ಬೆಂಗಳೂರು
ಕೇಂದ್ರ ಸರಕಾರದ ಮಧ್ಯಂತರ ಆಯವ್ಯಯ ಪತ್ರದಲ್ಲಿ ರೈತರಿಗೆ ವರ್ಷಕ್ಕೆ 6,000 ರೂ. ನೆರವು ನೀಡುವ ಯೋಜನೆಗೆ 2 ಹೆಕ್ಟೇರ್ ಮಿತಿ ಹೇರಿದ್ದು ಸರಿಯಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಕೇಂದ್ರ ಸಚಿವ ಪೀಯೂಷ್ ಗೋಯೆಲ್ ಶುಕ್ರವಾರ ಮಂಡಿಸಿದ ಮಧ್ಯಂತರ ಆಯವ್ಯಯ ಕುರಿತು ಪ್ರತಿಕ್ರಿಯಿಸಿರುವ ಅವರು, `ಇಂದು ಇಡೀ ದೇಶದಲ್ಲಿ ಕೃಷಿ ವಲಯ ಸಂಕಷ್ಟದಲ್ಲಿದ್ದು, ರೈತರೆಲ್ಲರೂ ತತ್ತರಿಸಿದ್ದಾರೆ. ಹೀಗಿರುವಾಗ, ಜಮೀನಿನ ಒಡೆತನದ ಮೇಲೆ ಯಾವುದೇ ಮಿತಿ ಹೇರದೆ ಎಲ್ಲ ರೈತರಿಗೂ ಈ ನೆರವು ನೀಡಬೇಕಾಗಿತ್ತು. ಇದರಿಂದ ರೈತ ಸಮುದಾಯಕ್ಕೆ ಸಹಾಯಹಸ್ತ ಚಾಚಿದಂತಾಗುತಿತ್ತು,” ಎಂದಿದ್ದಾರೆ.
“ಇದೇ ರೀತಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರು 60 ವರ್ಷಗಳನ್ನು ಪೂರೈಸಿದ ನಂತರ ಮಾಸಿಕ ಕೇವಲ 3,000 ರೂ. ಪಿಂಚಣಿ ಘೋಷಿಸಲಾಗಿದೆ. ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಗೆ ಕೊಡಬೇಕಾಗಿತ್ತು. ಹೀಗೆ ಮಾಡಿದ್ದರೆ ಮಾತ್ರ ಅಸಂಘಟಿತ ವಲಯದ ಕಾರ್ಮಿಕರಿಗೆ ನಿಜವಾದ ನೆರವು ಸಿಗುತ್ತಿತ್ತು,” ಎಂದು ದೇಶಪಾಂಡೆ ನುಡಿದಿದ್ದಾರೆ.
“ಮೀನುಗಾರ ಸಮುದಾಯದ ನೆರವಿಗೆ ಹೊಸದಾಗಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸುವುದಾಗಿ ಘೋಷಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ,” ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.