ಮಹಾಕಾವ್ಯ ಬರೆದವರೆಲ್ರೂ ತಳ ಸಮುದಾಯದವರೆ: ಸಿದ್ದರಾಮಯ್ಯ

ದಾವಣಗೆರೆ:

     ರಾಮಾಯಣ, ಮಹಾಭಾರತ ಸೇರಿದಂತೆ ಮಹಾಕಾವ್ಯಗಳನ್ನು ಬರೆದವರೆಲ್ಲರೂ ತಳ ಸಮುದಾಯದವರೇ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.ಜಿಲ್ಲೆಯ ಹರಿಹರದ ಮಿನಿ ವಿಧಾನಸೌಧ ಬಳಿ ಜಿಲ್ಲಾಡಳಿತ ಹಾಗೂ ಹರಿಹರ ನಗರಸಭೆ ವತಿಯಿಂದ ಏರ್ಪಡಿಸಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವಾಲ್ಮೀಕಿ ಜಯಂತಿಯ ಶುಭಾಶಯ ಕೋರಿ ಅವರು ಮಾತನಾಡಿದರು.

     ಬೇಡ ಜನಾಂಗದಲ್ಲಿ ಹುಟ್ಟಿದ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಬರೆದರೆ, ಬೆಸ್ತ ಜನಾಂಗದ ವ್ಯಾಸ ಅವರು ಮಹಾಭಾರತ ಬರೆದಿದ್ದಾರೆ. ಶಕುಂತಲ ನಾಟಕವನ್ನು ಕುರುಬ ಸಮಾಜದ ಕಾಳಿದಾಸ ರಚಿಸಿದ್ದಾರೆ. ಕುರುಬ ಸಮುದಾಯ ಕನಕದಾಸರು ನಳ ಚರಿತ್ರೆ, ಭಕ್ತಸಾರ ಕಾವ್ಯಗಳನ್ನು ರಚಿಸಿದ್ದಾರೆ. ಹೀಗೆ ಸಮಾಜಕ್ಕೆ ದಾರಿ ದೀಪ ತೋರುವ ಮಹಾ ಕಾವ್ಯಗಳನ್ನು ರಚಿಸಿದವರೆಲ್ಲರೂ ತಳ ಸಮುದಾಯದವರೇ ಆಗಿರುವುದು ಹೆಮ್ಮೆಯ ಸಂಗತಿ ಎಂದರು.

    ಮಹಾನುಭಾವರು, ಸುಧಾರಕರು, ದಾರ್ಶನಿಕರೆಲ್ಲರ ಬದುಕು, ಆದರ್ಶಗಳು ಸದಾ ಸ್ಪೂರ್ತಿ ಮತ್ತು ಪ್ರೇರಣೆ ನೀಡಲಿವೆ. ಆ ಕಾರಣಕ್ಕಾಗಿಯೇ ದಿನ ನಿತ್ಯ ಪ್ರತಿಮೆ ನೋಡಿ ಸ್ಪೂರ್ತಿ ಪಡೆಯಬೇಕೆಂಬ ಉದ್ದೇಶದಿಂದ ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಶಾಸಕರ ಭವನದ ಎದುರು ಒಂದು ಕಡೆ ಮಹರ್ಷಿ ವಾಲ್ಮೀಕಿ ಹಾಗೂ ಇನ್ನೊಂದು ಕಡೆ ಕನಕ ದಾಸರ ಬೃಹತ್ ಪ್ರತಿಮೆಗಳನ್ನು ರಚಿಸಿದ್ದೆವು ಎಂದರು.

     ಎಲ್ಲರ ಮಹಾತ್ಮರ ಜಯಂತಿ ಆಚರಿಸುವಂತೆ ಬ್ರಿಟಿಷರ ವಿರುದ್ಧ ಹೋರಾಡಿ, ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಳುಗಳಾಗಿ ಇಟ್ಟು ದೇಶದ ಸ್ವಾತಂತ್ರ್ಯ ಚಳವಳಿಗೆ ತನ್ನದೇ ಕೊಡುಗಡೆ ನೀಡಿದ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ದೊಡ್ಡ ವ್ಯಕ್ತಿಗಳು ಯಾವುದೇ ಜಾತಿ, ಧರ್ಮಕ್ಕೆ ಸೇರಿರುವುದಿಲ್ಲ. ಟಿಪ್ಪು ಮುಸಲ್ಮಾನನಾಗಿರಬಹುದು, ನಾನು ಕುರುಬನಾಗಿರಬಹುದು, ಎಸ್.ಎಸ್.ಮಲ್ಲಿಕಾರ್ಜುನ್ ಲಿಂಗಾಯತರಾಗಿರಬಹುದು. ನಾವ್ಯಾರೂ ಸಹ ಇಂತಹದ್ದೇ ಜಾತಿಯಲ್ಲಿ ಹುಟ್ಟಬೇಕೆಂಬುದಾಗಿ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ ಎಂದರು.

    ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಹರಿಹರ ಶಾಸಕ ಎಸ್.ರಾಮಪ್ಪ, ಶಾಸಕರುಗಳಾದ ಅಬ್ದುಲ್ ಜಬ್ಬಾರ್, ಪ್ರಕಾಶ್ ರಾಠೋಡ್, ಅಶೋಕ್ ಪಟ್ಟಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಎಸ್‍ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್, ಮುಖಂಡರಾದ ಎಂ.ಪಿ.ವೀಣಾ ಮಹಾಂತೇಶ್, ಪಿ.ರಾಜಕುಮಾರ, ಅಯೂಬ್ ಪೈಲ್ವಾನ್, ರೇವಣಸಿದ್ದಪ್ಪ, ನಾಗೇಂದ್ರಪ್ಪ, ಎಲ್.ಬಿ.ಹನುಮಂತಪ್ಪ, ಅಹ್ಮದ್ ಅಲಿ ಮತ್ತಿತರರು ಹಾಜರಿದ್ದರು. ವಾಣಿ, ಭಾರತಿ ಪ್ರಾರ್ಥಿಸಿದರು. ಗಿರಿಜಾಂಭಾ, ಶ್ರೀನಿಧಿ ನಾಡಗೀತೆ ಹಾಡಿದರು. ನಗರಸಭಾ ಸದಸ್ಯ ಶಂಕರ್ ಕಟಾವಕರ್ ಸ್ವಾಗತಿಸಿದರು. ಪೌರಾಯುಕ್ತೆ ಎಸ್.ಲಕ್ಷ್ಮೀ ವಂದಿಸಿದರು.

   ಯಾವುದೇ ಜಾತಿ ಇರಲಿ ನಾವೆಲ್ಲರೂ ಮನುಷ್ಯರೇ, ಪ್ರತಿಯೊಬ್ಬರಲ್ಲೂ ಮನುಷ್ಯ ಸಂಬಂಧ ಇರಬೇಕು. ಆದರೆ, 56 ಇಂಚು ಎದೆ ಇದೆ ಎಂಬುದಾಗಿ ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಎದೆ 60 ಇಂಚು ಇರಲಿ. ಆದರೆ, ಆ ಎದೆಯಲ್ಲಿ ಮಾತೃ ಹೃದಯ, ತಾಯಿಯ ಕರುಣೆ ಇರಬೇಕು. ಇದಿಲ್ಲದಿದ್ದರೇ ಏನು ಪ್ರಯೋಜನ?, ಪೈಲ್ವಾನರು, ಬಾಡಿಬ್ಯೂಲ್ಡರ್‍ಗಳಿಗೂ ದೊಡ್ಡ ಎದೆ ಇರುತ್ತದೆ. ಎದೆ ದೊಡ್ಡದಾಗಿರಲಿ, ಚಿಕ್ಕದಾಗಿರಲಿ ಬಡವರ, ರೈತರ ಪರ ಕಾಳಜಿ ಇರಬೇಕು.

-ಸಿದ್ದರಾಮಯ್ಯ,ವಿರೋಧ ಪಕ್ಷದ ನಾಯಕ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link