ಚಳ್ಳಕೆರೆ
ತಾಲೂಕಿನಾದ್ಯಂತ ಮುಂಗಾರು ಮಳೆ ಈಗಷ್ಟೇ ಪ್ರಾರಂಭವಾಗಿದ್ದು, ರೈತರು ತಮ್ಮ ಭೂಮಿಗಳನ್ನು ಬಿತ್ತನೆಗಾಗಿ ಸಿದ್ದಪಡಿಸಿ ಕೊಳ್ಳುತ್ತಿದ್ದು, ಕೃಷಿ ಇಲಾಖೆ ರೈತರಿಗೆ ನೀರುವ ಶೇಂಗಾ ಬಿತ್ತನೆ ಬೀಜದ ದರವನ್ನು ಕಡಿತಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ) ರಾಜ್ಯ ಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ ಒತ್ತಾಯ ಪಡಿಸಿದರು.
ಅವರು, ಸೋಮವಾರ ಇಲ್ಲಿನ ಕೃಷಿ ಇಲಾಖೆ ಸಭಾಂಗಣದಲ್ಲಿ ಪ್ರಸ್ತುತ ವರ್ಷದ ಶೇಂಗಾ ಬಿತ್ತನೆ ಬೀಜ ವಿತರಣೆ ಹಾಗೂ ದರಗಳ ಬಗ್ಗೆ ಚರ್ಚೆ ನಡೆಸಲು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಸುಮಾರು ಹತ್ತಾರು ವರ್ಷಗಲಿಂದ ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಯಾವುದೇ ಬೆಳೆ ಬೆಳೆಯದೆ ಸಂಕಷ್ಟಕ್ಕೋಳಗಾಗಿದ್ದಾರೆ. ಪ್ರಸ್ತುತ ಪ್ರಾರಂಭದ ಹಂತದಲ್ಲಿ ಹದ ಮಳೆಯಾಗಿದ್ದು, ರೈತರು ಈ ವರ್ಷವಾದರೂ ಹೆಚ್ಚಿನ ಬೆಳೆ ಬೆಳೆಯುವ ನಿರೀಕ್ಷೆ ಹೊಂದಿದ್ದಾರೆ. ಆದರೆ, ಕೃಷಿ ಇಲಾಖೆ ಶೇಂಗಾ ಬಿತ್ತನೆ ಬೀಜ ದರವನ್ನು ಸಾಮಾನ್ಯ ವರ್ಗಕ್ಕೆ 5900, ಎಸ್ಟಿ, ಎಸ್ಟಿ ವರ್ಗಕ್ಕೆ 5200 ರೂ ನಿಗದಿ ಪಡಿಸಿದ್ದು, ಸರಿಯಲ್ಲ. ಸರ್ಕಾರ ಕೂಡಲೇ ರೈತರ ಶೇಂಗಾ ಬಿತ್ತನೆ ಬೀಜ ದರವನ್ನು ಕಡಿತಗೊಳಿಸುವಂತೆ ಮನವಿ ಮಾಡಿದರು.
ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಸರ್ಕಾರಕ್ಕೆ ರೈತರ ಸಮಸ್ಯೆಗಳ ಬಗ್ಗೆ ರೈತರ ಸ್ಥಿತಿಯ ಬಗ್ಗೆ ಸ್ವಷ್ಟವಾದ ಮಾಹಿತಿ ಇಲ್ಲ. ಕಳೆದ ಹಲವಾರು ವರ್ಷಗಳಿಂದ ಬೆಳೆ ಇಲ್ಲದೆ ನೊಂದು ಕಂಗಾಲಾಗಿರುವ ರೈತ ಈ ವರ್ಷವಾದರೂ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಅಭಿಲಾಷೆ ಹೊಂದಿದ್ದಾನೆ. ಆದರೆ, ಕೃಷಿ ಇಲಾಖೆ ನಿಗದಿ ಪಡಿಸಿರುವ ದರ ಹೆಚ್ಚಿದ್ದು, ರೈತರು ಕೊಳ್ಳಲು ಸಾಧ್ಯವಿಲ್ಲವಾದೆ. ಸರ್ಕಾರ ಕೇವಲ ಬಿತ್ತನೆ ಜೀಜವಲ್ಲದೆ ಎಲ್ಲಾ ಕೃಷಿ ಪರಿಕರಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀಡುವಂತಾಗಬೇಕು.
ಹೊರಗಡೆಯಿಂದ ಬಿತ್ತನೆ ಜೀಜಗಳನ್ನು ಖರೀದಿ ಮಾಡುವ ಬದಲು ರೈತರ ಬಳಿ ಇರುವ ಶೇಂಗಾ, ನವಣೆ ಮುಂತಾದ ಬಿತ್ತನೆ ಜೀಜಗಳ ಖರೀದಿಗೆ ಸರ್ಕಾರ ಮುಂದಾಗಬೇಕೆಂದರು. ಸಹಾಯಕ ಕೃಷಿ ನಿರ್ದೇಶಕ ಡಾ.ಮೋಹನ್‍ಕುಮಾರ್ ಮಾತನಾಡಿ, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು. ಪ್ರಸ್ತುತ ಸದ್ಯದ ಪರಿಸ್ಥಿತಿಯಲ್ಲಿ ನಿಗದಿ ಪಡಿಸಿರುವ ಬೆಲೆಯನ್ನೇ ರೈತರು ನೀಡಬೇಕಾಗುತ್ತದೆ. ರೈತರ ಅವಶ್ಯಕತೆಗೆ ತಕ್ಕಂತೆ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗುವುದು ಎಂದರು.ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ಕೃಷಿ ಇಲಾಖೆ ತಾಂತ್ರಿಕಾಧಿಕಾರಿ ರವಿಕುಮಾರ್, ರೈತರಾದ ಕರಿಯಪ್ಪ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ