ಗುಬ್ಬಿ
ನೀರಾವರಿ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದು ಹೇಮಾವತಿ ನೀರು ಹರಿಸಲು ನಡೆದ ಕಾಮಗಾರಿಯಲ್ಲಿ ಹಾಗಲವಾಡಿ, ಬಿಕ್ಕೆಗುಡ್ಡ ಭಾಗಕ್ಕೆ ಮುಂದಿನ ವರ್ಷದಲ್ಲಿ ನೀರನ್ನು ಹರಿಸಲಾಗುವುದು. ಇಲ್ಲಿನ ನೂನ್ಯತೆಗಳನ್ನು ಖುದ್ದು ಪರಿಶೀಲಿಸಲಾಗುವುದು ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಎತ್ತಿನಹೊಳೆ ಯೋಜನೆ ಕಾಮಗಾರಿಗಳು ಶಿಸ್ತು ಬದ್ದವಾಗಿ ಸಾಗಿದೆ. ಭೂವಶದ ಪ್ರಕ್ರಿಯೆಯಲ್ಲಿ ಕಾನೂನು ತೊಡಕು ಬಾರದಂತೆ ಕಡೆಲಸ ನಡೆಸಿದ್ದಾರೆ. ಈ ಜತೆಗೆ ತುಮಕೂರು ಜಿಲ್ಲೆಗೆ ಕುಡಿಯಲು ನೀರು ಬಳಸಿಕೊಳ್ಳಲು 1 ಟಿಎಂಸಿ ನೀರು ಮೂರು ಭಾಗವಾಗಿ ಹಂಚಲಾಗುವುದು.
ಆದರೆ ಕೆಲ ತಾಲ್ಲೂಕುಗಳಿಗೆ ನೀರು ಸಿಗದಿರುವ ಅನುಮಾನಕ್ಕೆ ತೆರೆ ಎಳೆಯಲು ಅಧಿಕಾರಿಗಳೊಂದಿಗೆ ಚರ್ಚಿಸಿ ನಾಲೆ ಬದಿಯ ಕೆರೆಗಳಿಗಾದರೂ ನೀರು ಹರಿಸಲು ಚಿಂತಿಸಲಾಗಿದೆ. ಹೇಮಾವತಿ ನೀರು ಈ ಬಾರಿ ಡಿಸೆಂಬರ್ ಅಂತ್ಯದವರೆಗೆ ಬರಲಿದೆ. ಗುಬ್ಬಿ ತಾಲ್ಲೂಕಿನ ಕಡಬ ಕೆರೆ ಭರ್ತಿಗೆ ಪ್ರಯತ್ನಿಸಲಾಗುವುದು. ಜಿಲ್ಲೆಯ ಬಹುತೇಕ ಕೆರೆಗಳು ಭಾಗಶಃ ತುಂಬಲಿದೆ ಎಂದರು.
ನೆರೆ ಸಂತ್ರಸ್ತರಿಗೆ ನೀಡುವ ಪರಿಹಾರ ಹಣವನ್ನು ಕಾಂಗ್ರೆಸಿಗರಿಗೆ ನೀಡಲಿಲ್ಲ ಎಂದು ಬೇಸರ ಮಾಡಿಕೊಂಡು ಧರಣಿ ನಡೆಸುತ್ತಿದ್ದಾರೆ ನೆರೆ ಹಾವಳಿ ಪ್ರದೇಶದ ಮಾಹಿತಿ ಕಲೆ ಹಾಕದೆ ಕಾಂಗ್ರೆಸಿಗರು ಹೇಳುವ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡಬೇಕಿದೆ ಅಂದರೆ ಸರ್ಕಾರ ನೇಮಿಸುವ ತಂಡಗಳು ನೀಡಿದ ವರದಿಗಳಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿ ಈಗಾಗಲೇ 32 ಸಾವಿರ ಕೋಟಿ ರೂಗಳ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲಾಗಿದೆ.
ಸಂತ್ರಸ್ತರ ಖಾತೆಗೆ 10 ಸಾವಿರ ರೂಗಳು ತುಂಬಲಾಗಿದೆ. ರಾಜ್ಯ ಸರ್ಕಾರ ಅಗತ್ಯ ಸವಲತ್ತು ಒದಗಿಸಿದ್ದರ ಜತೆಗೆ ವೈಜ್ಞಾನಿಕ ಅಧ್ಯಯನ ನಡೆಸಿ ಗುಡ್ಡ ಕುಸಿತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಶೇಷ ತಂತ್ರಜ್ಞರ ತಂಡ ಕೆಲಸ ಆರಂಭಿಸಿದೆ. ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು 5 ಲಕ್ಷ ರೂನಂತೆ ನೀಡಲಾಗುತ್ತಿದೆ ಎಂದರು.
ನೆರೆ ಹಾವಳಿಯ ಅಂದಾಜು ಪಟ್ಟಿಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಆಗಿರುವ ನಷ್ಟವನ್ನು 450 ಕೋಟಿ ರೂ ಅಂದಾಜಿಸಲಾಗಿದೆ. ಈ ಜತೆಗೆ ಯಾವುದೇ ಪರಿಹಾರ ಕಾರ್ಯದಲ್ಲಿ ವಿಳಂಬವಾಗಲು ಕೆಲ ತಾಂತ್ರಿಕ ಸಮಸ್ಯೆಗಳು ಮುಂದಾಗುತ್ತಿವೆ. ಈಚೆಗೆ ಹೆದ್ದಾರಿ, ನಾಲೆ, ವಿದ್ಯುತ್ ಕಂಬ ಹೀಗೆ ಅನೇಕ ಅಭಿವೃದ್ದಿ ಕಾರ್ಯದಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡುವಾಗ್ಗೆ ಅವರ ದಾಖಲಾತಿಗಳು ಸರಿ ಇರುವುದಿಲ್ಲ. ಅದರ ಕೆಲಸಗಳು ಕಂದಾಯ ಇಲಾಖೆಯಲ್ಲೂ ಪೆಂಡಿಂಗ್‍ನಲ್ಲೇ ಸಾಗುತ್ತವೆ.
ಈ ವಿಳಂಬದ ಹೊಡೆತ ಪರಿಹಾರ ಸಿಗದ ರೈತ ಪ್ರತಿಭಟನೆಗೆ ಮುಂದಾಗುತ್ತಾನೆ ಎಂದು ವಿವರಿಸಿದ ಅವರು ಫೋನ್ ಕದ್ದಾಲಿಕೆ ಪ್ರಕರಣಗಳು ಗಂಭೀರ ಅಪರಾಧವಾಗುತ್ತದೆ. ಪೊಲೀಸ್ ಇಲಾಖೆ ತನಿಖೆಗೆ ಕಾನೂನಾತ್ಮಕವಾಗಿ ಕದ್ದಾಲಿಕೆ ನಡೆಸುವುದು ಸರಿಯಷ್ಟೇ. ಆದರೆ ರಾಜಕಾರಣಿಗಳು ಪೊಲೀಸ್ ಬಳಸಿ ವೈಯಕ್ತಿಕ ವಿಚಾರ ಬಯಲು ಮಾಡುವುದು ಶಿಕ್ಷಾರ್ಹ ಅಪರಾಧ ಎಂದರು.
ಎಚ್‍ಎಎಲ್ ಘಟಕದ ಕೆಲಸಗಳು ತೀವ್ರಗತಿಯಲ್ಲಿ ಸಾಗಿದೆ. ಮಾರಶೆಟ್ಟಿಹಳ್ಳಿ ಕೆಲ ರೈತರಿಗೆ ಬರಬೇಕಾದ ಪರಿಹಾರಕ್ಕೆ ನಾನೇ ಖುದ್ದು ಓಡಾಟ ನಡೆಸಿದ್ದೇನೆ. ಕನಿಷ್ಠ ಪರಿಹಾರ ಒದಗಿಸಿ ಉದ್ಯೋಗ ಸೃಷ್ಟಿಗೆ ಚರ್ಚಿಸಲಾಗುವುದು. ಜಿಲ್ಲೆಯಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಕೆಲ ತೊಂದರೆಗಳು ಎದುರಾಗಿವೆ. ಜಿಎಸ್‍ಟಿ ಬಂದ ನಂತರದಲ್ಲಿ ಆರ್ಥಿಕ ವ್ಯವಹಾರ ಕಾನೂನು ಬದ್ದವಾಗಿ ಕಠಿಣವಾಗಿ ಸಾಗಿದೆ. ಈ ಹಿನ್ನಲೆಯಲ್ಲಿ ಗಾರ್ಮೆಂಟ್ಸ್ ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ.
ಗ್ರಾಮೀಣ ಭಾಗದ ಕನಿಷ್ಠ ವಿದ್ಯಾರ್ಹತೆಯ ಯುವಕರಿಗೆ ಉದ್ಯೋಗ ನೀಡುವ ಈ ಉದ್ದಿಮೆ ಸ್ಥಾಪನೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೊಸ ಉದ್ದಿಮೆಗಳಿಗೆ ಆಹ್ವಾನ ನೀಡಲಾಗುತ್ತಿದೆ. ಕೆಲ ತಿಂಗಳಲ್ಲಿ ಉದ್ಯೋಗ ಸೃಷ್ಟಿಗೆ ನಾಂದಿ ಹಾಡಲಾಗುವುದು. ಜತೆಗೆ ಸ್ಮಾರ್ಟ್ ಸಿಟಿ ಯೋಜನೆಗಳ ವರದಿ ಅವಲೋಕಿಸಿದ್ದೇನೆ. ಈ ತಿಂಗಳ 19 ರಂದು ಒಂದು ಚಿತ್ರಣ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಪಿ.ಬಿ.ಚಂದ್ರಶೇಖರಬಾಬು, ದಿನೇಶ್ ಪತ್ರೆ, ಟಿ.ಎಸ್.ಕಿಡಿಗಣ್ಣಪ್ಪ, ಎಸ್.ವಿಜಯ್‍ಕುಮಾರ್, ಅ.ನ.ಲಿಂಗಪ್ಪ, ಎಸ್.ಡಿ.ದಿಲೀಪ್‍ಕುಮಾರ್, ಜಿ.ಆರ್.ಶಿವಕುಮಾರ್, ಕೆ.ಬಿ.ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
