ದಾವಣಗೆರೆ:
ರೈತರಿಗೆ ಹೊಸ ಸಾಲ ನೀಡುವ ಬಗ್ಗೆ ಇನ್ನೂ ಎರಡು ದಿನಗಳಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದ ಎಪಿಎಂಸಿಗೆ ಶನಿವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಹೊಸ ಸಾಲ ನೀಡುವ ಬಗ್ಗೆ ಸರ್ಕಾರ ನಿರ್ಧರಿಸಿದ್ದು, ಇನ್ನು ಎರಡು ದಿನಗಳಲ್ಲೇ ಆದೇಶ ಹೊರ ಬೀಳಲಿದೆ ಎಂದು ಹೇಳಿದರು.ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಸಾಲ ಮನ್ನಾಕ್ಕಾಗಿ ರಾಜ್ಯದಲ್ಲಿ 29,800 ಅರ್ಜಿ ಇದ್ದು, ಈ ಪೈಕಿ 14,629 ಅರ್ಜಿ ವಿಲೇವಾರಿ ಆಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಸಾಲ ಮನ್ನಾ ವಿಚಾರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆಗೆ ಸಭೆ ನಡೆಸಲಿದ್ದೇವೆ. ಖಾಸಗಿ ಹಣಕಾಸು ಸಂಸ್ಥೆಗಳು ರೈತರಿಗೆ ನೋಟೀಸ್ ನೀಡುವಂತಿಲ್ಲ. ಸಾಲ ವಸೂಲು ಮಾಡುವಂತಿಲ್ಲ. ಟ್ರ್ಯಾಕ್ಟರ್ ಸೇರಿದಂತೆ ವಾಹನಗಳನ್ನು ಜಪ್ತು ಮಾಡುವಂತಿಲ್ಲ. ಈ ಬಗ್ಗೆ ಹಣಕಾಸು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಿಎಂ ಮಾತುಕತೆ ನಡೆಸಿ, ಸುತ್ತೋಲೆ ಹೊರಡಿಸಲಿದ್ದಾರೆ. ಮೂರು ತಿಂಗಳ ಕಾಲ ಸಾಲ ವಸೂಲಿ ಮಾಡದಂತೆ ಖಾಸಗಿ ಕಂಪನಿಗಳು, ಹಣಕಾಸು ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಮಾಹಿತಿ ನೀಡಿದರು.
ಕೊರೋನಾಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಈ ಸ್ಥಿತಿಯಲ್ಲಿ ರಾಜ್ಯದ ಎಲ್ಲಾ ಎಪಿಎಂಸಿಗಳಿಗೂ ಭೇಟಿ ನೀಡುತ್ತಿದ್ದೇನೆ. ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಯಾವುದೇ ತೊಂದರೆ ಆಗದಂತೆ ಸೂಚನೆ ಸಹ ನೀಡಿದ್ದೇನೆ ಎಂದರು.
ಮೈಸೂರು ಜಿಲ್ಲೆಯಿಂದ 88 ಜನರು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿದ್ದರು. ಈ ಪೈಕಿ 8 ಜನರಲ್ಲಿ ಸೋಂಕು ದೃಢಪಟ್ಟಿದೆ ಹಾಗೂ ನಂಜನಗೂಡಿನ ಜುಬಿಲಿಯೆಂಟ್‍ಲ್ಲಿ ಕೊರೋನಾ ಸೋಂಕು ಹರಿಡಿದೆ. ಈ ಎರಡು ಘಟನೆ ಬಿಟ್ಟರೆ ವಿದೇಶದಿಂದ ಬಂದ ನಾಲ್ವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ ಎಂದರು.
ಇಡೀ ನಂಜನಗೂಡು ಲಾಕ್‍ಡೌನ್ ಆಗಿದ್ದು, ಇಡೀ ಮೈಸೂರು ಜಿಲ್ಲಾದ್ಯಂತ ನಗರ, ಪಟ್ಟಣ, ಗ್ರಾಮೀಣ ಪ್ರದೇಶ ಎನ್ನದೇ ಎಲ್ಲೆಡೆ ಬಿಗಿ ಕ್ರಮಗಳನ್ನು ಕೈಗೊಂಡಿದ್ದೇವೆ. ಮೈಸೂರು ಸೇರಿದಂತೆ ಇಡೀ ರಾಜ್ಯ, ರಾಷ್ಟ್ರಾದ್ಯಂತ ಕೊರೋನಾಸೋಂಕು ನಿರ್ಮೂಲನೆ, ನಿಯಂತ್ರಣಕ್ಕೆ ಸರ್ಕಾರ ಒತ್ತು ನೀಡಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ತಹಸೀಲ್ದಾರ್ ಗಿರೀಶ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ