ಬಿಜೆಪಿ ಸರ್ಕಾರದಿಂದ ಕೈ ಶಾಸಕರ ಕ್ಷೇತ್ರದ ಅನುದಾನ ಕಡಿತ.!

ಬೆಂಗಳೂರು

    ರಾಜ್ಯದ ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಹಾಗೂ ಬಿಬಿಎಂಪಿ ವಾರ್ಡ್‌ಗಳಿಗೂ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿ ವಂಚನೆ ನಡೆಸಿದೆ ಎಂದು ಆರೋಪಿಸಿ ನಗರದ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

    ನಗರದ ಪುರಭವನ ಮುಂಭಾಗ ಸೇರಿದ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿ ಬಿಜೆಪಿ ಹಾಗೂ ಅನರ್ಹ ಶಾಸಕರ ಕ್ಷೇತ್ರಗಳಿಗೆ ಭಾರಿ ಪ್ರಮಾಣದ ಅನುದಾನ ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು.

    ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ. ಬಿಬಿಎಂಪಿಗೆ ಅನುದಾನವನ್ನು ನೀಡದೆ ಅಭಿವೃದ್ಧಿ ಕೆಲಸ-ಕಾರ್ಯಗಳಿಗೆ ತಡೆಯುಂಟುಮಾಡಿದೆ ಎಂದು ದೂರಿ ಬಿಜೆಪಿ ಸರ್ಕಾರದ ವಿರುಧ್ದ ಘೋಷಣೆಗಳನ್ನು ಕೂಗಿದರು.

      ಮೊದಲು ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದರಾದರೂ ಅದು ಶಿವಾಜಿನಗರ ಕ್ಷೇತ್ರ ವ್ಯಾಪ್ತಿಗೊಳಪಡುವುದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಅದರಿಂದಾಗಿ ಪುರಭವನ ಮುಂಭಾಗ ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

     ಕಾಂಗ್ರೆಸ್ ಶಾಸಕರಿರುವ ಬ್ಯಾಟರಾಯನಪುರ, ಗಾಂಧಿನಗರ, ಹೆಬ್ಬಾಳ, ಚಾಮರಾಜಪೇಟೆ, ವಿಜಯನಗರ, ಪುಲಿಕೇಶಿ ನಗರ, ಶಾಂತಿನಗರ, ಸರ್ವಜ್ಞ ನಗರ, ಬಿಟಿಎಂ ಬಡಾವಣೆ ಸೇರಿದಂತೆ ನಗರದ ೧೧ ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಕಡಿಮೆ ಅನುದಾನ ನೀಡಿ ವಂಚಿಸಲಾಗಿದೆ ಎಂದು ಹಿರಿಯ ನಾಯಕ ಹರಿಪ್ರಸಾದ್ ಆರೋಪಿಸಿದರು.

     ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಿರುವುದರಿಂದ ನಗರದ ಅತ್ಯಂತ ಜನಪ್ರಿಯ ಯೋಜನೆಯಾದ ಇಂದಿರಾ ಕ್ಯಾಂಟೀನ್, ವೈಟ್ ಟಾಪಿಂಗ್ ಇನ್ನಿತರ ಕೆಲಸಗಳಿಗೆ ತೊಂದರೆಯುಂಟಾಗಿದೆ. ಕೂಡಲೇ ಸೂಕ್ತ ರೀತಿಯ ಅನುದಾನ ನೀಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಮುಖಂಡರಾದ ಕೃಷ್ಣಪ್ಪ, ಅಬ್ದುಲ್ ವಾಜಿದ್, ಉದಯ ಶಂಕರ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap