ಚಿತ್ರದುರ್ಗ:
ಶಿಕ್ಷಣ ಇಲಾಖೆ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣಕ್ಕೆ ಪೂರಕವಾಗಿ ನೈತಿಕ ಮೌಲ್ಯವುಳ್ಳ ಶಿಕ್ಷಣ ನೀಡುವುದೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲ ಉದ್ದೇಶ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಹೇಳಿದರು .ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್-ಕರ್ನಾಟಕ ಜಿಲ್ಲಾ ಸಂಸ್ಥೆಯಿಂದ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ಸಂಸ್ಥಾಪಕ ದಿನಾಚರಣೆ, ಜಿಲ್ಲಾ ರ್ಯಾಲಿ, ಸಮವಸ್ತ್ರ ವಿತರಣೆ, ಸ್ಥಳೀಯ ಸಂಸ್ಥೆ ಕಚೇರಿ ಉದ್ಘಾಟನೆ, ಹಿರಿಯ ಸ್ಕೌಟರ್ಸ್-ಗೈಡರ್ಸ್ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕ ಲಾರ್ಡ್‍ಬೇಡೆನ್ ಪೋವೆಲ್‍ರವರ ಜನ್ಮದಿನಾಚರಣೆಯನ್ನು ಸಂಸ್ಥಾಪಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಎಲ್ಲರನ್ನು ಸಮಾನವಾಗಿ ನೋಡುವ ಮನೋಭಾವ ಮುಖ್ಯ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಹೋದರತ್ವ ಸಮಾನತೆ ಆಧಾರದ ಮೇಲೆ ನಿಂತಿದೆ. ದೇಶದಲ್ಲಿ ಐದು ಕೋಟಿ ಮಕ್ಕಳು ಹತ್ತು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸಂಸ್ಥೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಸರ್ವ ಶ್ರೇಷ್ಟವಾದ ವಿಚಾರವನ್ನು ಅಳವಡಿಸಿಕೊಳ್ಳಬಹುದು. ಕಬ್ಬಿಣದ ಕಡಲೆಯಾಗಿರುವ ಆಧ್ಯಾತ್ಮಿಕ ವಿಚಾರವನ್ನು ಮಕ್ಕಳ ಹೃದಯ ಹಾಗೂ ಮೆದುಳಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ 45 ವರ್ಷಗಳಿಂದಲೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯನ್ನು ಪ್ರಬಲವನ್ನಾಗಿ ಮಾಡಲು ಹೊರಟಿದ್ದೇನೆ. ಇದಕ್ಕೆ ಮಠಾಧೀಶರು, ಶಿಕ್ಷಣ ಇಲಾಖೆಯವರ ಸಹಕಾರ ಮುಖ್ಯವಾಗಿ ಬೇಕು.ಸಿದ್ದಗಂಗಾ ಶ್ರೀಗಳ ನಿಧನ ನಮ್ಮ ಸಂಸ್ಥೆಗೆ ನಷ್ಟವುಂಟು ಮಾಡಿದೆ ಎಂದು ನೋವಿನಿಂದ ನುಡಿದರು.
ಕರ್ನಾಟಕ ರಾಜ್ಯದಲ್ಲಿ ಐದುವರೆ ಲಕ್ಷ ಮಕ್ಕಳು ನಮ್ಮ ಸಂಸ್ಥೆಯಲ್ಲಿದ್ದಾರೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿವಂಗತ ಕೊಂಡಜ್ಜಿಬಸಪ್ಪನವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸಂಸ್ಥೆಯ ಭೀಷ್ಮ ಎಂದು ಸ್ಮರಿಸಿಕೊಂಡ ಪಿ.ಜಿ.ಆರ್.ಸಿಂಧ್ಯಾ ರಾಜ್ಯದಲ್ಲಿ ಅವರ ಹೆಸರು ಚಿರಾಯುವಾಗಿ ಉಳಿದಿದೆ ಎಂದರೆ ಅದಕ್ಕೆ ಅವರ ಸೇವೆ ಕಾರಣ ಎಂದು ನೆನಪಿಸಿಕೊಂಡರು.
ಸಂಸ್ಥೆಯಲ್ಲಿ ಜಿಲ್ಲಾ ಪದಾಧಿಕಾರಿಗಳಾಗಿ ದುಡಿಯುತ್ತಿರುವವರನ್ನು ಸನ್ಮಾನಿಸುತ್ತಿರುವುದು ಅತ್ಯುತ್ತಮವಾದುದು. ಅದೇ ರೀತಿ ದಿವಂಗತರಾಗಿರುವವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಸರ್ವಧರ್ಮ ಪ್ರಾರ್ಥನೆಯನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ. ಜೀವನದ ಕಲೆಯನ್ನು ಮಕ್ಕಳು ಕಲಿಯಬೇಕು. ಪ್ರಕೃತಿ, ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಕಲಿಸಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವಂತಹ ಶಿಕ್ಷಣ ಮಕ್ಕಳಿಗೆ ಕೊಡುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದು ಹೇಳಿದರು.
ಮಕ್ಕಳನ್ನು ಕೇವಲ ಅಂಕಗಳಿಗಷ್ಟೆ ತಯಾರು ಮಾಡಲಾಗುತ್ತಿದೆ. ಐ.ಎ.ಎಸ್., ಕೆ.ಎ.ಎಸ್., ಸಿ.ಇ.ಟಿ.ಪರೀಕ್ಷೆ ಮಕ್ಕಳಿಗೆ ಬೇಕು. ಜೊತೆಗೆ ಮನೋಸ್ಥೈರ್ಯದಿಂದ ಬದುಕುವುದನ್ನು ಮಕ್ಕಳಿಗೆ ಪಠ್ಯದ ಜೊತೆಗೆ ಕಲಿಸಬೇಕು. ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಿಸಬೇಕಾಗಿರುವುದರಿಂದ ಕ್ರಿಯಾ ಯೋಜನೆ ತಯಾರಿಸಿ. ಅದಕ್ಕಾಗಿ 25 ಲಕ್ಷ ರೂ.ಗಳನ್ನು ನೀಡುತ್ತೇನೆ ಎಂದು ಭರವಸೆ ಕೊಟ್ಟರು.
ಇದರಿಂದ ಹತ್ತು ವರ್ಷದ ನಂತರ ಮಳೆ ಪ್ರಮಾಣ ಹೆಚ್ಚಾಗಲಿದೆ. ಮರಳು, ಚಿನ್ನ, ಕಬ್ಬಿಣವನ್ನು ಭೂಮಿಯಿಂದ ಹೊರಗೆ ತೆಗೆಯಬಾರದು. ಇದರಿಂದ ಸಮಾಜದ ಸ್ಥಾಸ್ಥ್ಯ ಹಾಳಾಗುತ್ತದೆ. ನೀರು, ಕಾಡಿನ ಸಂರಕ್ಷಣೆ ಮಾಡುವುದಾಗಿ ಮಕ್ಕಳು ಮತ್ತು ಶಿಕ್ಷಕರುಗಳು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಹದಿನಾಲ್ಕು ನಿಯಮಗಳಿವೆ. ಒಂದೊಂದು ನಿಯಮಗಳನ್ನು ಪಾಲಿಸಿದರೆ ಸಾಕು ಸಮಾಜಕ್ಕೆ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ. ಮಕ್ಕಳ ಸಮವಸ್ತ್ರಕ್ಕೆ ಎರಡು ಲಕ್ಷ ರೂ. ನೀಡುತ್ತೇನೆ. ರಾಜ್ಯದಲ್ಲಿ ಹತ್ತು ಲಕ್ಷ ಮಕ್ಕಳಿಗೆ ನಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ. ಶಿಕ್ಷಕರುಗಳು ಕಡ್ಡಾಯವಾಗಿ ತರಬೇತಿ ಪಡೆದಿರಬೇಕು ಎಂದು ಸೂಚಿಸಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ಆಶೀರ್ವಚನ ನೀಡಿ ಮಕ್ಕಳು ಪುಸ್ತಕಗಳ ಹುಳುಗಳಾಗದೆ ಹೆಚ್ಚು ಅಂಕಗಳನ್ನು ಪಡೆಯುವ ಬದಲು ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಮೊದಲು ನಾನು ನಂತರ ದೇಶ ಎನ್ನುವ ಪರಿಸ್ಥಿತಿ ಉಚಿಟಾಗಿದೆ. ಹಾಗಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮೂಲಕ ದೇಶಭಕ್ತಿ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿ ದೇಶದ ಇಂದಿನ ಕಲುಷಿತ ವಾತಾವರಣದಲ್ಲಿ ಮತ್ಸದಿಗಳ, ಹಿರಿಯರ ಮಾತು ಮಾರ್ಗದರ್ಶನ ಮಕ್ಕಳಿಗೆ ಪ್ರೇರಣೆಯಾಗಬೇಕು. ಯಾವುದೇ ಒಂದು ಸಂಸ್ಥೆಯನ್ನು ಸದುದ್ದೇಶದಿಂದ ಹುಟ್ಟುಹಾಕಿದರೆ ನೂರಾರು ವರ್ಷಗಳ ಕಾಲ ಪ್ರಗತಿಯತ್ತ ಮನ್ನಡೆಯುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸ ಭಾಗ್ಯವನ್ನು ಪ್ರತಿ ವರ್ಷವು ಕಲ್ಪಿಸುತ್ತಿರುವುದು ಸಂತೋಷದ ಸಂಗತಿ. ಸಮವಸ್ತ್ರವನ್ನು ಎಲ್ಲರೂ ಧರಿಸಲು ಆಗುವುದಿಲ್ಲ. ಧ್ಯೇಯ, ಉದ್ದೇಶ, ದೇಶಕ್ಕೆ ಸಮರ್ಪಣೆ ಮಾಡುವ ಸಂಕಲ್ಪ ತೊಡಬೇಕು. ಧರ್ಮದ ಹೆಸರಿನಲ್ಲಿ ಯುದ್ದ ನಡೆಯುತ್ತಿರುವುದು ವಿಷಾಧದ ಸಂಗತಿ. ಧರ್ಮದ ತಿರುಳನ್ನು ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕರೆ ನೀಡಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಎಂ.ಆರ್.ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಎಂ.ರೇವಣಸಿದ್ದಪ್ಪ, ಗೈಡ್ಸ್ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ್, ಸ್ಕೌಟ್ಸ್ ಆಯುಕ್ತ ಚಳ್ಳಕೆರೆ ಯರ್ರಿಸ್ವಾಮಿ, ಸ್ಥಳೀಯ ಸಂಸ್ಥೆ ಅಧ್ಯಕ್ಷ ಡಿ.ಎಲ್.ಭೀಮಾರೆಡ್ಡಿ, ಜಿಲ್ಲಾ ಸಹ ಕಾರ್ಯದರ್ಶಿ ಡಾ.ರಹಮತ್‍ವುಲ್ಲಾ, ಜಿಲ್ಲಾ ಖಜಾಂಚಿ ಅನ್ವರ್‍ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಜಿಲ್ಲಾ ನೋಡಲ್ ಅಧಿಕಾರಿ ಡಿ.ಹನುಮಂತರಾಯಪ್ಪ, ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಜಯಶ್ರಿಷಾ, ಎಂ.ಕೆ.ತಾಜ್‍ಪೀರ್, ಶಶಿಕಲ ರವಿಶಂಕರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪಿ.ವೈ.ದೇವರಾಜ್‍ಪ್ರಸಾದ್, ಹೊಳಲ್ಕೆರೆ ಸಂಸ್ಥೆ ಕಾರ್ಯದರ್ಶಿ ಜಾದು ಮೋಹನ್‍ಕುಮಾರ್ ಸ್ಭೆರಿದಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








