ಸಂಪಾದಕೀಯ :
ಆರ್.ಬಿ.ಐ. ಮತ್ತು ಕೇಂದ್ರ ಸರ್ಕಾರ ಘೋಷಿಸಿದ್ದ ಸಾಲ ಮರು ಪಾವತಿ ರಿಲೀಫ್ (ಮಾರಟೋರಿಯಂ) ಅವಧಿ ಆಗಸ್ಟ್ 31ಕ್ಕೆ ಅಂತ್ಯಗೊಳ್ಳಲಿದೆ. ಸೆ.1 ರಿಂದ ಇ.ಎಂ.ಐ. ಪಾವತಿ ಆರಂಭವಾಗಲಿದೆ. ಕೊರೊನಾ ಲಾಕ್‍ಡೌನ್ ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಜನತೆ ಈಗಷ್ಟೇ ಕೊಂಚ ಉಸಿರಾಡುವ ಪ್ರಯತ್ನದಲ್ಲಿದ್ದಾರೆ. ಇದರ ನಡುವೆಯೇ ಸಾಲು ಸಾಲು ಖರ್ಚುವೆಚ್ಚಗಳಿಗೆ ಹಣ ಹೊಂದಿಸುವ ಸವಾಲಿಗೆ ಸನ್ನದ್ಧರಾಗಬೇಕಾದ ಪರಿಸ್ಥಿತಿ ಉಂಟಾಗಿದೆ.
ಲಾಕ್‍ಡೌನ್ ಸಂಕಷ್ಟಕ್ಕೆ ಪರಿಹಾರವೆಂಬಂತೆ ಮೂರು ತಿಂಗಳ ವಿಸ್ತರಣೆ ಮಾಡಲಾಗಿತ್ತು. ಮಾರ್ಚ್,ಏಪ್ರಿಲ್, ಮೇ ತಿಂಗಳ ಮೊದಲ ಕಂತು, ಜೂನ್, ಜುಲೈ, ಆಗಸ್ಟ್ ತಿಂಗಳ ಎರಡನೇ ಕಂತಿನವರೆಗೆ ತಮ್ಮ ಸಾಲಗಳ ಕಂತನ್ನು ಮುಂದೂಡುವ ವ್ಯವಸ್ಥೆಯನ್ನು ಘೋಷಿಸಿ ಸರ್ಕಾರವೇನೋ ಕೈತೊಳೆದುಕೊಂಡು ಬಿಟ್ಟಿತು. ಆದರೆ ಇದನ್ನು ನಿಭಾಯಿಸುವ ಹೊಣೆಗಾರಿಕೆ ಈಗ ಜನರ ಮೇಲೆಯೇ ಬಿದ್ದಿದೆ. ಸೆಪ್ಟೆಂಬರ್ 1 ರಿಂದ ಯಥಾಸ್ಥಿತಿ ಕಂತು ಕಟ್ಟುವ ಅನಿವಾರ್ಯತೆ ಸಾಲ ಪಡೆದವರಲ್ಲಿದೆ. ಈ ಸವಲತ್ತಿನ ಅನುಕೂಲ ಪಡೆದ ಎಷ್ಟೋ ಸಾಲಗಾರರಿಗೆ ಮುಂದಿನ ಪರಿಣಾಮಗಳ ಅರಿವೇ ಇಲ್ಲ.
ಉದಾಹರಣೆಗೆ ಪ್ರತಿ ತಿಂಗಳು 50 ಸಾವಿರ ರೂ.ಗಳಂತೆ ತಮ್ಮ ಸಾಲದ ಕಂತನ್ನು ಪಾವತಿಸುತ್ತಿರುವ ಸಾಲಗಾರರು ಈ ಆರು ತಿಂಗಳಲ್ಲಿ 3 ಲಕ್ಷಗಳವರೆಗೆ ಕಂತು ಪಾವತಿಸದೆ ಉಳಿಸಿಕೊಂಡು ಮುಂಬರುವ ದಿನಗಳಲ್ಲಿ ಪಾವತಿಸದ ಈ ಹಣವನ್ನು ತಮ್ಮ ಮೂಲ ಸಾಲಕ್ಕೆ ಸೇರಿಸಿ ಅದರ ಮೇಲೂ ಬಡ್ಡಿ ಹೇರಿ, ಸುಸ್ತಿ ಬಡ್ಡಿ ರೂಪದಲ್ಲಿ ವಸೂಲಿ ಮಾಡುವ ವ್ಯವಸ್ಥೆ ಇದಾಗಿದೆ.
ಈ ನೀತಿಯ ವಿರುದ್ಧ ಕೆಲವರು ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದಾರೆ. ಸುಪ್ರೀಂಕೋರ್ಟ್ ಸಹ ಸರ್ಕಾರದ ಈ ಅವ್ಯವಸ್ಥೆಯ ನೀತಿಯನ್ನು ಕಟುವಾಗಿಯೇ ಟೀಕಿಸಿದೆ. ಸಾಲದ ಇಎಂಐ ಪಾವತಿಯನ್ನು ಮುಂದೂಡಿರುವ ಅವಧಿಗೆ ಸಾಲದ ಮೇಲಿನ ಬಡ್ಡಿಯನ್ನು ವಸೂಲಿ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈವರೆಗೆ ಯಾವುದೇ ನಿಲುವನ್ನು ಸ್ಪಷ್ಟಪಡಿಸಿಲ್ಲ. ಇದೇ ವಿಷಯಕ್ಕೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.
ಅಲ್ಲದೆ, ಸೆಪ್ಟೆಂಬರ್ 1 ರೊಳಗೆ ತನ್ನ ನಿಲುವು ಸ್ಪಷ್ಟಪಡಿಸುವಂತೆಯೂ ತಿಳಿಸಿದೆ. ಲಾಕ್‍ಡೌನ್ ಘೋಷಿಸಿದ್ದು ನೀವು, ಈಗ ಆರ್.ಬಿ.ಐ.ನತ್ತ ಬೊಟ್ಟು ಮಾಡಿ ಅದರ ಹಿಂದೆ ಅವಿತುಕೊಳ್ಳಬೇಡಿ ಎಂದು ಖಾರವಾಗಿಯೇ ಪ್ರಶ್ನಿಸಿದೆ. ಬ್ಯಾಂಕುಗಳಿಗೆ ಹೊರೆ ಎಂಬ ಆರ್.ಬಿ.ಐ. ಹೇಳಿಕೆಯನ್ನೇ ನೀವು ಪುನರಾವರ್ತಿಸಬೇಡಿ. ಕೇವಲ ವ್ಯವಹಾರಿಕ ಹಿತಾಸಕ್ತಿಯನ್ನು ಮಾತ್ರ ಪರಿಗಣಿಸುವ ಸಮಯ ಇದಲ್ಲ, ಜನರ ಸಮಸ್ಯೆಯನ್ನೂ ಮನಗಾಣಬೇಕು ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ. ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಏನು ಹೇಳಲಿದೆ ಎಂಬುದು ಈಗ ಕುತೂಹಲ ಹುಟ್ಟಿಸಿದೆ.
ಏಕೆಂದರೆ ತನ್ನ ಮುಂದಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇನ್ನೂ ವಿಲೇವಾರಿ ಮಾಡಿಲ್ಲ. ಜೊತೆಗೆ ಮಾರಟೋರಿಯಂ ವಿಸ್ತರಿಸುವಂತೆ ಕೋರಿರುವ ಅರ್ಜಿ ಸಹ ಸುಪ್ರೀಂಕೋರ್ಟ್ ಮುಂದಿದೆ.ಲಾಕ್‍ಡೌನ್ ಸಂಕಷ್ಟದಲ್ಲಿ ಸರ್ಕಾರ ವಿಧಿಸಿದ ಎಲ್ಲ ನೀತಿ ನಿಬಂಧನೆಗಳನ್ನು ಜನ ಪಾಲಿಸುತ್ತಾ ಬಂದರು. ಕೋವಿಡ್ ಮಹಾಮಾರಿಗೆ ಬೆಚ್ಚಿದ ಸಂದರ್ಭದಲ್ಲಿ ಸರ್ಕಾರ ನಮ್ಮೊಂದಿಗಿದೆ ಎಂಬ ಭರವಸೆ ಈ ರಾಷ್ಟ್ರದ ಜನತೆಯ ಮನಸ್ಸಿನಲ್ಲಿತ್ತು. ಈ ಭಾವನೆಯಿಂದಲೇ ಲಾಕ್‍ಡೌನ್ ಅಪ್ಪಣೆಯನ್ನು ಚಾಚೂ ತಪ್ಪದೆ ಪಾಲಿಸಿದರು. ಸರ್ಕಾರದಿಂದ ಏನೋ ಒಂದು ಪರಿಹಾರ/ ನಿರಾಳತೆ ಸಿಗಬಹುದು ಎಂಬ ಆಶಾವಾದವಂತೂ ಇದ್ದೇ ಇದೆ.
ಹೀಗಿರುವಾಗ ಅವಧಿ ಮುಕ್ತಾಯಗೊಂಡ ನಂತರದ ನಿಯಮಗಳು ಜಾರಿಯಾದರೆ ಸಾಮಾನ್ಯ ಜನರು ತತ್ತರಿಸಿ ಹೋಗುವ ಪರಿಸ್ಥಿತಿ ಎದುರಾಗಲಿದೆ. ಇದು ಈಗಾಗಲೇ ಇರುವ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಲಿದೆ. ಪ್ರಸ್ತುತ ಬಡ್ಡಿ ವಿನಾಯಿತಿಗೆ ಆರ್.ಬಿ.ಐ. ಮತ್ತು ಕೇಂದ್ರ ಸರ್ಕಾರ ಒಪ್ಪದ ಕಾರಣ ವಿನಾಯಿತಿ (ಮಾರಿಟೋರಿಯಂ) ಅವಧಿಯ ಇಎಂಐ ಜೊತೆಯಲ್ಲಿ ಬಡ್ಡಿಗೆ ಚಕ್ರಬಡ್ಡಿಯನ್ನು ಗ್ರಾಹಕರೇ ಭರಿಸಬೇಕು ಇಎಂಐ ಮೊತ್ತ ಏರಿಕೆಯಾಗದಿದ್ದರೂ ಕಂತಿನ ಅವಧಿ ಸುಧೀರ್ಘವಾಗಲಿದೆ.
ಇನ್ನು ಕೇಂದ್ರ ಸರ್ಕಾರದ ಹೊಣೆಗಾರಿಕೆ ವಿಷಯಕ್ಕೆ ಬಂದಾಗ ರಾಜ್ಯಗಳಿಗೆ ನಿಯಮ ಬದ್ಧವಾಗಿ ನೀಡಬೇಕಾದ ಜಿ.ಎಸ್.ಟಿ. ಪಾಲನ್ನೇ ನೀಡದೆ ಸತಾಯಿಸುತ್ತಿರುವುದು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ನುಂಗಲಾರದ ತುತ್ತಾಗಿದೆ. ಆದರೂ ಈ ಅಸಮಾಧಾನವನ್ನು ಕೆಲವು ರಾಜ್ಯಗಳು ಹೊರ ಹಾಕುತ್ತಲೇ ಇವೆ. ರಾಜ್ಯಕ್ಕೆ ಬರಬೇಕಿರುವ ಬಾಕಿ ಜಿ.ಎಸ್.ಟಿ. ಬಾರದಿರುವ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳ ಮೇಲೆ ಹೊಡೆತ ಬಿದ್ದಿರುವ ಬಗ್ಗೆ ಇತ್ತೀಚೆಗಷ್ಟೇ ರಾಜ್ಯದ ಗೃಹ ಸಚಿವರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಒಂದು ಕಡೆ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಸರ್ಕಾರಗಳು ಹೆಣಗಾಡುತ್ತಿವೆ. ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳು ಕೇಂದ್ರದ ನಿರ್ಧಾರ ಮತ್ತು ಸಹಕಾರವನ್ನು ನಿರೀಕ್ಷಿಸಿ ಕಾಯುತ್ತಿವೆ. ಈ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ಪರಿಣಾಮದಿಂದಾಗಿ ಜಿ.ಎಸ್.ಟಿ. ಸಂಗ್ರಹದಲ್ಲಿ 2020-21 ರ ಅವಧಿಗೆ ಎರಡೂವರೆ ಲಕ್ಷ ಕೋಟಿ ಕೊರತೆಯಾಗಿದ್ದು, ಇದು ಭಗವಂತನ ಆಟ ಎಂಬ ಹೇಳಿಕೆ ನೀಡಿರುವುದು ನಗೆಪಾಟಲಿಗೆ ಈಡಾಗಿದೆ. ರಾಜ್ಯದ ಪಾಲು ಜಿ.ಎಸ್.ಟಿಯನ್ನು ಆರ್.ಬಿ.ಐ.ನಿಂದ ಸಾಲ ಪಡೆಯಬಹುದು ಎಂದು ರಾಜ್ಯಗಳಿಗೆ ನಿರ್ಮಲಾ ಸೀತಾರಾಮನ್ ಹೇಳಿರುವುದು ಸಾಕಷ್ಟು ಚರ್ಚೆಗಳಿಗೂ ಗ್ರಾಸವಾಗಿದೆ.
ಸರ್ಕಾರದ ಆದಾಯಕ್ಕಷ್ಟೇ ಕೊರತೆ ಉಂಟಾಗಿಲ್ಲ. ಸಾರ್ವಜನಿಕ ವಲಯವೂ ಆರ್ಥಿಕ ನಷ್ಟ ಅನುಭವಿಸುತ್ತಿದೆ. ಹೀಗಿರುವಾಗ ಭಗವಂತನ ಕ್ರಿಯೆ ಎಂದು ಹೇಳಿ ಸರ್ಕಾರದಂತೆಯೇ ಸಾರ್ವಜನಿಕ ವಲಯವನ್ನೂ ಪರಿಗಣಿಸಬಹುದಲ್ಲವೆ? ಸರ್ಕಾರಕ್ಕೊಂದು ನೀತಿ, ಸಾರ್ವಜನಿಕರಿಗೊಂದು ಭಗವಂತನ ನೀತಿಯೇ? ಸಾರ್ವಜನಿಕರ ಬದ್ಧತೆಯ ಬಗ್ಗೆ ಬೋಧಿಸುವ ಸರ್ಕಾರಕ್ಕೂ ಈ ಹೇಳಿಕೆ ಅನ್ವಯವಾಗುವುದು ಸರಿಯಲ್ಲವೆ? ಈ ನಿಲುವನ್ನು ಸರ್ಕಾರ ಒಪ್ಪಿ ಮಾರಿಟೋರಿಯಂ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಮನ್ನಿಸಬಹುದಲ್ಲವೆ?
ಈವರೆಗೆ ಎಂದೂ ಎದುರಾಗದಂತಹ ಕ್ಲಿಷ್ಟ ಪರಿಸ್ಥಿತಿಗೆ ಉದ್ದಿಮೆದಾರರು ಸಿಲುಕಿಕೊಂಡಿದ್ದಾರೆ. ಯಥಾ ಪ್ರಕಾರ ತೆರಿಗೆ ಪಾವತಿಸಿಕೊಂಡು ಬಂದಿರುವ ಬಹಳಷ್ಟು ಉದ್ದಿಮೆದಾರರಿಗೆ ಹೊಡೆತ ಬಿದ್ದಿರುವ ಕಾರಣ ಪ್ರತಿಶತ ತೆರಿಗೆ ಸಂಗ್ರಹ ಖೋತಾ ಆಗಿರುವುದು ನಿಜ. ಈ ರೀತಿಯಲ್ಲಿಯೇ ಸಾರ್ವಜನಿಕರೂ ಸಹ ವ್ಯಾಪಾರ ವಹಿವಾಟು ಇಲ್ಲದೆ ಅವರ ಆದಾಯ ಕಡಿತವಾಗಿರುವುದು ಅಷ್ಟೇ ಸತ್ಯ. ಹೀಗೆ ಒಂದಲ್ಲಾ ಒಂದು ವಿಧದಲ್ಲಿ ಸಾರ್ವಜನಿಕರು, ಉದ್ದಿಮೆದಾರರು ಸಂಕಷ್ಟಗಳ ಸರಮಾಲೆಯಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ಇಂತಹವರಿಗೆಲ್ಲ ಒಂದು ಸಣ್ಣ ಬೆಳಕಿನ ಕಿಂಡಿಯೂ ಬಹುದೊಡ್ಡ ಆಶಾಕಿರಣವಾಗಲಿದೆ.
ಅಂತಹ ನಿರೀಕ್ಷೆಗಳಲ್ಲಿಯೇ ಬದುಕುತ್ತಿದ್ದಾರೆ. ಪರಿಸ್ಥಿತಿ ಆಧರಿಸಿ ಬ್ಯಾಂಕುಗಳಲ್ಲಿ ಪಡೆದ ಸಾಲದ ಮೊತ್ತಕ್ಕೆ ನೀಡಿದ ಮಾಡಿಟೋರಿಯಂ ಅವಧಿಗೆ ತಗಲುವ ಬಡ್ಡಿ ಮನ್ನಾ ಮಾಡಿ ಒಂದಷ್ಟು ಉಸಿರಾಡಲು ಅವಕಾಶ ಮಾಡಿಕೊಟ್ಟರೆ ಸಾಕು ಎಂಬ ನಿರೀಕ್ಷೆಯಲ್ಲಿರುವವರೇ ಅಧಿಕ. ಸರ್ಕಾರ ನಮ್ಮ ಕೈಬಿಡುವುದಿಲ್ಲ ಎಂಬ ಭರವಸೆಯಲ್ಲಿಯೇ ಬದುಕುತ್ತಿರುವವರಿಗೆ ಒಂದಷ್ಟು ಸಮಾಧಾನ ಸಿಗುವಂತಹ ನಿರ್ಧಾರಗಳು ಸರ್ಕಾರದಿಂದ ಪ್ರಕಟವಾಗಬಹುದೆ..? ಕಾದು ನೋಡಬೇಕು.
ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ಇನ್ನಿಲ್ಲದ ಕ್ರಮಗಳನ್ನು ಕೈಗೊಂಡಿತಾದರೂ ಸಮುದಾಯಕ್ಕೆ ವೈರಸ್ ಹರಡುವುದನ್ನು ತಪ್ಪಿಸಲಾಗಲಿಲ್ಲ. ಕೊರೊನಾ ವೈರಾಣುವಿನೊಂದಿಗೆ ಬದುಕು ಅನಿವಾರ್ಯ ಎಂದು ಹೇಳಿ ಸರ್ಕಾರವೇನೋ ಕೈತೊಳೆದುಕೊಂಡಿತು. ಆದರೆ ಇಷ್ಟು ದಿನಗಳ ಕಾಲ ಕೊರೊನಾ ಭೀತಿಯಲ್ಲಿದ್ದ ಜನರಿಗೆ ಈಗ ಮತ್ತಷ್ಟು ಸಂಕಟಗಳು ಎದುರಾಗುತ್ತಿವೆ. ಶಾಲೆಗಳು ಆರಂಭವಾಗುವ ಸಮಯ, ಶಾಲಾ ಶುಲ್ಕ ಸೇರಿದಂತೆ ಹಲವು ವೆಚ್ಚಗಳನ್ನು ನಿಭಾಯಿಸಬೇಕು. ಈ ನಡುವೆ ಮುಂದೂಡಲ್ಪಟ್ಟಿದ್ದ ಕಂತುಗಳ ಹಣ ಒದಗಿಸಬೇಕು. ತಿಂಗಳ ಆದಾಯ, ವ್ಯವಹಾರದ ಆದಾಯ ಇನ್ನೂ ಸರಿದಾರಿಗೆ ಬಂದಿಲ್ಲವಾದ್ದರಿಂದ ಬಹಳಷ್ಟು ಜನರಿಗೆ ತಲೆನೋವು ಬರುವುದಂತೂ ಸತ್ಯ.
-ಟಿ.ಎನ್ ಮಧುಕರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ