ಚಿತ್ರದುರ್ಗ
ಬಹುತೇಕ ಗ್ರಾಮೀಣರು ಕೃಷಿಯಿಂದ ವಿಮುಖರಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಅಲ್ಲಿ ಸ್ವಾಭಿಮಾನ ಕಳೆದುಕೊಂಡು ನರಕ ಜೀವನ ನಡೆಸುತ್ತಿದ್ದು, ಅಂತವರಿಗೆ ಶ್ರೀಗಂಧ ಬೆಳೆದು ಶ್ರೀಮಂತರಾಗಿರುವ ಕವಿತಾ ಅವರ ಬದುಕು ಮಾದರಿಯಾಗಬೇಕು. ಈ ರೀತಿಯ ನೈತಿಕ ಬಲ,ಸ್ಪೂರ್ತಿ ತುಂಬುವುದೇ ಮತ್ತೆ ಕಲ್ಯಾಣದ ಉದ್ದೇಶವೆಂದು ಸಾಣೇಹಳ್ಳಿಯ ಡಾ.ಶ್ರೀಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು
ಇಲ್ಲಿನ ತರಾಸು ರಂಗಮಂದಿರದಲ್ಲಿ ಸಹಮತ ವೇದಿಕೆವತಿಯಿಂದ ಆಯೋಜಿಸಲಾಗಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಪಾಲ್ಗೊಂಡು ಶ್ರೀಗಳು ಮಾತನಾಡಿದರು ಕಾಯಕ ,ದಾಸೋಹ ಪ್ರಜ್ಞೆ ಮೈಗೂಡಿಸಿಕೊಳ್ಳುವ ಜಾಗೃತಿಯನ್ನು ಮೂಡಿಸುವುದು ಮತ್ತೆ ಕಲ್ಯಾಣದ ಪ್ರಮುಖ ಉದ್ದೇಶಗಳಲ್ಲೊಂದು. ಸಾಣೇಹಳ್ಳಿಯಲ್ಲಿ ಯುವಕರಿಗೆ ವಚನಕಾರರ ಬದುಕು-ಬರಹಗಳ ಕುರಿತಂತೆ ತರಬೇತಿ ನೀಡಲಾಗುದು ಎಂದರು
ಶರಣರು ಕಾಯಕ-ದಾಸೋಹಕ್ಕೆ ಎಲ್ಲಿಲ್ಲದ ಮಹತ್ವ ನೀಡಿದ್ದರು. ಯಾವ ಕಾಯಕವೂ ಮೇಲಲ್ಲ, ಕೀಳಲ್ಲ. ಆ ಕಾಯಕದ ಮೂಲಕವೇ ದೇವರನ್ನು ಕಾಣುವ ಅಧ್ಯಾತ್ಮಿಕ ದಾರಿಯನ್ನು ಕಂಡುಕೊಂಡಿದ್ದರು. ಕಾಯಕದಿಂದ ಬಂದ ಫಲವನ್ನು ಹಂಚಿ ಉಣ್ಣುವ ದಾಸೋಹಪ್ರಜ್ಞೆಯನ್ನೂ ಮೈಗೂಡಿಸಿಕೊಂಡಿದ್ದರು. ಇದರಿಂದಾಗಿ ಸಮ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದರು.
ಇಂದಿನ ದಿನಮಾನದಲ್ಲಿ ಎಲ್ಲದಕ್ಕೂ ದೇವರು ಯಾಗ,ಹೋಮಗಳನ್ನು ಮಾಡುವುದರ ಮೂಲಕ ನಮ್ಮ ಸಮಸ್ಯೆ ಪರಿಹಾರ ವಾಗುತ್ತದೆ ಎಂದು ಆದರೆ ಇವುಗಳನ್ನು ಮಾಡಿಸುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಕಾಯಕದ ಮೂಲಕ ನಮ್ಮ ಸಮಸ್ಯೆಗಳು ಪರಿಹಾರವಾಗಬೇಕಿದೆ ಇಂದು ಜಗತ್ತು ವೈಜ್ಞಾನಿಕವಾಗಿ ತುಂಬಾ ಸುಧಾರಣೆಯಾಗಿದೆ. ಆದರೆ ನೈತಿಕವಾಗಿ ಅಧಃಪತನ ಹೊಂದಿದೆ. ಆಧುನಿಕ ತಂತ್ರಜ್ಞಾನದಿಂದ ಜಗತ್ತೆ ಅಂಗೈಗೆ ಬಂದಿದ್ದರೂ ನೆಮ್ಮದಿ ಇಲ್ಲವಾಗಿದೆ ಎಂದರು.
ಸಕಲಜೀವಾತ್ಮರಿಗೆ ಒಳಿತನ್ನು ಬಯಸುವುದೇ ನಿಜವಾದ ಧರ್ಮ. ಶರಣರು ಯಾರ ಮುಂದೆಯೂ ಕೈಯೊಡ್ಡಲಿಲ್ಲ. ಕೈಯಿಂದ ದುಡಿಯುವ ಕಾಯಕವನ್ನು ಕಲಿಸಿದರು. ಕೈ ಎತ್ತಿ ಕೊಡುವ ದಾಸೋಹ ಪ್ರಜ್ಞೆಯನ್ನು ಬೆಳೆಸಿದರು. ಕಾಯಕದಿಂದ ಬಂದ ಸಂಪತ್ತನ್ನು ದಾಸೋಹ ರೂಪದಲ್ಲಿ ನೀಡಿದರೆ ಆರ್ಥಿಕ ಸಮಾನತೆಯನ್ನು ಕಾಣಬಹುದು. ಆ ಮೂಲಕ ಶರಣರು ಸಮಸಮಾಜದ ಬೀಜವನ್ನು ಬಿತ್ತಿದರು. ಇಂದು ಮತ್ತೆ ಆ ಬೀಜವನ್ನು `ಮತ್ತೆ ಕಲ್ಯಾಣ’ ಕಾರ್ಯಕ್ರಮದ ಜನಮಾನಸದಲ್ಲಿ ಬಿತ್ತಲಾಗುತ್ತಿದೆ ಎಂದು ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.
ಇಂದು ನಮ್ಮ ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿ, ಇನ್ನೊಂದು ಕಡೆ ಅನಾವೃಷ್ಟಿ. ಇವೆರಡರ ಮಧ್ಯೆ ಸಮತೋಲನ ಬರುವಂತೆ ಕಾರ್ಯಯೋಜನೆಯನ್ನು ತುರ್ತಾಗಿ ಸರಕಾರ ರೂಪಿಸಬೇಕು. ಬಹುಷಃ 10 ವರ್ಷಗಳಿಗೆ ಇಡೀ ರಾಜ್ಯಕ್ಕೆ ಆಗಬಹುದಾಗಿದ್ದ ನೀರು ಸಮುದ್ರ ಸೇರಿದೆ. ಅಲ್ಲದೆ ಅನೇಕ ಅನಾಹುತಳನ್ನೂ ಸೃಷ್ಟಿಸಿದೆ. ಹೀಗೆ ಹೆಚ್ಚಾದ ನೀರನ್ನು ಬರಗಾಲಕ್ಕೊಳಗಾಗುವ ಪ್ರದೇಶಗಳ ಕೆರೆ-ಕಟ್ಟೆಗಳಿಗೆ ತುಂಬಿಸುವ ಕಾರ್ಯಕ್ಕೆ ಸರ್ಕಾರ ದೀರ್ಘಾವಧಿ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳುವ ಅನಿರ್ವಾತೆಯನ್ನು ಸರಕಾರ ಗಮನಿಸಬೇಕು ಎಂದು ಪಂಡಿತಾರಾಧ್ಯ ಶ್ರೀಗಳು ಸರ್ಕಾರಕ್ಕೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಗಿನಲೆ ಶ್ರೀ ಈಶ್ವರಾನಂದ ಪುರಿ ಶ್ರೀಗಳು ಮಾದಾರ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಸಾಹಿತಿಗಳಾದ ಲೋಕೇಶ್ ಆಗಸನಕಟ್ಟೆ ಪ್ರಾಧ್ಯಾಪಕರಾದ ಕರಿಯಪ್ಪ ಮಾಳಿಗಿ ಭಾಗವಹಿಸಿದ್ದರು ನಂತರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ವೇದಿಕೆಯಲ್ಲಿ ಇದ್ದವರು ಮಾತ್ರವಲ್ಲದೆ ಚುನಾಯಿತ ಪ್ರತಿನಿಧಿಗಳು ಸಹಾ ಉತ್ತರ ನೀಡಿದರು.