ತುಮಕೂರು

ವಿಶೇಷ ವರದಿ:ಆರ್.ಎಸ್.ಅಯ್ಯರ್
ದಿಬ್ಬೂರಿನಲ್ಲಿ 1200 ಮನೆಗಳ ಬೃಹತ್ ವಸತಿ ಸಂಕೀರ್ಣ ನಿರ್ಮಿಸುವಾಗ ಅದಕ್ಕೆ ಪೂರಕವಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಕೆಲವು ಕಟ್ಟಡಗಳನ್ನು ನಿರ್ಮಿಸಿದ್ದರೂ, ಸರ್ಕಾರದ ಅಸಡ್ಡೆಯಿಂದ ಅವುಗಳು ಬಳಕೆಯಾಗದೆ ಈಗ ಅಕ್ಷರಶಃ ಪಾಳುಬಿದ್ದು ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥವಾದಂತಾಗಿದೆ.
ತುಮಕೂರು ನಗರದ 6 ನೇ ವಾರ್ಡ್ ವ್ಯಾಪ್ತಿಯ ದಿಬ್ಬೂರು ಗ್ರಾಮದ ಸರ್ವೆನಂಬರ್ 4 ರಲ್ಲಿ 10 ಎಕರೆ 34 ಗುಂಟೆ ಪ್ರದೇಶದಲ್ಲಿ ಒಟ್ಟು 89 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಲಿಯು ರಾಜೀವ್ ಆವಾಸ್ ಯೋಜನೆ (ಆರ್.ಎ.ವೈ.)ಯಡಿ 1200 ಮನೆಗಳುಳ್ಳ ವಸತಿ ಸಂಕೀರ್ಣವನ್ನು ನಿರ್ಮಿಸಿದೆ.
ಜಿ ಪ್ಲಸ್ ಟು ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ನೆಲಹಂತದಲ್ಲಿ ನಾಲ್ಕು ಮನೆಗಳು ಹಾಗೂ ಅದರ ಮೇಲೆ ಮೊದಲನೇ ಮಹಡಿಯಲ್ಲಿ ನಾಲ್ಕು ಮನೆಗಳು ಹಾಗೂ ಎರಡನೇ ಮಹಡಿಯಲ್ಲಿ ನಾಲ್ಕು ಮನೆಗಳು ಸೇರಿ ಒಟ್ಟು ಒಂದು ಬ್ಲಾಕ್‍ನಲ್ಲಿ 12 ಮನೆಗಳಿವೆ. ತಹ 100 ಬ್ಲಾಕ್‍ಗಳಿಂದ ಒಟ್ಟು 1200 ಮನೆಗಳು ನಿರ್ಮಾಣಗೊಂಡಿವೆ.
4 ಚದರದ ಪ್ರತಿ ಮನೆಯಲ್ಲಿ ಒಂದು ಹಾಲ್, ಒಂದು ಕೊಠಡಿ, ಒಂದು ಅಡಿಗೆ ಕೋಣೆ, ಒಂದು ಸ್ನಾನದ ಕೋಣೆ, ಒಂದು ಶೌಚಾಲಯ ಹಾಗೂ ಹೊರಗೆ ಸಣ್ಣ ಬಾಲ್ಕನಿ ಇದೆ. ಎಲ್ಲ ಮನೆಗಳಿಗೂ ನೀರು ಮತ್ತು ವಿದ್ಯುತ್ ದೀಪದ ಸಂಪರ್ಕ ಕಲ್ಪಿಸಲಾಗಿದೆ. ಪ್ರತಿ ಬ್ಲಾಕ್‍ಗೆ ಒಂದು ನೀರಿನ ತೊಟ್ಟಿ (ಸಂಪ್) ನಿರ್ಮಿಸಿದ್ದು, ಬ್ಲಾಕ್‍ನ ಎರಡನೇ ಮಹಡಿಯ ಮೇಲೆ ಸಿಂಟೆಕ್ಸ್ ಟ್ಯಾಂಕ್‍ಗಳನ್ನು ಇರಿಸಲಾಗಿದೆ. ಆ ಮೂಲಕ ಆ ಬ್ಲಾಕ್‍ನ 12 ಮನೆಗಳಿಗೆ ನೀರು ಪೂರೈಕೆ ಆಗುತ್ತದೆ. ಈ ನೀರು ಪೂರೈಕೆಗಾಗಿ ಇಲ್ಲೊಂದು ನೀರಿನ ಟ್ಯಾಂಕ್ (ಓ.ಎಚ್.ಟಿ.) ನಿರ್ಮಿಸಲಾಗಿದೆ. ಇಡೀ ಬಡಾವಣೆಗೆ ಒಳಚರಂಡಿ, ಬೀದಿ ದೀಪ, ಟಾರ್ ರಸ್ತೆಯ ವ್ಯವಸ್ಥೆ ಮಾಡಲಾಗಿದೆ.
1200 ಮನೆಗಳೆಂದರೆ ಅದೊಂದು ಬಡಾವಣೆಯೇ ಸರಿ. ಒಂದು ಮನೆಯಲ್ಲಿ ಕನಿಷ್ಟ ಮೂರು ಜನರೆಂದರೂ, ಒಟ್ಟು 3600 ಜನರು ವಾಸಿಸುವ ತಾಣವಾಗುತ್ತದೆ. ಇಂತಹುದೊಂದು ವಸತಿ ಬಡಾವಣೆಗೆ ಪೂರಕ ಸೌಲಭ್ಯಗಳನ್ನೊದಗಿಸಲು ಕೆಲವು ಕಟ್ಟಡಗಳನ್ನು ಕಟ್ಟಲಾಗಿದೆಯಷ್ಟೇ. ಆದರೆ ಅವುಗಳನ್ನು ಬಳಸಿಕೊಳ್ಳವ ಗೊಡವೆಗೇ ಹೋಗಿಲ್ಲ. ಪರಿಣಾಮ ಅವೆಲ್ಲ ಈಗ ಪಾಳುಬಿದ್ದ ಸ್ಥಿತಿಯಲ್ಲಿವೆ.
ದಿನಾಂಕ 19-08-2017 ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮುಚ್ಛಯವನ್ನು ಉದ್ಘಾಟಿಸಿದ್ದರು. ಉದ್ಘಾಟನೆ ಗೊಂಡು ಕೇವಲ 2 ವರ್ಷಗಳಾಗಿವೆಯಷ್ಟೇ. ಅಷ್ಟು ಅಲ್ಪ ಅವಧಿಯಲ್ಲೇ 89 ಕೋಟಿ ರೂ.ಗಳ ಈ ವಸತಿ ಯೋಜನೆ ಸರ್ಕಾರದ ಅಸಡ್ಡೆಯಿಂದ ನೆಲಕಚ್ಚುವಂತಾಗುತ್ತಿದೆ.
ದಿಬ್ಬೂರು ಮುಖ್ಯರಸ್ತೆಯ ಮೂಲಕ ಈ ವಸತಿ ಸಮುಚ್ಛಯವನ್ನು ಪ್ರವೇಶಿಸುವಾಗ ಪ್ರವೇಶದ್ವಾರದ ಎಡಬದಿ ಸಮುದಾಯ ಭವನವನ್ನು ಇಲ್ಲಿನ ನಿವಾಸಿಗರ ಅನುಕೂಲಕ್ಕಾಗಿ ದೊಡ್ಡದಾಗಿಯೇ ನಿರ್ಮಿಸಲಾಗಿದೆ. ಅದೇ ಕಟ್ಟಡದಲ್ಲಿ ಎರಡು ಮಳಿಗೆಗಳೂ ಇವೆ. ಆದರೆ ಅಂದಿನಿಂದ ಈವರೆಗೆ ಒಮ್ಮೆಯೂ ಬಳಕೆಯಾಗದೆ ಈ ಇಡೀ ಕಟ್ಟಡ ಈಗ ಅನಾಥವಾಗಿದೆ. ಹೀಗೇ ಬಿಟ್ಟರೆ ಕುಸಿದುಬಿದ್ದರೂ ಅಚ್ಚರಿಯಿಲ್ಲ.
ಇದರ ಪಕ್ಕವೇ ಆಡಳಿತ ಕಚೇರಿ ಕಟ್ಟಡ-1 ಮತ್ತು ಇಲ್ಲಿನ ನಿವಾಸಿಗರಿಗೆ ವಿವಿಧ ತರಬೇತಿ ನೀಡಲು ಜೀವನೋಪಾಯ ತರಬೇತಿ ಕೇಂದ್ರ ಎಂದು ಪ್ರತ್ಯೇಕ ಕಟ್ಟಡಗಳಿವೆ. ಇವೆಲ್ಲವೂ ಸಹ ನಿರುಪಯುಕ್ತವಾಗಿ ಪಾಳುಬಿದ್ದಿವೆ. ಈ ಕಟ್ಟಡಗಳ ಹಿಂಬದಿಯ ಸಣ್ಣ ಕೊಠಡಿಯಲ್ಲಿ ಮಾತ್ರ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ನಡೆಯುತ್ತಿದೆ. ಇದರ ಪಕ್ಕ ಸ್ಥಳೀಯರ ಅನುಕೂಲಕ್ಕಾಗಿ ಮಾರುಕಟ್ಟೆ ಪ್ರಾಂಗಣವನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದರೂ, ಅದು ಬಳಕೆಯಾಗದೆ ಕೊಳಕು ಕೊಂಪೆಯಾಗಿದೆ.
ಹಂದಿ-ನಾಯಿಗಳ ತಾಣವಾಗಿದೆ. ಯಾರೋ ವೃದ್ಧರುಗಳು ಆ ಕೊಳಕಲ್ಲೇ ವಿಶ್ರಮಿಸಿಕೊಳ್ಳುವ ಸ್ಥಳವಾಗಿದೆ. ಇವಾವುದರ ಅರಿವೂ ಇಲ್ಲದ ಪುಟಾಣಿ ಮುಗ್ಧ ಮಕ್ಕಳು ಅಲ್ಲೇ ಆಟವಾಡಿಕೊಂಡೂ ಇರುತ್ತಾರೆ. ಇದರ ಬದಿಯಲ್ಲೇ ಆಡಳಿತ ಕಚೇರಿ-2 ರ ಕಟ್ಟಡವೂ ಇದ್ದು, ಅದೂ ಪಾಳು ಬಿದ್ದಿದೆ. ಇವಿಷ್ಟು ಕಟ್ಟಡಗಳ ನಡುವೆ ಒಟ್ಟು ಎರಡು ಪ್ರತ್ಯೇಕ ಶೌಚಾಲಯ ಕಟ್ಟಡಗಳಿವೆ. ಆದರೆ ಇವೂ ಸಹ ಅವುಗಳ ಹತ್ತಿರ ಹೋಗಲಾರದಷ್ಟು ಕೊಳಕಿನಿಂದ ಹಾಳಾಗಿವೆ. ಹೀಗೆ ಇಲ್ಲಿರುವ ಕಟ್ಟಡಗಳು ಅವನತಿ ಹೊಂದುತ್ತಿವೆ.
ಇದಕ್ಕೆ ಹೊಂದಿಕೊಂಡಂತೆ ಇದ್ದ ಖಾಲಿ ಜಾಗದಲ್ಲಿ ಒಂದು ಶೆಡ್ ನಿರ್ಮಿಸಿದ್ದು, ಅದನ್ನು ದೇವಾಲಯವೆಂದು ಕರೆಯಲಾಗುತ್ತಿದೆ. ಅಲ್ಲಿ ಹಂದಿಜೋಗರು ಮೊದಲಾದವರು ಅವರದ್ದೇ ಆದ ವಿಭಿನ್ನ ಸಂಪ್ರದಾಯದ ಪ್ರಕಾರ ಪೂಜೆ ಮಾಡುತ್ತಾರಂತೆ. ಪ್ರಸ್ತುತ ಈ ರೀತಿ ಶೆಡ್ ಹಾಕಿರುವುದು ವಿವಾದಾಸ್ಪದವಾಗಿದೆ. ಕಾರಣ ಇಲ್ಲಿ ಪೂಜಾದಿಗಳಿಗೆ ಅವಕಾಶ ಕೊಟ್ಟಂತೆ, ತಮಗೆ ಪ್ರಾರ್ಥನೆ ಮಾಡಲು ಅವಕಾಶ ಕೊಡಬೇಕೆಂಬ ಸಣ್ಣ ಬೇಡಿಕೆ ಇನ್ನೊಂದು ಧರ್ಮದವರಿಂದ ಕೇಳಿಬರುತ್ತಿದೆ. ಇದರ ಬದಲು ಅಲ್ಲಿ ವಿವಾದಕ್ಕೆ ಕಾರಣವಾಗಬಹುದಾದ ಯಾವುದಕ್ಕೂ ಅವಕಾಶ ಕೊಡಬಾರದೆಂಬ ಸದಾಶಯವೂ ವ್ಯಕ್ತವಾಗುತ್ತಿದೆ.
ಶಾಲೆ-ಆಸ್ಪತ್ರೆ-ಠಾಣೆ ಬೇಕು
ಇವಿಷ್ಟೂ ಒಂದು ಕಥೆಯಾದರೆ, ಮತ್ತೊಂದೆಡೆ ಈ ಸ್ಥಳದಲ್ಲಿ ಹೊಸದಾಗಿ ಒಂದು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಪ್ರಾರಂಭವಾಗಬೇಕೆಂಬುದು ಎಲ್ಲರ ಆಗ್ರಹವಾಗಿದೆ. ಬಡವರೇ ಅಧಿಕವಾಗಿರುವುದರಿಂದ ಪುಟ್ಟ ಮಕ್ಕಳು ಶಾಲೆಗೆ ಹೋಗಲು ಅನುಕೂಲವಾಗುತ್ತದೆ. ಅಂಗನವಾಡಿ ಕೇಂದ್ರವಿದ್ದರೆ ಪುಟಾಣಿ ಮಕ್ಕಳಿಗೆ ಉಪಯೋಗವಾಗುತ್ತದೆ. ಅಲ್ಲದೆ ಬೆಳಗಿನಲ್ಲಿ ಕೆಲಸಕ್ಕೆ ಹೋಗುವ ತಂದೆ-ತಾಯಿಯರಿಗೆ ಇದು ನೆರವಾಗುತ್ತದೆ ಎಂಬುದು ಅನೇಕರ ಅನಿಸಿಕೆ.
ಜೊತೆಗೆ ತುರ್ತಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯವೂ ಇದೆ. ಸಣ್ಣದೊಂದು ಆರೋಗ್ಯದ ಸಮಸ್ಯೆ ಎದುರಾದರೂ ಇಲ್ಲಿನ ನಿವಾಸಿಗರು ದೂರದ ತುಮಕೂರು ನಗರಕ್ಕೇ ಹೋಗಬೇಕಾಗುತ್ತದೆ. ಅದರಲ್ಲೂ ನಡುರಾತ್ರಿ ತುರ್ತು ಸಂದರ್ಭ ಉಂಟಾದರೆ, ದೇವರೇ ಗತಿ ಎನ್ನುವಂತಾಗಿದೆ. ಈ ಬಡಾವಣೆಯಲ್ಲಿ ಆಟೋ ಚಾಲಕರು ಇದ್ದಾರಾದರೂ, ಇಲ್ಲಿಂದ ತುಮಕೂರು ನಗರದ ಆಸ್ಪತ್ರೆಗೆ ತೆರಳಲು ಅಧಿಕ ಬಾಡಿಗೆ ಕೊಡಬೇಕಾಗುತ್ತದೆಂಬ ಅಳಲು ಇಲ್ಲಿನ ನಿವಾಸಿಗಳಲ್ಲಿದೆ. ಅದಕ್ಕಾಗಿ ಆರೋಗ್ಯ ಕೇಂದ್ರವನ್ನು ತೆರೆಯಲೇಬೇಕೆಂಬುದು ಇವರ ಹಕ್ಕೊತ್ತಾಯವಾಗಿದೆ.
ಮತ್ತೊಂದು ಪ್ರಮುಖ ಬೇಡಿಕೆಯೆಂದರೆ, ಈ ವಸತಿ ಸಮುಚ್ಛಯದಲ್ಲೊಂದು ಪೊಲೀಸ್ ಉಪಠಾಣೆ (ಔಟ್‍ಪೋಸ್ಟ್) ಬೇಕೆಂಬುದು. ವಿಭಿನ್ನ ನೆಲೆಯುಳ್ಳ ಜನರು ಇಲ್ಲಿ ವಾಸವಿದ್ದಾರೆ. 3 ಸಾವಿರಕ್ಕೂ ಅಧಿಕ ಜನರು ಇರುತ್ತಾರೆ. ವಾದ ವಿವಾದಗಳು ಉಂಟಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಇಡೀ ಬಡಾವಣೆಯ ಸುರಕ್ಷತೆ ಹಾಗೂ ಸುವ್ಯವಸ್ಥೆ ದೃಷ್ಟಿಯಿಂದ ಇಲ್ಲೊಂದು ಪೊಲೀಸ್ ಉಪಠಾಣೆಯನ್ನು ತುರ್ತಾಗಿ ನಿರ್ಮಿಸಬೇಕು ಎಂದು ಎಲ್ಲರೂ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ಜೊತೆಗೆ ಶುದ್ಧಕುಡಿಯುವ ನೀರಿನ ಘಟಕದ ಅವಶ್ಯಕತೆಯನ್ನೂ ಪ್ರಸ್ತಾಪಿಸುತ್ತಿದ್ದಾರೆ.
ಖಾಲಿ ಇರುವ ಮನೆಗಳು
ಈ ಮಧ್ಯೆ 1200 ಮನೆಗಳ ಸಂಕೀರ್ಣದಲ್ಲಿ ಖಾಲಿ ಬಿದ್ದಿರುವ ಮನೆಗಳದ್ದೂ ಒಂದು ಸಮಸ್ಯೆಯಾಗಿ ಕಾಡುತ್ತಿದೆ. ಯಾರು-ಯಾರೋ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿಕೊಂಡು ಇಲ್ಲೊಂದು ಮನೆಯನ್ನು ಮಂಜೂರು ಮಾಡಿಸಿಕೊಂಡುಬಿಟ್ಟಿದ್ದಾರೆ. ಆದರೆ ಅವರ್ಯಾರೂ ಸಹ ಇಲ್ಲಿ ವಾಸಕ್ಕೆ ಮಾತ್ರ ಬಂದಿಲ್ಲ! ಅಂಥವರ ಮನೆಗಳು ಇಲ್ಲಿ ಧೂಳು ಹಿಡಿಯುತ್ತಿವೆ. ಅವರೂ ಬಳಸುತ್ತಿಲ್ಲ; ಬೇರೆ ಫಲಾನುಭವಿಗೂ ಸಿಕ್ಕಿದಂತಿಲ್ಲ ಎಂಬ ಅಸಮಾಧಾನದ ಮಾತುಗಳು ವಸತಿ ಸಂಕೀರ್ಣದಲ್ಲಿ ಕೇಳಿಬರುತ್ತಿದೆ.
ನಿರುಪಯುಕ್ತವಾಗಿ ಪಾಳಬಿದ್ದಿರುವ ಕಟ್ಟಡಗಳಲ್ಲಿ ಹಾಗೂ ಯಾರೂ ವಾಸವಿಲ್ಲದ ಕೆಲವೊಂದು ಮನೆಗಳಲ್ಲಿ ಅನೈತಿಕ ಚಟುವಟಿಕೆಗಳೂ ನಡೆಯುತ್ತಿವೆಯೆಂಬ ಗಂಭೀರ ದೂರುಗಳಿಗೂ ಕೊರತೆಯಿಲ್ಲ. ಕಾರುಗಳಲ್ಲಿ ಯಾರು-ಯಾರೋ ಬರುತ್ತಾರೆ. ಏನು ನಡೆಯುತ್ತಿದೆಯೆಂಬುದೇ ಅರ್ಥವಾಗುವುದಿಲ್ಲ ಎನ್ನುವುದು ಈ ದೂರುದಾರರ ಅಳಲು.
ವಿದ್ಯುತ್ ಮೀಟರ್ ಅಳವಡಿಕೆಯ ನೆಪದಲ್ಲಿ ಪ್ರತಿ ಮನೆಯವರಿಂದ ಅಕ್ರಮವಾಗಿ 3600 ರೂ. ವಸೂಲು ಮಾಡಲಾಗಿದೆಯೆಂಬ ಹಾಗೂ ನೀರಿನ ಮೀಟರ್ ಅಳವಡಿಸುವುದಾಗಿ ಹೇಳಿ 4200 ರೂ. ಸಂಗ್ರಹಿಸಲಾಗಿದೆಯೆಂಬ ದೂರು ಸಹ ವ್ಯಾಪಕವಾಗಿದೆ.
ಆರೋಗ್ಯ ತಪಾಸಣೆ ಆಗಬೇಕು
ವಸತಿ ಸಂಕೀರ್ಣವು ಇಂದು ಕೊಳಕು ಕೊಂಪೆಯಾಗಿದೆ. ಒಳಚರಂಡಿ ಉಕ್ಕಿ ಹರಿದು ದುರ್ವಾಸನೆಯ ಬೀಡಾಗಿದೆ. ಇದರಿಂದ ಇಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಆದ್ದರಿಂದ ಒಡನೆಯೇ ಇವರೆಲ್ಲರ ಆರೋಗ್ಯ ತಪಾಸಣೆ ಆಗಬೇಕು ಎಂಬ ಬೇಡಿಕೆಯನ್ನು ಕೆಲವರು ಮುಂದಿಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
