ವಿಧಾನಸೌಧದ ಸಾರ್ವಜನಿಕ ಭೇಟಿ ಸಮಯದ ವೇಳೆ ಬದಲು..!

ಬೆಂಗಳೂರು

     ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಯಂತ್ರಿಸಲಾಗಿದ್ದು, ಸಂಜೆ ಎರಡು ಗಂಟೆ ಬದಲು ಒಂದು ಗಂಟೆ ಮಾತ್ರ ಜನ ಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಹೇಳಿದ್ದಾರೆ.

     ಕೊರೋನಾ ಸೋಂಕಿನ ವಿರುದ್ಧ ಹೋರಾಟ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕುರಿತು ಆಯುರ್ವೇದ ವೈದ್ಯ ಡಾ, ವಿನಯ್ ಎಸ್. ಸಿಂಗರಾಜಪುರ ಅವರ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಂಕು ನಿಯಂತ್ರಣ ಭಾಗವಾಗಿ ಜನದಟ್ಟಣೆ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದು, ಅದರಂತೆ ಎರಡು ಗಂಟೆ ಬದಲು ಮಧ್ಯಾಹ್ನ 3.30 ರಿಂದ 4.30ರವರೆಗೆ ಆಡಳಿತ ಕೇಂದ್ರಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

    ಕೊರೋನಾ ಸೋಂಕು ನಿವಾರಣೆಗೆ ಆಯುರ್ವೇದ ಔಷಧ ಅತ್ಯಂತ ಪರಿಣಾಮಕಾರಿಯಾಗಿದೆ. ಕೇಂದ್ರ ಆಯುಷ್ ಇಲಾಖೆ ಸೋಂಕು ನಿವಾರಣೆಗೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಅದರಂತೆ ಪ್ರತಿಯೊಬ್ಬರೂ ಆಯುಷ್ ಔಷಧಿಗಳನ್ನು ಬಳಕೆ ಮಾಡಿ ಸೂಕ್ತ ಕ್ರಮಗಳನ್ನು ಅನುಸರಿಸಿ ಸೋಂಕಿನಿಂದ ದೂರ ಇರಬೇಕು ಎಂದು ಸಲಹೆ ಮಾಡಿದರು.

      ಆದರೆ ಆಯುರ್ವೇದ ಔಷಧಗಳಲ್ಲಿ ಕಲೆ ಬೆರಕೆ ಇರಬಾರದು. ಸ್ಟೀರಾಯ್ಡ್ ಮತ್ತಿತರ ವಸ್ತುಗಳನ್ನು ಕಲ ಬೆರಕೆ ಮಾಡುವ ಕುರಿತ ಆರೋಪಗಳಿವೆ. ಇದಕ್ಕೆ ಅವಕಾಶ ಕಲ್ಪಿಸಬಾರದು. ನಾನೂ ಸಹ ಕಳೆದ 15 ವರ್ಷಗಳಿಂದ ಚವನ್ ಪ್ರಾಶ್ ಸೇವಿಸುತ್ತೇನೆ. ಆಯುರ್ವೇದ ಔಷಧ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

      ಆಯುರ್ವೇದ ವೈದ್ಯ ಡಾ. ವಿನಯ್ ಎಸ್. ಸಿಂಗರಾಜಪುರ ಉಪನ್ಯಾಸ ನೀಡಿ, ಮೈಸೂರಿನ ನಂಜನಗೂಡು, ಕನಕಪುರ, ಬೆಂಗಳೂರಿನ ಹಾಟ್ ಸ್ಪಾಟ್ ಗಳು, ಕಂಟೈನ್ಮೆಂಟ್ ವಲಯಗಳಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಉಚಿತವಾಗಿ ರೋಗ ನಿರೋಧಕ ಶಕ್ತಿಯುಳ್ಳ ಹತ್ತು ಸಾವಿರಕ್ಕೂ ಹೆಚ್ಚು ಕಿಟ್ ಗಳನ್ನು ವಿತರಿಸಿದ್ದೇನೆ. ಸೋಂಕು ಬಾರದಂತೆ ತಡೆಯಲು, ಸೋಂಕಿತರು ಗುಣಮುಖರಾಗಲು ಆಯುರ್ವೇದ ಔಷಧ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.

     ಜನ ಸಾಮಾನ್ಯರು ಸಹ ಈ ಔಷಧಗಳನ್ನು ಬಳಸಿಕೊಂಡು ಕೊರೋನಾ ಸೋಂಕಿನಿಂದ ದೂರ ಇರಬೇಕು. ಉತ್ತಮ ಆಹಾರ, ವಿಹಾರ, ವಿಚಾರಗಳನ್ನು ರೂಢಿಸಿಕೊಂಡು ಆರೋಗ್ಯವಂತ ಜೀವನ ನಡೆಸಲು ಆಯುರ್ವೇದ ಅತ್ಯಂತ ಪರಿಣಾಮಕಾರಿಯಾಗಿದೆ. ಆಯರ್ವೇದ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹೇಳಿದರು.

    ಕಳೆದ ಮೂರು ತಿಂಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಕೊರೋನಾ ನಿಯಂತ್ರಣ, ನಿವಾರಣೆಗಾಗಿ ಆಯುರ್ವೇದ ಔಷಧಗಳ ಪ್ರಯೋಗ ಮಾಡುತ್ತಿದ್ದು, ಇದಕ್ಕೆ ಉತ್ತಮ ಫಲಿತಾಂಶ ದೊರೆಯುತ್ತಿದೆ. ಔಷಧಿ ಬಳಕೆ ಮಾಡುತ್ತಿರುವರಲ್ಲಿ ಆರೋಗ್ಯ ಸುಧಾರಣೆಯಾಗುತ್ತಿದೆ. ಕರೋನಾ ಸಮಯದಲ್ಲಿ ಆಯುರ್ವೇದ ಔಷಧ ಬಳಕೆ ಕುರಿತು ಸಂಶೋಧನೆ ನಡೆಸುತ್ತಿದ್ದು, ಇದರ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಆಯುರ್ವೇದ ಔಷಧ ಬಳಕೆ ಕುರಿತು ಇನ್ನಷ್ಟು ರಚನಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಡಾ. ವಿನಯ್ ಎಸ್ ಸಿಂಗರಾಜಪುರ ಹೇಳಿದರು.

    ಆಯುಷ್ ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟ ಆಂಟಿ ವೈರಸ್ ಮತ್ತು ಇಮ್ಯೂನ್ ಬೂಸ್ಟರ್ ಗಳನ್ನು ಆಧಾರವಾಗಿಟ್ಟುಕೊಂಡು, ಕೇಂದ್ರದ ಆಯುಷ್ ಇಲಾಖೆಯ ಮಾರ್ಗಸೂಚಿಯನ್ವಯ ಶಾಸ್ತ್ರೀಯ ರೀತಿಯಲ್ಲಿ ಈ ಕಿಟ್ ಗಳನ್ನು ಸಿದ್ಧಪಡಿಸಲಾಗಿದೆ. ಶ್ವಾಸಕೋಶದ ತೊಂದರೆಗಳಿಗೆ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಸೂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದರು.

      ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಮಾತನಾಡಿ, ಕೊರೋನಾ ಸೋಂಕಿನ ನಡುವೆ ಬದುಕು ನಡೆಸಲು ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಔಷಧಗಳನ್ನು ಬಳಸಬೇಕು. ಸರ್ಕಾರಿ ನೌಕರರು ಕೊರೋನಾ ಸೇನಾನಿಗಳಾಗಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap