ತುಮಕೂರು
ವಿಶೇಷ ವರದಿ: ವಿನಯ್. ಎಸ್
ಸಾರ್ವಜನಿಕರಿಗೆ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲು ಶುದ್ಧ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದೆ. ಕ್ಯಾತಸಂದ್ರದಿಂದ ಸಿದ್ಧಗಂಗಾ ಮಠಕ್ಕೆ ಸಾಗುವ ದಾರಿಯಲ್ಲಿ ಯಾತ್ರಿ ನಿವಾಸ ಕಟ್ಟಡದ ಎಡ ಭಾಗದಲ್ಲಿ ಶುದ್ಧ ನೀರಿನ ಘಟಕವಿದೆ. ಆದರೂ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಯಾಂತ್ರಿಕ ಸಮಸ್ಯೆ, ನೀರು ಪೂರೈಕೆ ಸಮಸ್ಯೆ, ಸ್ವಚ್ಛತೆಯ ಸಮಸ್ಯೆ, ನಿರ್ವಹಣೆಯ ಸಮಸ್ಯೆ ಹೀಗೆ ಸಮಸ್ಯೆಗಳ ಸುಳಿಗೆ ಸಿಕ್ಕಿ, ಶುದ್ಧ ನೀರನ್ನು ಪೂರೈಸುವ ಕಾರ್ಯವನ್ನು ಮೂರು ತಿಂಗಳಿನಿಂದ ಸ್ಥಗಿತ ಗೊಳಿಸಲಾಗಿದೆ.
ನೀರಿನ ಪೂರೈಕೆ ಸಮಸ್ಯೆ:
ಯಾತ್ರಿ ನಿವಾಸ ಪಕ್ಕದಲ್ಲಿರುವ ಕೊಳವೆ ಬಾವಿಯಿಂದ ಈ ನೀರಿನ ಪ್ಲಾಂಟ್‍ಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಕೆಲವು ತಿಂಗಳಿನಿಂದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿರುವ ಕಾರಣ ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ನೀರು ಸಮರ್ಪಕವಾಗಿ ಪೂರೈಕೆಯಾಗದೆ ಇರುವುದರಿಂದ ಶುದ್ಧ ನೀರಿನ ಘಟಕವನ್ನು ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.
ಮರೀಚಿಕೆಯಾದ ಸ್ವಚ್ಛತೆ:
ಸಿದ್ಧಗಂಗಾ ಮಠಕ್ಕೆ ಸಮೀಪವೇ ಇರುವ ಈ ಶುದ್ಧ ನೀರಿನ ಘಟಕದಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಎಲ್ಲೆಂದರಲ್ಲಿ ನೀರಿನ ಪೈಪ್‍ಗಳು ಬಿದ್ದಿದ್ದು ಕೆಲವು ಕಡೆ ಜೇಡ ಕಟ್ಟಿ ಬೂತದ ಕೋಣೆಯ ರೀತಿಯಲ್ಲಿ ಭಾಸವಾಗುತ್ತದೆ. ನೀರಿನ ನಳದ ಬಳಿ ಕಟ್ಟೆಯನ್ನು ಕಟ್ಟಲಾಗಿದೆ. ಈ ಕಟ್ಟೆಯು ಒಡೆದು ಹೋಗಿ ಇಟ್ಟಿಗೆಗಳು ಚೆಲ್ಲಾಪಿಲ್ಲಿ ಯಾಗಿ ಬಿದ್ದಿವೆ. ಈ ಶುದ್ಧ ನೀರಿನ ಘಟಕದ ಹೊರ ಭಾಗದಲ್ಲಿ ಗೇಟ್ ಅಳವಡಿಸಲಾಗಿದ್ದು ಗೇಟ್‍ಗೆ ಬೀಗ ಹಾಕಿಲ್ಲ. ಗೇಟ್ ಯಾವಾಗಲೂ ತೆರೆದಿರುವ ಕಾರಣ ನಾಯಿಗಳ ವಾಸಸ್ಥಾನವಾಗಿದೆ.
ಶುಚಿತ್ವದ ಸಮಸ್ಯೆ:
ಕೆಲವೊಂದು ಬಾರಿ ಶುದ್ಧೀಕರಣ ಗೊಂಡ ನೀರು ಶುಚಿಯಾಗಿರುವುದಿಲ್ಲ. ಇದರಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶುದ್ಧ ನೀರಿನ ಘಟಕದಲ್ಲಿ ತಾಂತ್ರಿಕ ದೋಷವಿದೆ ಎಂದು ಇದು ತೋರಿಸುತ್ತದೆ. ನೀರಿನ ಕೇಂದ್ರ ಕಾರ್ಯವನ್ನು ನಿರ್ವಹಿಸುತ್ತಿರುವಾಗಲೇ ಈ ಸಮಸ್ಯೆ ಇದ್ದು ಅದನ್ನು ಪರಿಹರಿಸುವ ಕಾರ್ಯಕ್ಕೆ ಯಾರೂ ಮುಂದಾಗದಿರುವುದು ಒಂದು ವಿಪರ್ಯಾಸದ ಸಂಗತಿ.
ನಿರ್ವಹಣೆಯ ಸಮಸ್ಯೆ:
ಈ ಶುದ್ಧ ನೀರಿನ ಘಟಕಕ್ಕೆ ಗ್ರಾಮ ಪಂಚಾಯಿತಿಯ ವತಿಯಿಂದ ನಿರ್ವಾಹಕರನ್ನು ನೇಮಿಸಿದ್ದರೂ ಕೂಡ ಅವರು ಸರಿಯಾದ ಕ್ರಮದಲ್ಲಿ ಇದನ್ನು ನಿರ್ವಹಣೆ ಮಾಡದೆ ಇರುವುದೇ ಈ ಶುದ್ಧ ನೀರಿನ ಘಟಕ ಸ್ಥಗಿತಗೊಳ್ಳಲು ಕಾರಣವಾಗಿದೆ. ಈ ಮೊದಲು ವೃದ್ಧೆಯನ್ನು ನಿರ್ವಾಹಕರಾಗಿ ನೇಮಿಸಲಾಗಿದ್ದು, ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಇನ್ನೊಬ್ಬ ಮಹಿಳೆಯನ್ನು ನೇಮಕ ಮಾಡಲಾಗಿತ್ತು.
ಮಾಯವಾದ ಗಲ್ಲಾ ಪಟ್ಟಿಗೆ:
ಮೊದಲು ಸಾರ್ವಜನಿಕರು ನೀರಿನ ನಿರ್ವಾಹಕರ ಕೈಗೆ ಹಣವನ್ನು ನೀಡಿ ನೀರನ್ನು ಪಡೆಯುತ್ತಿದ್ದರು. ಇತ್ತೀಚೆಗೆ ನಿರ್ವಾಹಕರ ಬಳಿಯಲ್ಲಿ ಹಣ ನೀಡದೆ, ಸ್ವಯಂ ಚಾಲಿತವಾಗಿರುವ ಗಲ್ಲಾ ಪಟ್ಟಿಗೆಗಳು ಬಂದಿವೆ. ಅವುಗಳನ್ನೇ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅಳವಡಿಸಲಾಗಿದೆ. ಸಾರ್ವಜನಿಕರು ಈ ಬಾಕ್ಸ್‍ನಲ್ಲಿ ನಾಣ್ಯಗಳನ್ನು ಹಾಕಿ ನೀರನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಈ ಶುದ್ಧ ನೀರಿನ ಘಟಕದಲ್ಲಿ ಈ ಸ್ವಯಂ ಚಾಲಿತ ಗಲ್ಲಾ ಪಟಿಗೆ ಇರಬೇಕಾದ ಜಾಗದಿಂದಲೇ ಮಾಯವಾಗಿದೆ. ಖಾಲಿ ಇರುವ ಜಾಗದಿಂದ ಪಕ್ಷಿಗಳು ಪ್ಲಾಂಟ್ ಒಳಗೆ ಹೋಗಿ ಗೂಡುಗಳನ್ನು ನಿರ್ಮಾಣ ಮಾಡಿಕೊಂಡಿವೆ.
ಶಿಥಿಲಗೊಂಡ ನಾಮ ಫಲಕ:
ಈ ಆರ್.ಓ ಪ್ಲಾಂಟ್‍ನಲ್ಲಿ ನಾಮಫಲಕವೇ ಇಲ್ಲ. ನಳಗಳ ಬಳಿಯಲ್ಲಿ ಅಳವಡಿಸಿರುವ ಯಂತ್ರಗಳ ಬಗ್ಗೆ ಚಿಕ್ಕದಾಗಿ ಸ್ಟೀಲ್ ಪ್ಲೇಟ್ ಮೇಲೆ ಅವುಗಳ ಮಾಹಿತಿಯನ್ನು ನಮೂದಿಸಿರುತ್ತಾರೆ. ಆದರೆ ಈ ಶುದ್ಧ ನೀರಿನ ಘಟಕದಲ್ಲಿರುವ ಮಾಹಿತಿ ಪ್ಲೇಟ್ ತುಕ್ಕು ಹಿಡಿದಿದೆ. ಈ ನಾಮ ಫಲಕವನ್ನು ನೋಡಿದರೆ, ಇಲ್ಲಿ ಎಷ್ಟರ ಮಟ್ಟಿಗೆ ಸ್ವಚ್ಛತೆ ಮತ್ತು ನಿರ್ವಹಣೆ ಇದೆ ಎಂದು ತಿಳಿಯುತ್ತದೆ.
ಮೂರು ತಿಂಗಳಾದರೂ ಇತ್ತ ಗಮನ ಹರಿಸದ ಅಧಿಕಾರಿಗಳು :
ಈ ಶುದ್ಧ ನೀರಿನ ಘಟಕ ಸ್ಥಗಿತಗೊಂಡು ಮೂರು ತಿಂಗಳು ಕಳೆದಿವೆ. ಆದರೆ ಇಲ್ಲಿನ ಕಾರ್ಪೊರೇಟರ್ ಆಗಲಿ, ಪಾಲಿಕೆ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸಿಲ್ಲ. ಮೊದಲು ಖಾಸಗಿಯವರೂ ಈ ಪ್ಲಾಂಟ್‍ಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಸರಿಯಾದ ಕ್ರಮದಲ್ಲಿ ಆರ್‍ಓ ಪ್ಲಾಂಟ್‍ಗಳನ್ನು ನಿರ್ವಹಣೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಪಾಲಿಕೆ ಈ ಶುದ್ಧ ನೀರಿನ ಘಟಕಗಳ ನಿರ್ವಹಣಾ ಕಾರ್ಯವನ್ನು ತನ್ನ ತಲೆಯ ಮೇಲೆ ಹಾಕಿಕೊಂಡಿದೆ.
ಇನ್ನಾದರು ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಶುದ್ಧ ನೀರಿನ ಘಟಕಕ್ಕೆ ಸಮರ್ಪಕವಾಗಿ ನೀರನ್ನು ಪೂರೈಸಿ, ಇಲ್ಲಿನ ಸಮಸ್ಯೆಗಳಿಗೆ ಮುಕ್ತಿ ನೀಡಿ, ಸಾರ್ವಜನಿಕರಿಗೆ ಶುದ್ಧ ನೀರನ್ನು ಒದಗಿಸಬೇಕು ಎಂಬುದು ಸ್ಥಳೀಯ ಆಗ್ರಹ.
ಈ ಶುದ್ಧ ನೀರಿನ ಘಟಕದಲ್ಲಿ ನಿರ್ವಹಣೆ ಮತ್ತು ಸ್ವಚ್ಛತೆ ಇಲ್ಲ. ಈ ಪ್ಲಾಂಟ್ ಮುಚ್ಚಿ ಮೂರು ತಿಂಗಳಾಗಿದೆ. ಈ ಕೇಂದ್ರದ ನಿರ್ವಾಹಕರು ಅಧಿಕಾರಿಗಳ ಬಳಿಯಲ್ಲಿ ಈ ಅವ್ಯವಸ್ಥೆಯ ಬಗ್ಗೆ ದೂರು ನೀಡಿದ್ದಾರೋ ಇಲ್ಲವೋ ತಿಳಿದಿಲ್ಲ. ಸುತ್ತಮುತ್ತಲಿನ ಜನತೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಈ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕು.
ಹರೀಶ್, ಕ್ಯಾತಸಂದ್ರ.
ಈ ಶುದ್ಧ ನೀರಿನ ಘಟಕದಲ್ಲಿ ನಿರ್ವಹಣೆಯೇ ಒಂದು ಸಮಸ್ಯೆಯಾಗಿದೆ. ಆರ್.ಓ ಪ್ಲಾಂಟ್‍ನ್ನು ನಿರ್ವಹಣೆ ಮಾಡಲು ಬಾರದಿರುವವರನ್ನು ನಿರ್ವಾಹಕರನ್ನಾಗಿ ನೇಮಿಸಿದ್ದಾರೆ. ಅವರು ಸರಿಯಾಗಿ ಟ್ಯಾಂಕ್ ಸ್ವಚ್ಛ ಮಾಡುವುದಿಲ್ಲ, ಇದರಿಂದ ಕೆಲವೊಮ್ಮೆ ನೀರು ವಾಸನೆ ಬರುತ್ತದೆ. ಕೇಳಿದರೆ ಸ್ವಚ್ಛ ಮಾಡಿದ್ದೇವೆ ಎಂದು ಹೇಳುತ್ತಾರೆ. ಇಲ್ಲಿನ ಸ್ಥಳೀಯ ಕಾರ್ಪೊರೇಟರ್ ಕೂಡ ಈ ಸಮಸ್ಯೆಯನ್ನು ಬಗೆಹರಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಸಾರ್ವಜನಿಕರು ನೀರನ್ನು ತರಲು ಎನ್. ಎಚ್. 204 ಹೆದ್ದಾರಿಯನ್ನು ದಾಟಿ, ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಇರುವ ಪ್ಲಾಂಟ್‍ಗೆ ಹೋಗಿ ಕುಡಿಯುವ ನೀರನ್ನು ತೆಗೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.