ಗುಬ್ಬಿ
ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಅಡಕೆ ಮತ್ತು ತೆಂಗಿನ ತೋಟಕ್ಕೂ ವ್ಯಾಪಿಸಿ, ತೋಟ ಸಂಪೂರ್ಣ ಭಸ್ಮವಾದ ಪ್ರಕರಣ ತಾಲ್ಲೂಕಿನ ಪತಿಯಪ್ಪನಪಾಳ್ಯ ಗ್ರಾಮದಲ್ಲಿ ನಡೆದಿದೆ.ಪತಿಯಪ್ಪನಪಾಳ್ಯ ಸಮೀಪದ ಪುರ ಅರಣ್ಯ ಪ್ರದೇಶಕ್ಕೆ ಅಂಟಿಕೊಂಡಿರುವ ಕೆಂಪರಾಜು ಎಂಬ ರೈತರ ತೋಟದಲ್ಲಿ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಗೆ 600 ಅಡಕೆ ಗಿಡಗಳು, 350 ತೆಂಗಿನ ಮರಗಳು ಸುಟ್ಟುಹೋಗಿವೆ.
ಫಲ ನೀಡುವ ಮರಗಳಿಗೆ ಸುಡುಬಿಸಿಲನಲ್ಲಿ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಹಬ್ಬಿಕೊಂಡಿದೆ. ಸುತ್ತಲಿನ ರೈತರ ಗಮನಕ್ಕೆ ಬರುವ ವೇಳೆಗೆ ತೋಟದಲ್ಲಿ ದಟ್ಟವಾದ ಬೆಂಕಿ ಮತ್ತು ಹೊಗೆ ಆವರಿಸಿತ್ತು. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ನಂತರ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಅಗ್ನಿಶಾಮಕ ದಳ ಬರುವ ವೇಳೆಗೆ ಅಡಕೆ ಮತ್ತು ತೆಂಗಿನ ಮರಗಳು ಸುಟ್ಟುಕರಕಲಾದವು.
ಈ ಜತೆಗೆ ಬಾಳೆಗಿಡಗಳು, ಹನಿನೀರಾವರಿಯ ಪೈಪ್‍ಲೈನ್ ಹಾಗೂ ಪಂಪ್‍ಮೋಟಾರ್ ಸ್ಟಾರ್ಟರ್ ಕೂಡಾ ಬೆಂಕಿಗೆ ಆಹುತಿಯಾಗಿದೆ . ಸುಮಾರು 7 ಲಕ್ಷ ರೂಗಳ ನಷ್ಟವಾಗಿದೆ. ಜೀವನಕ್ಕೆ ಆಧಾರವಾಗಿದ್ದ ತೋಟಕ್ಕೆ ಬೆಂಕಿ ಬಿದ್ದರೇ ನಮ್ಮ ಬದುಕು ಹೇಗೆ ನಡೆಸುವುದು ಎಂದು ಸಂತ್ರಸ್ತ ರೈತ ಕೆಂಪರಾಜು ಅಳಲು ತೋಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








