ದಾವಣಗೆರೆ :
ಪ್ರಸ್ತುತ ದಿನಗಳಲ್ಲಿ ಆನ್‍ಲೈನ್ ಅಪರಾಧಗಳು ಹೆಚ್ಚಾಗುತ್ತಿದ್ದು, ಇವುಗಳ ಬಗೆಗಿನ ಸಾಕ್ಷ್ಯಗಳನ್ನು ಸರಿಯಾಗಿ ಬಳಸಿಕೊಳ್ಳುವ ಕಲೆಯನ್ನು ಕರಗತ ಮಾಡೊಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ಕನಾಟಕ ನ್ಯಾಯಾಂಗ ಅಕಾಡೆಮಿ, ದಾವಣಗೆರೆ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ದಾವಣಗೆರೆ ಪೊಲೀಸ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ‘ವಿದ್ಯುನ್ಮಾನ ಸಾಕ್ಷ್ಯಗಳ’ ಬಗೆಗಿನ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್ ಫೋನ್ ಬಳಸುತ್ತಿದ್ದು, ಕಂಪ್ಯೂಟರ್ ಜೀವನದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಮೊಬೈಲ್ ಹಾಗೂ ಕಂಪ್ಯೂಟರ್‍ಗಳಿಂದ ವಂಚನೆಗೊಳಗಾಗುವ ಹಲವಾರು ಪ್ರಕರಣಗಳು ಹೆಚ್ಚಾಗುತ್ತಿದ್ದು, ವಂಚನೆಗೊಳಗಾದವರು ಪೊಲೀಸ್ ಠಾಣೆಗಳಲ್ಲಿ ಬಂದು ದೂರು ಸಲ್ಲಿಸಿದಾಗ ಈ ವಿದ್ಯುನ್ಮಾನ ವಂಚನೆಯ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದು ಹಾಗೂ ಅವುಗಳ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಪ್ರಕರಣ ಮುಗಿಯುವವರೆಗೂ ಪೊಲೀಸರ ಮತ್ತು ವಕೀಲರ ಜವಾಬ್ದಾರಿ ಹೆಚ್ಚಿರುತ್ತದೆ ಎಂದರು.
ಪೊಲೀಸರು ಮತ್ತು ವಕೀಲರು ಸಂಗ್ರಹಿಸುವ ವಿದ್ಯುನ್ಮಾನ ದತ್ತಾಂಶಗಳನ್ನು, ಸಾಕ್ಷ್ಯಗಳನ್ನು ನ್ಯಾಯಾಲಯದಲ್ಲಿ ಸರಿಯಾದ ರೀತಿಯಲ್ಲಿ ಹಾಜರುಪಡಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದರ ಜತೆಗೆ ತೀರ್ಪು ಬರುವವರೆಗೂ ಸಾಕ್ಷ್ಯ ಕಾಪಾಡುವುದು ಬಹು ಮುಖ್ಯವಾಗಿದೆ. ಹಾಗಾಗಿ ಈ ಕುರಿತು ಹೆಚ್ಚಿನ ತರಬೇತಿ ಹಾಗೂ ಪರಿÀಣಿತಿಯ ಅವಶ್ಯಕತೆ ಇದೆ ಎಂದು ನುಡಿದರು.
ಪ್ರಕರಣಗಳು ಸಂಭವಿಸಿದ ಸಂದರ್ಭದಲ್ಲಿ ವಿವಿಧ ಎಲೆಕ್ಟ್ರಾನ್ಸಿಕ್ ಸಾಧನಗಳಾದ ಮೊಬೈಲ್, ಕಂಪ್ಯೂಟರ್, ಸಿ.ಡಿ, ಡಿ.ವಿ.ಡಿ, ಪೆನ್‍ಡ್ರೈವ್, ಬಳಕೆ ಹಾಗೂ ಡಿಜಿಟಲ್ ಎವಿಡೆನ್ಸ್ ಎಂದರೆ ಏನು ಎಂಬ ಬಗೆಗೆ ತರಬೇತಿ ಹೊಂದುವುದು ಮುಖ್ಯವಾಗುತ್ತದೆ. ಈ ಕುರಿತು ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿಗಳಿಗೆ ತರಬೇತಿ ಇರುತ್ತದೆ. ಆದರೆ, ಉಳಿದ ಪೊಲೀಸರು ಪ್ರಕರಣ ನಿರ್ವಹಿಸುವ ವಕೀಲರು ಹಾಗೂ ವರದಿ ಮಾಡುವ ಮಾಧ್ಯಮದವರಿಗೆ ಈ ಬಗೆಗೆ ಅಗತ್ಯ ಜ್ಞಾನ ಪರಿಣಿತಿ ಇರಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ನೆರವಾಗಲಿದೆ ಎಂದರು. ಪ್ರತಿಯೊಂದು ಕೆಲಸ ಕಾರ್ಯಗಳು ಇಂದು ಕಂಪ್ಯೂಟರ್ ಹಾಗೂ ಆನ್‍ಲೈನ್ ಆಗಿವೆ. ಯಾವುದೇ ಒಂದು ಶುಲ್ಕ ಪಾವತಿಗೂ ಆನ್‍ಲೈನ್ ಚಲನ್ ದೊರೆಯುತ್ತದೆ. ಹಾಗಾಗಿ ಕಂಪ್ಯೂಟರಿನ್ ಯಾವ ಯಾವ ಭಾಗದಲ್ಲಿ ಏನೇನಿರುತ್ತದೆ. ಆ ವಿವಿಧ ಭಾಗಗಳ ಬಳಕೆ ಹಾಗೂ ಅದರಿಂದ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಬೇಕಾಗಿರುವುದು ಮುಖ್ಯವಾಗಿದೆ. ಕೆಲವು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ವರ್ಷ ನಡೆಯುವದರಿಂದ ಸಂಪೂರ್ಣ ಪ್ರಕರಣ ಮುಗಿಯುವವರೆಗೂ ವಿದ್ಯುನ್ಮಾನ ಸಾಕ್ಷ್ಯಗಳನ್ನು ಸಂಗ್ರಹಿಸಿಡುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.
ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿ ಹಾಗೂ ದಾವಣಗೆರೆ ಆಡಳಿತ್ಮಾತಕ ನ್ಯಾಯಾಧೀಕರಣದ ನ್ಯಾಯಾಧೀಶರಾದ ಎಸ್.ಜಿ ಪಂಡಿತ್ ಮಾತನಾಡಿ, ಇಂದು ಒಬ್ಬ ಸಾಮಾನ್ಯ ಮನುಷ್ಯ ನ್ಯಾಯಾಧೀಶರಿಗೆ ತಮ್ಮ ಮನವಿ ಮನವರಿಕೆ ಮಾಡಿಕೊಡಲು ಸಾಕ್ಷ್ಯ ಎಂಬುದು ಬಹಳ ಮುಖ್ಯವಾಗಿರುತ್ತದೆ. ಸಾಕ್ಷ್ಯ ಎಂಬುದು ಯಾವುದೇ ಒಂದು ಪ್ರಕರಣಕ್ಕೆ ಅಡಿಪಾಯ ನನ್ನ ಅಭಿಪ್ರಾಯದಲ್ಲಿ ಸರಿಯಾದ ಸಾಕ್ಷ್ಯವಿಲ್ಲದಿದ್ದರೆ ಯಾವ ಪ್ರಕರಣಗಳ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಹಾಗಾಗಿ ಸಾಕ್ಷ್ಯ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ ಸಾಕ್ಷ್ಯಗಳಾಗಿ ಬಳಕೆಯಾಗುವಲ್ಲಿ ಕಂಪ್ಯೂಟರ್ ಸಿ.ಸಿಟಿವಿ ಪೆನ್‍ಡ್ರೈವ್, ಗ್ಯಾಜೆಟ್ ಪ್ರಮುಖವಾದವುಗಳು. ಇಂದು ನಾವು ಬಳಸುವ ಮೊಬೈಲ್ ಪೋನ್ ವರ್ಷನ್ ನಾಳೆ ಹಳತಾಗಿರುತ್ತದೆ. ಆದರೆ ಮಾತನಾಡಲು ಬಳಸುತ್ತಿದ್ದ ಮೊಬೈಲ್ ಇಂದು ಕ್ಯಾಮರಾ, ಸ್ಕ್ಯಾನರ್ ಆಗಿಯೂ ಬಳಕೆಯಾಗುತ್ತದೆ. ಹಾಗಾಗಿ ಮುಂದುವರಿದ ತಂತ್ರಜ್ಞಾನದಲ್ಲಿ ವಿದ್ಯುನ್ಮಾನ ಸಾಕ್ಷ್ಯಗಳ ಸಂಗ್ರಹಿಸಿ, ಬಳಸಿಕೊಳ್ಳುವ ಪರಿಣಿತಿಯನ್ನು ಹೊಂದಬೇಕು ಎಂದರು.
ಸೈಬರ್ ಸೆಕ್ಯೂರಿಟಿ ಕಾನೂನು ತರಬೇತರುದಾರ ಡಾ.ಅನಂತಪ್ರಭು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮಾ ಬಸವಂತಪ್ಪ, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಎಂ.ಭೃಂಗೇಶ್, ನಿವೃತ್ತ ನ್ಯಾಯಮೂರ್ತಿ ಎಸ್ ಆರ್ ಸೋಮಶೇಖರ್, ಸೈಬರ್ ಕ್ರೈಂ ವಿಭಾಗದ ಪೊಲೀಸ್ ಇನ್ಸಪೆಕ್ಟರ್ ಯಶವಂತಕುಮಾರ್, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ದೇವೆಂದ್ರಪ್ಪ ಯಮುನಪ್ಪ ಬಸಾಪುರ, ನ್ಯಾಯಾಧೀಶರಾದ ಕೆಂಗಬಾಲಯ್ಯ, ಪ್ರಭು ಬಡಿಗೇರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








