ಬೆಂಗಳೂರು
ಸಚಿವ ಸಂಪುಟ ವಿಸ್ತರಣೆ ನಂತರ ಖಾತೆ ಹಂಚಿಕೆ ಅಸಮಾಧಾನವನ್ನು ಪರಿಹರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಕೆಲ ಸಚಿವರಿಗೆ 2ನೇ ಬಾರಿ ಖಾತೆಗಳ ಮರು ಹಂಚಿಕೆ ಮಾಡಿದ್ದರೂ ಖಾತೆ ಕ್ಯಾತೆ ಇನ್ನೂ ಮುಗಿದಿಲ್ಲ.
ಅರಣ್ಯ ಸಚಿವ ಆನಂದ್ ಸಿಂಗ್ ಮತ್ತೆ ಖಾತೆ ಬದಲಾಯಿಸುವ ಬೇಡಿಕೆಯನ್ನು ಇಟ್ಟಿದ್ದಾರೆ. ನೂತನ ಸಚಿವರುಗಳ ಖಾತೆ ಹಂಚಿಕೆ ಸಂದರ್ಭದಲ್ಲಿ ಆನಂದ್ ಸಿಂಗ್‍ರವರಿಗೆ ಮೊದಲಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಅವರು ಆ ಖಾತೆಯನ್ನು ಒಪ್ಪದ ಕಾರಣ ಮರು ಹಂಚಿಕೆಯಲ್ಲಿ ಅರಣ್ಯ, ಪರಿಸರ ಖಾತೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದರು.
ಈಗ ಆನಂದ್ ಸಿಂಗ್ ಅರಣ್ಯ ಖಾತೆ ಬೇಡ, ಇಂಧನ ಖಾತೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಇದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಲೆನೋವು ತಂದಿದೆ.
ಆನಂದ್ ಸಿಂಗ್ ಅವರಿಗೆ ಖಾತೆ ಬದಲಾಯಿಸಿದರೆ ಉಳಿದ ಸಚಿವರುಗಳು ಖಾತೆ ಬದಲಾವಣೆಗೆ ಪಟ್ಟು ಹಿಡಿಯುತ್ತಾರೆ ಇದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆ ಎಂಬುದು ಮುಖ್ಯಮಂತ್ರಿಗಳ ಚಿಂತೆಯಾಗಿದೆ.ಆದರೆ ಇದ್ಯಾವುದನ್ನೂ ಲೆಕ್ಕಿಸದ ಸಚಿವ ಆನಂದ್‍ಸಿಂಗ್ ಖಾತೆ ಬದಲಾವಣೆ ಮಾಡಿ ಎಂದು ಮನವಿ ಮಾಡಿದ್ದಾರೆ. 2 ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದ ಆನಂದ್‍ಸಿಂಗ್, ಅರಣ್ಯಖಾತೆ ಬೇಡ ಇಂಧನ ಖಾತೆ ನೀಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಚಿವ ಆನಂದ್‍ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಈ ಹಿಂದೆ ಆನಂದ್‍ಸಿಂಗ್ ಅವರು ಅರಣ್ಯ ಕಾಯ್ದೆ ಉಲ್ಲಂಘಿಸಿದ್ದರು. ಅವರಿಗೆ ಅರಣ್ಯ ಖಾತೆ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಚಿವ ಆನಂದ್ ಸಿಂಗ್ ಖಾತೆ ಬದಲಾವಣೆ ಬಯಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.ಸಚಿವ ಆನಂದ್ ಸಿಂಗ್ ಅವರ ಮನವಿಗೆ ಮುಖ್ಯಮಂತ್ರಿಗಳು ಒಪ್ಪುವ ಸಾದ್ಯತೆ ಇದ್ದು, ಅವರಿಗೆ ಖಾತೆ ಬದಲಾವಣೆ ಆಗುವ ಸಾಧ್ಯತೆಗಳಿವೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ