ಪರಮೇಶ್ವರ್ ಔತಣಕೂಟಕ್ಕೆ ಅತೃಪ್ತರು ಬರುವುದು ಡೌಟ್…!!!

ಬೆಂಗಳೂರು

      ಜಂಟಿ ಅಧಿವೇಶನದ ದಿನ ಸಂಜೆ ಖಾಸಗಿ ಹೋಟೆಲ್ ನಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕರೆದಿರುವ ಮೈತ್ರಿ ಸರ್ಕಾರದ ಶಾಸಕರ ಔತಣಕೂಟಕ್ಕೆ ಅತೃಪ್ತ ಕೈ ಶಾಸಕರು ಗೈರಾಗುವ ಸಾಧ್ಯತೆ ಹೆಚ್ಚಾಗಿದೆ.

     ಇದು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದೆ. ಅದಾಗಲೇ ಪಕ್ಷದ ನಾಯಕರಿಗೆ ಪತ್ರ ಬರೆದು ನಾವು ಪಕ್ಷದ ಜತೆ ಇದ್ದೇವೆ ಎಂದು ಹೇಳಿಕೊಂಡಿದ್ದರೂ, ಶಾಸಕರಾದ ನಾಗೇಂದ್ರ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಡಾ. ಉಮೇಶ್ ಜಿ. ಜಾದವ್ ಇನ್ನೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದರ ಜತೆ ಇವರ ಬೆಂಬಲಿಗ ಹಲವು ಶಾಸಕರು ಕೂಡ ಪಕ್ಷದ ನಾಯಕರ ಮುಂದೆ ವಿಶ್ವಾಸ ವ್ಯಕ್ತಪಡಿಸಿದ್ದರೂ, ನಾಳೆ ಔತಣಕೂಟದಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

     ಇರಿಸು ಮುರುಸು ಈ ನಡುವೆ ಅನಾರೋಗ್ಯಕ್ಕೆ ತುತ್ತಾಗಿ ಸದ್ಯ ಬೆಂಗಳೂರಿನಲ್ಲೇ ವಿಶ್ರಾಂತಿ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್ ಹಾಗೂ ಇವರ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಶಾಸಕ ಜೆ.ಎನ್. ಗಣೇಶ್ ಔತಣ ಕೂಟಕ್ಕೆ ಬರುವುದಿಲ್ಲ. ಇದರ ಜತೆಗೆ ಕೆಲ ಶಾಸಕರು ಸರ್ಕಾರದಲ್ಲಿ ತಮ್ಮ ಕೆಲಸ ಆಗುತ್ತಿಲ್ಲ ಎಂದು ಅಸಮಧಾನಗೊಂಡಿದ್ದು, ಪಕ್ಷದ ನಾಯಕರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಬೇಸರಗೊಂಡಿದ್ದಾರೆ. ಇಂತವರು ಕೂಡ ಔತಣಕೂಟಕ್ಕೆ ಬರುವುದು ಅನುಮಾನ ಎನ್ನಲಾಗುತ್ತಿದೆ.

     ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷಗಳ ನಡುವೆ ಸಮನ್ವಯ ಕೊರತೆ ಎದುರಾಗಿದೆ. ಎರಡೂ ಪಕ್ಷದ ಸಚಿವರು, ಶಾಸಕರು ಪರಸ್ಪರ ತಮ್ಮ ನಾಯಕರನ್ನು ಹೊಗಳುವ ಭರದಲ್ಲಿ ಇನ್ನೊಂದು ಪಕ್ಷದ ನಾಯಕರನ್ನು ತೆಗಳುತ್ತಿದ್ದಾರೆ. ಸಿದ್ದರಾಮಯ್ಯ ಆಪ್ತರು ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹಾಗೂ ಕುಮಾರಸ್ವಾಮಿ ಆಪ್ತರು ಸಿದ್ದರಾಮಯ್ಯರನ್ನು ತೆಗಳುವ ಕಾರ್ಯದಲ್ಲಿ ಬಹಿರಂಗವಾಗಿ ತೊಡಗಿಕೊಂಡಿದ್ದಾರೆ . ಈ ಸಂದರ್ಭ ಔತಣಕೂಟದಲ್ಲಿ ಭಾಗವಹಿಸಿದರೆ ಪರಸ್ಪರ ಎದುರುಬದುರಾದಾಗ ಇರಿಸುಮುರುಸಾಗುತ್ತದೆ ಎನ್ನುವ ಕಾರಣಕ್ಕೆ ಮತ್ತೆ ಕೆಲ ಸಚಿವರು, ಶಾಸಕರು ಗೈರಾಗುವ ಸಾಧ್ಯತೆ ಹೆಚ್ಚಿದೆ. ಇಲ್ಲವೇ ಸಮಯ ಬದಲಿಸಿ ಬಂದು ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap