ಪ್ರವಾಹ: ಶ್ರೀಗಳ ಶ್ರದ್ಧಾಂಜಲಿ ಒಂದೇ ದಿನ

ದಾವಣಗೆರೆ

     ರಾಜ್ಯದಲ್ಲಿ ಪ್ರವಾಹ ಬಂದು ಹಲವು ಜಿಲ್ಲೆಗಳಲ್ಲಿ ಜನರ ಬದುಕು ತೊಂದರೆಗೆ ಈಡಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗೈಕ್ಯ ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆರು ದಿನಗಳ ಬದಲು, ಒಂದೇ ದಿನ ಮಾಡಲು ನಿರ್ಧರಿಸಲಾಗಿದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

    ಇದೇ ಸೆಪ್ಟೆಂಬರ್ 24ರಂದು ಸಿರಿಗೆರೆಯಲ್ಲಿ ಆಯೋಜಿಸಿರುವ ಲಿಂಗೈಕ್ಯ ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ 27ನೇ ಶ್ರದ್ಧಾಂಜಲಿ ಸಮಾರಂಭಕ್ಕಾಗಿ, ಬುಧವಾರ ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಭಾಂಗಣದಲ್ಲಿ ನಡೆದ ಅಕ್ಕಿ ಮತ್ತು ಭಕ್ತಿ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

      ಶಿವಕುಮಾರ ಸ್ವಾಮೀಜಿಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹಿಂದೆ ಮಠದಿಂದ ದೇಣಿಗೆ ಸಂಗ್ರಹಿಸಲು ಹೋಗಲಾಗುತ್ತಿತ್ತು. ಆದರೆ ಈಗ ಭಕ್ತರೇ ಸೇವಾ ಭಾವನೆಯಿಂದ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾದಾಗ ನೆರೆ ಸಂತ್ರಸ್ತರಿಗೆ ಹೇಗೆ ನೆರವಾಗಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಲು ಸಿರಿಗೆರೆಯಲ್ಲಿ ರಾತ್ರಿಯೇ ಸಭೆ ಸೇರಲಾಯಿತು. ಆಕ್ಷಣಕ್ಕೆ ಜನರು ಎರಡೂವರೆ ಸಾವಿರ ಜನರಿಗೆ ಬಟ್ಟೆ-ಬರೆ ಹಾಗೂ ತಾಯಿಂದಿರು ಹದಿನೈದು ಸಾವಿರ ರೊಟ್ಟಿ ತಂದು ಇಟ್ಟಿದ್ದರು. ಧರ್ಮ ಎಂದರೆ ಬರೀ ಭಾಷಣವಲ್ಲ, ಧರ್ಮ ಅಂದರೆ ಮಾನವೀಯತೆ ಎಂದು ವಿಶ್ಲೇಷಿಸಿದ ಶ್ರೀಗಳು, ಇನ್ನೊಬ್ಬರ ಸಂಕಟಕ್ಕೆ ಮರಗುವುದೇ ನಿಜವಾದ ಧರ್ಮವಾಗಿದೆ. ಅದನ್ನು ನಮ್ಮ ಜನ ತೋರಿಸಿದ್ದರು ಎಂದು ಶ್ಲಾಘಿಸಿದರು.

      ರಾಜ್ಯದಲ್ಲಿ ಒಂದು ಕಡೆ ಪ್ರವಾಹ, ಇನ್ನೊಂದು ಕಡೆ ಬರ ಇದೆ. ಈ ರೀತಿ ಆಗದಂತೆ ಸರ್ಕಾರ ಸರಿದೂಗಿಸಿಕೊಂಡು ಹೋಗುವ ಯೋಜನೆಗಳನ್ನು ಜಾರಿಗೆ ತರಬೇಕಾದ ಅವಶ್ಯಕತೆ ಇದೆ. ನೀರಿಗೆ ಬರ ಇರುವ ಪ್ರದೇಶಗಳಿಗೆ ನೀರು ಹೆಚ್ಚಿರುವ ಪ್ರದೇಶಗಳಿಂದ ನೀರು ಹರಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕಾಗಿದೆ ಎಂದ ಅವರು, ವಿದ್ಯುತ್ ಹಾಗೂ ನೀರು ಸರಿಯಾಗಿ ಸಿಕ್ಕರೇ, ರೈತರು ಸರ್ಕಾರದಿಂದ ಸಾಲ ಮನ್ನಾ ಸೇರಿದಂತೆ ಬೇರೆ ಏನನ್ನೂ ಕೇಳುವುದಿಲ್ಲ. ಹೀಗಾಗಿ ಇವೆಡರನ್ನು ಕಲ್ಪಿಸುವುದು ಸರ್ಕಾರದ ಮೊದಲ ಆದ್ಯತೆ ಆಗಬೇಕೆಂದು ಪ್ರತಿಪಾದಿಸಿದರು.

       ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆಗಾಗಿ ಜಗಳೂರು ತಾಲೂಕಿಗೆ 660 ಕೋಟಿ ರೂ., ಚಿತ್ರದುರ್ಗ ಜಿಲ್ಲೆಯವ ಭರಮಸಾಗರಕ್ಕೆ 1500 ಕೋಟಿ ವೆಚ್ಚದ ಯೋಜನೆಗಳನ್ನು ತಯಾರಿಸಿ, ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗಿತ್ತು. ಇವುಗಳನ್ನು ಮಂಜೂರು ಮಾಡಿಸಲು ಎರಡು ವರ್ಷಗಳ ಹೋರಾಟ ಮಾಡಲಾಗಿತ್ತು. ಆದರೆ, ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಗಳೂರು ಯೋಜನೆಗೆ 250 ಕೋಟಿ ರೂಪಾಯಿಗಳಿಗೆ ಅನುದಾನ ಸೀಮಿತಗೊಳಿಸಿ ಅನುಮೋದನೆ ನೀಡಿದ್ದರು. ಹೀಗಾಗಿ ಮತ್ತೆ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ, ಆ ಆದೇಶವನ್ನು ರದ್ದು ಪಡಿಸಲಾಯಿತು. ಆದ್ದರಿಂದ ಜಗಳೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 660 ಕೋಟಿ ರೂ, ಭರಮಸಾಗರದ ಯೋಜನೆಗೆ 520 ಕೋಟಿ ರೂ. ಮಂಜೂರಾಗಿದೆ ಎಂದು ಅವರು ವಿವರಿಸಿದರು.

      ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಲಿಂಗೈಕ್ಯ ಶಿವಕುಮಾರ ಸ್ವಾಮಿಗಳು ನಮಗೆಲ್ಲರಿಗೂ ಶಕ್ತಿ, ಧೈರ್ಯ ತುಂಬಿದವರು. ದುಡಿಮೆ ಮಾಡುವುದನ್ನು ಕಲಿಸಿಕೊಟ್ಟವರು. ಕೃಷಿಯ ಜೊತೆಗೆ ಬೇರೆ ಬೇರೆ ವೃತ್ತಿ, ವ್ಯಾಪಾರ ಮಾಡಲು ಪ್ರೇರಣೆ ಕೊಟ್ಟವರಾಗಿದ್ದಾರೆ. ಶಾಲೆ, ಕಾಲೇಜು ಸ್ಥಾಪನೆ ಮಾಡಿ ಜ್ಞಾನ ದಾಸೋಹವನ್ನು ಉಣ ಬಡಿಸಿದವರಾಗಿದ್ದಾರೆ. ಇಂತಹವರ ಕಾರ್ಯಕ್ರಮಕ್ಕೆ ದೇಣಿಗೆ ಕೊಟ್ಟು ಸಹಕರಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ಎಪಿಎಂಸಿ ದಲ್ಲಾಲರ ಸಂಘದ ಅಧ್ಯಕ್ಷ ಜಿ.ಎಸ್.ಪರಮೇಶ್ವರ ಗೌಡ್ರು, ಈ ಹಿಂದೆ ಭಕ್ತಿ ಸಮರ್ಪಣೆ ಕಾರ್ಯಕ್ರಮ ಹೊನ್ನಾಳಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಮೂರನೇ ವರ್ಷ ದಾವಣಗೆರೆಯಲ್ಲಿ ಭಕ್ತಿ ಸಮರ್ಪಣೆ ನಡೆಯುತ್ತಿದೆ. ಲಿಂಗೈಕ್ಯ ಸ್ವಾಮಿಗಳು ದೈಹಿಕವಾಗಿ ದೂರವಾಗಿದ್ದರೂ, ಸದಾ ನಮ್ಮೊಂದಿಗಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಾಣುತ್ತಾ ಎಲ್ಲ ಜಾತಿ ಜನರ ಗೌರವಕ್ಕೆ ಪಾತ್ರರಾಗಿದ್ದರು. ಸಮಾಜದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದವರು ಎಂದು ಸ್ಮರಿಸಿದರು.

    ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಡಿ.ಮಹೇಶ್ವರಪ್ಪ, ಉಪಾಧ್ಯಕ್ಷ ಬಿ.ಎಸ್.ಶಿವಳ್ಳಿ, ಡಾ.ಮಂಜುನಾಥಗೌಡ, ಮುದೇಗೌಡ್ರ ಗಿರೀಶ್ ಮತ್ತಿತರರು ಹಾಜರಿದ್ದರು.

Recent Articles

spot_img

Related Stories

Share via
Copy link