ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

ತುಮಕೂರು

   ಕೊರೊನಾ ಸೋಂಕು ತಡೆಗೆ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಸರ್ಕಾರ ಲಾಕ್‍ಡೌನ್ ಘೋಷಿಸಿದ್ದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಈ ಸಮಸ್ಯೆಗಳನ್ನು ಸಮರ್ಥ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೊರೊನಾ ನಿಯಂತ್ರಣಕ್ಕೆ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ. ಆದರೆ ಸರ್ಕಾರ ಕ್ರಮಗಳು ಸಮರ್ಪಕವಾಗಿಲ್ಲ ಎಂದು ಮಾಜಿ ಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್‍ನ ಬೆಂಗಳೂರು ವಿಭಾಗದ ಕೊವಿಡ್-19 ಟಾಸ್ಕ್‍ಪೋರ್ಸ್ ಅಧ್ಯಕ್ಷ ಹೆಚ್.ಎಂ.ರೇವಣ್ಣ ಆಪಾದಿಸಿದರು.

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ರಾಜ್ಯದಲ್ಲಿ ಸರ್ಕಾರ ಕೈಗೊಂಡಿರುವ ಕೋವಿಡ್-19 ಪರಿಹಾರ ಕಾರ್ಯಗಳನ್ನು ಪರಿಶೀಲಿಸಲು ಬೆಂಗಳೂರು ವಿಭಾಗದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ತಂಡ ಭಾನುವಾರ ತುಮಕೂರಿಗೆ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರ ಜೊತೆ ಕೊರೊನಾ ಸ್ಥಿತಿಗತಿ ಬಗ್ಗೆ ಸಮಾಲೋಚನೆ ನಡೆಸಿತು.

    ಜಿಲ್ಲಾ ಡ್ರಗ್‍ಲಾಜಿಸ್ಟಿಕ್ ವತಿಯಿಂದ ಆಯಾ ಜಿಲ್ಲೆಗಳಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧಿಗಳ ವಿತರಣೆ ಸಮರ್ಪಕವಾಗಿ ಆಗುತ್ತಿದೆಯೇ ಎಂಬ ವಿವರ ಸಂಗ್ರಹಿಸುವುದು, ತುರ್ತು ವಾಹನ ಸಾಕಷ್ಟು ಪ್ರಮಾಣದಲ್ಲಿದೆಯೇ ಮತ್ತು ವೈದ್ಯಕೀಯ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿಗೆ ಮಾಸ್ಕ್ ಇತ್ಯಾದಿ ಪೂರೈಸಲಾಗಿದೆಯೇ ಪರಿಶೀಲಿಸುವ ಜೊತೆಗೆ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ವಿವರ ಪಡೆಯಿತು.

    ಇದರ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಂ.ರೇವಣ್ಣ ಅವರು, ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಇಂದು ಸಂಘ ಸಂಸ್ಥೆಗಳು ಮಾಡುತ್ತಿವೆ. ವಿರೋಧ ಪಕ್ಷವಾದ ಕಾಂಗ್ರೆಸ್‍ನ ವಿವಿಧ ಘಟಕಗಳು ಹಸಿದವರಿಗೆ ಅನ್ನ, ಮಾಸ್ಕ್, ಪಿಪಿಇ ಕಿಟ್ ವಿತರಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುತ್ತಿವೆ. ಸಿದ್ದರಾಮಯ್ಯ ಸರಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಇಲ್ಲದಿದ್ದರೆ ಕೋರೋನಗಿಂತ ಹಸಿವಿನಿಂದಲೇ ಹೆಚ್ಚು ಜನರು ಸಾವನ್ನಪ್ಪುತ್ತಿದ್ದರು ಎಂದರು.

    ದೇಶಕ್ಕೆ ಕೋರೋನ ಮಹಾಮಾರಿ ತಗಲಿ ಮೂರು ತಿಂಗಳಾಗುತ್ತಾ ಬಂದಿದ್ದರೂ ಇದರ ವಿರುದ್ದ ಹೋರಾಟ ನಡೆಸುತ್ತಿರುವ ವೈದ್ಯರಿಗೆ, ದಾದಿಯರಿಗೆ, ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಸರ್ಕಾರ ಪೂರ್ಣವಾಗಿ ವಿತರಿಸಿಲ್ಲ. ಸಂಬಂಧಪಟ್ಟ ಮಂತ್ರಿಗಳು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟು ವೆಂಟಿಲೇಟರ್ಸ್ ಕೆಲಸ ಮಾಡುತ್ತಿವೆ. ಎಷ್ಟು ಪರೀಕ್ಷಾ ಕಿಟ್ ಖರೀದಿ ಮಾಡಲಾಗಿದೆ.

     ಯಾರಿಗೆ ವಿತರಿಸಲಾಗಿದೆ ಎಂಬುದರ ಮಾಹಿತಿಯನ್ನು ನೀಡುತ್ತಿಲ್ಲ. ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಕೇವಲ 9 ಜಿಲ್ಲಾ ಕೇಂದ್ರಗಳಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಶಿವಮೊಗ್ಗದ ಪರೀಕ್ಷಾ ಕೇಂದ್ರದಲ್ಲಿ ಯಂತ್ರ ಇದ್ದರೂ ತಂತ್ರಜ್ಞರೇ ಇಲ್ಲ. ಈ ರೀತಿಯಾದರೆ ಕೋರೋನವನ್ನು ಸಮರ್ಥವಾಗಿ ತಡೆಯಲು ಸಾಧ್ಯವೇ ಎಂದು ಹೆಚ್.ಎಂ.ರೇವಣ್ಣ ಪ್ರಶ್ನಿಸಿದರು.
ರಾಜ್ಯದಲ್ಲಿ ರೈತರ ಸ್ಥಿತಿ ಅಧೋಗತಿಗೆ ಹೋಗಿದೆ.

      ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಸರಕಾರವೇ ಕೊಂಡು ಅಗತ್ಯವಿರುವ ಬಡವರಿಗೆ ವಿತರಿಸುವ ಭರವಸೆ ನೀಡಿದ್ದ ಸರಕಾರ ಇದುವರೆಗೂ ಆ ಕೆಲಸ ಮಾಡುತ್ತಿಲ್ಲ. ಇನ್‍ಪೋಸಿಸ್ ಸೇರಿದಂತೆ ಹಲವು ಸಂಸ್ಥೆಗಳು ನೀಡಿದ್ದ ಆಹಾರ ಕಿಟ್ ಮೇಲೆ ಬಿಜೆಪಿ ಶಾಸಕರು ತಮ್ಮ ಪೋಟೋ ಹಾಕಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಮೊದಲು ರೈತರು, ಕೂಲಿ ಕಾರ್ಮಿಕರ ನೆರವಿಗೆ ಬರಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸಮರ್ಪಕವಾಗಿ ಕಟ್ಟಡ ಕಾರ್ಮಿಕರಿಗೆ ನೀಡಬೇಕು.ಇಂತಹ ವಿಚಾರಗಳಲ್ಲಿ ರಾಜಕೀಯ ಸಲ್ಲದು ಎಂದು ಹೆಚ್.ಎಂ.ರೇವಣ್ಣ ಹೇಳಿದರು.

     ಟಾಸ್ಕ್‍ಪೊರ್ಸ್‍ನ ತುಮಕೂರು ಜಿಲ್ಲಾಧ್ಯಕ್ಷ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಸರಕಾರ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕಗಳನ್ನು ನೀಡಿ, ಬಿತ್ತನೆ ಕಾರ್ಯ ಸುಗಮವಾಗಿ ನಡೆಯಲು ಸಹಕಾರ ನೀಡಬೇಕು. ಅಲ್ಲದೆ ರೈತರು ಬೆಳೆದ ಬೆಳೆಗಳು ಮಾರುಕಟ್ಟೆಗೆ ಸಾಗಿಸಲು ಅಗತ್ಯ ಕ್ರಮ ವಹಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು.

     ರಾಜ್ಯದಲ್ಲಿ ಮೊದಲ ಕೊರೊನಾ ಸಾವು ಶಿರಾದಲ್ಲಿ ಸಂಭವಿಸಿದೆಯಾದರೂ, ನಂತರ ಜಿಲ್ಲಾಡಳಿತ, ಶಿರಾ ತಾಲ್ಲೂಕು ಆಡಳಿತ ಹಾಗೂ ಜನರ ಸಹಕಾರದಿಂದ ತುಮಕೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಜಿಲ್ಲೆಯ 27 ಲಕ್ಷ ಜನರಲ್ಲಿ ಸುಮಾರು ಆರು ಲಕ್ಷ ಜನ ಕೂಲಿ ಕಾರ್ಮಿಕರಿದ್ದಾರೆ, ಕಾರ್ಮಿಕ ಇಲಾಖೆಯಲ್ಲಿ ಇರುವ ಹಣವನ್ನು ಕೂಲಿ ಕಾರ್ಮಿಕರಿಗೆ ಸಹಾಯವಾಗುವಂತೆ ಬಳಕೆ ಮಾಡಬೇಕು ಎಂದು ಜಯಚಂದ್ರ ಸರ್ಕಾರವನ್ನು ಒತ್ತಾಯಿಸಿದರು.

    ಈ ವೇಳೆ ಬೆಂಗಳೂರು ವಿಭಾಗೀಯ ಟಾಸ್ಕ್‍ಫೋರ್ಸ್ ಸಮಿತಿಯ ಸದಸ್ಯರಾದ ಶಾಸಕ ವಿ.ಮುನಿಯಪ್ಪ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಮಾಜಿ ಶಾಸಕ ಡಾ.ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮುಖಂಡರಾದ ಕೆಂಚಮಾರಯ್ಯ, ಹೊನ್ನಗಿರಿಗೌಡ, ಚೌದ್ರಿರಂಗಪ್ಪ, ಸುಜಾತ, ಪುಟ್ಟರಾಜು ಮತ್ತಿತರರು ಭಾಗವಹಿಸಿದ್ದರು. ಈ ವೇಳೆ ಜಿಲ್ಲಾ ಕಾಂಗ್ರೆಸ್‍ನಿಂದ ಆಶಾ ಕಾರ್ಯಕರ್ತೆಯರಿಗೆ 50 ಪಿಪಿಇ ಕಿಟ್ ವಿತರಿಸಲಾಯಿತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap