ಹುಳಿಯಾರು:
ಹುಳಿಯಾರಿನ ಆಜಾದ್ ನಗರದ ಬಳಿ ಪುರಾತನ ಬಾವಿ ಕುಸಿಯುತ್ತಿದ್ದು ಪಪಂ ಅಧಿಕಾರಿಗಳು ತಕ್ಷಣ ದುರಸ್ಥಿ ಮಾಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.ಇಲ್ಲಿನ ಆಜಾದ್ ನಗರದ ನುರಾನಿ ಮಸೀದಿ ಹಿಂಭಾಗದಲ್ಲಿ ಪುರಾತನ ಕಲ್ಲು ಕಟ್ಟಡದ ಬಾವಿಯೊಂದಿದೆ. ಈ ಭಾವಿ ನೀರಿಲ್ಲದೆ ಸಾರ್ವಜನಿಕ ಬಳಕೆಯಿಂದ ದೂರಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಬಾವಿಯಲ್ಲಿ ಸಾಕಟ ನೀರು ಬಂದು ಸ್ಥಳೀಯರಲ್ಲಿ ಸಂತಸ ಮೂಡಿಸಿತ್ತು.
ಆದರೆ ಬಾವಿಯಲ್ಲಿ ನೀರಿಲ್ಲದ ಕಾರಣದಿಂದ ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿಟ್ಟಿದ್ದರಿಂದ ಏಕಾಏಕಿ ನೀರು ಬಂದು ಬಾವಿಯ ಅರ್ಧಭಾಗದ ಕಲ್ಲುಗಳು ಕುಸಿದು ಬಾವಿಯೊಳಕ್ಕೆ ಬಿದ್ದಿದೆ. ಅಲ್ಲದೆ ಮತ್ತೂ ಕುಸಿಯುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಈ ಬಾವಿಯ ಸುತ್ತ ಅನೇಕ ವಾಸದ ಮನೆಗಳಿದ್ದು ಇಲ್ಲಿನ ಮಕ್ಕಳು ಬಾವಿಯ ಸಮೀಪದಲ್ಲಿ ಆಟವಾಡುತ್ತಾರೆ. ರಾತ್ರಿ ಸಂದರ್ಭದಲ್ಲಿ ಜನರು ಓಡಾಡುತ್ತಾರೆ. ಅಲ್ಲದೆ ಮಾರುತಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಹ ಇದ್ದು ಅನೇಕ ವಿದ್ಯಾರ್ಥಿಗಳು ಈ ಬಾವಿ ಸಮೀಪದಿಂದ ಶಾಲೆಗೆ ಬಂದೋಗುತ್ತಾರೆ.
ಹಾಗಾಗಿ ಕುಸಿಯುತ್ತಿರುವ ಬಾವಿಯಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳಿವೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗುವ ಸಾಧ್ಯತೆಯಿದೆ. ಅಧಿಕಾರಿಗಳು ತಕ್ಷಣ ಇತ್ತ ಗಮನ ಹರಿಸಿ ಕುಸಿಯುತ್ತಿರುವ ಬಾವಿಯನ್ನು ದುರಸ್ಥಿ ಮಾಡಿಸಿ ಇಲ್ಲಿನ ನಿವಾಸಿಗಳ ಬಳಕೆಗೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








