ಕೊರಟಗೆರೆ
ನಮ್ಮ ಸಂಸ್ಥೆ ವಿಶೇಷ ಚೇತನರನ್ನು ಗುರುತಿಸಿ ಬೇಕಾದ ಸವಲತ್ತುಗಳನ್ನು ನೀಡುತ್ತಿದ್ದು, ಸುಮಾರು 57 ನಿರ್ಗತಿಕ ಕುಟುಂಬಗಳಿಗೆ ಮಾಸಿಕ 750 ರಿಂದ 1000 ರೂ. ವರೆಗೆ ಮಾಸಾಶನವನ್ನು ನೀಡುತ್ತಿದ್ದೇವೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಮೂವರು ವಿಶೇಷ ಚೇತನರಿಗೆ ಯೂ ಶೇಪ್ ವಾಕಿಂಗ್ ಸ್ಟಿಕ್ ಹಾಗೂ ವಾಟರ್ ಬೆಡ್ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ಧರ್ಮಸ್ಥಳ ಅಭಿವೃದ್ಧಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದಡಿ ತಾಲ್ಲೂಕಿನ ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದು, ಸಾಮಾನ್ಯ ಮನುಷ್ಯರಂತೆ ಅವರು ಕೂಡ ನಡೆದಾಡಬೇಕು ಎನ್ನುವುದು ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ. ಹುಲಿಕುಂಟೆ ಗ್ರಾಮದ ಶೈಲಜಾ, ಪದ್ಮಾವತಿ, ಕದಿರಮ್ಮರವರಿಗೆ ಈಗ ನಾನಾ ಪರಿಕರಗಳನ್ನು ನೀಡಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಅನೇಕ ವಿಶೇಷ ಚೇತನರಿಗೆ ಇನ್ನಷ್ಟು ಸವಲತ್ತುಗಳನ್ನು ನೀಡಲಾಗುವುದು ಎಂದರು.
ನಮ್ಮ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಲಾಕ್‍ಡೌನ್ ಆದ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಕೃಷಿ ಅಭಿವೃದ್ಧಿ ಸ್ವಯಂ ಉದ್ಯೋಗ ಅಗತ್ಯ ವಸ್ತುಗಳ ಖರೀದಿಗಾಗಿ ತುರ್ತು ಸಾಲ ಈಗಾಗಲೆ ವಿತರಣೆ ಮಾಡಿದ್ದೇವೆ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಲಾಕ್‍ಡೌನ್ ಸಂದರ್ಭದಲ್ಲಿಯೂ ರೈತರಿಗೆ ನೀಡಲಾಗಿದೆ. ಈ ಸಂಸ್ಥೆಯು ಉನ್ನತ ಮಟ್ಟಕ್ಕೆ ಬಂದಿದೆ. ಇದಕ್ಕೆಲ್ಲಾ ಕಾರಣ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮುಖ್ಯಸ್ಥರಾದ ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಭಾಗದ ಜನರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ, ಸ್ವಯಂ ಉದ್ಯೋಗ ಮಾಡಿ ಅವರ ಕುಟುಂಬ ನಿರ್ವಹಣೆ ಮಾಡಬೇಕು ಎನ್ನುವ ಉದ್ದೇಶದಿಂದ ಈ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಯೋಜನಾಧಿಕಾರಿ ಶ್ರೀನಿವಾಸ್ ಬಿ. ಹಾಗೂ ಮೇಲ್ವಿಚಾರಕರಾದ ಅನಿತಾ ಶೆಟ್ಟಿ, ಸಾಕಿಬಾಯಿ ಸೇವಾ ಪ್ರತಿನಿಧಿಗಳು ಮತ್ತು ಒಕ್ಕೂಟದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
