೆ ಓರ್ವ ಐ.ಎ.ಎಸ್. ಅಧಿಕಾರಿಯೇ ಆಯುಕ್ತರಾಗಿ ಇರಬೇಕು. ಹೀಗಾದಾಗ ಮಾತ್ರ ಸ್ಮಾರ್ಟ್‍ಸಿಟಿ ಕಂಪನಿ ಮತ್ತು ಪಾಲಿಕೆಯು ಜಂಟಿಯಾಗಿ ಕ್ರಿಯಾಶೀಲವಾಗಲು ಸಾಧ್ಯವಾಗುತ್ತದೆ. ಊರಿಗೂ ಒಳ್ಳೆಯದಾಗುತ್ತದೆ” ಎಂದು ಜೆ.ಕುಮಾರ್ ತಮ್ಮ ಸ್ಪಷ್ಟ ಅನಿಸಿಕೆ ವ್ಯಕ್ತಪಡಿಸಿದರು.
     “ಸ್ಮಾರ್ಟ್‍ಸಿಟಿ ಕಂಪನಿ ಕಾಮಗಾರಿಗಳ ಬಗ್ಗೆ ನಾನು ಕಳೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿದ್ದೆ. ಆದರೆ ಆಗ ಸ್ಮಾರ್ಟ್‍ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಇಲ್ಲದಿದ್ದ ಕಾರಣ ಆ ವಿಷಯ ಚರ್ಚೆಗೊಳ್ಳದೆ ಮುಂದೂಡಲ್ಪಟ್ಟಿತು. ಇನ್ನೂ ಸಹ ವ್ಯವಸ್ಥಾಪಕ ನಿರ್ದೇಶಕರು ನಿಯುಕ್ತರಾಗಿಲ್ಲ. ಅತ್ತ ಸ್ಮಾರ್ಟ್‍ಸಿಟಿ ಕಂಪನಿಗೂ ಕ್ಯಾಪ್ಟನ್ ಇಲ್ಲ; ಇತ್ತ ಮಹಾನಗರ ಪಾಲಿಕೆಗೂ ಪೂರ್ಣಾವಧಿಯ ಆಯುಕ್ತರು ಇಲ್ಲ. ಇದರಿಂದ ತುಮಕೂರು ಜನತೆಗೆ ತೊಂದರೆ ಆಗುತ್ತಿದೆ” ಎಂದು ಜೆ.ಕುಮಾರ್ ಕಳವಳದಿಂದ ನುಡಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link