ತುಮಕೂರು
ತುಮಕೂರು ತಾಲ್ಲೂಕಿನಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ಜಮೀನು ಮತ್ತು ಜಾಗಗಳಿಗೆ ಸಂಬಂಧಿಸಿದಂತೆ ಸರ್ವೆ ಮಾಡಿಸಿ, ಹದ್ದುಬಸ್ತು ಗುರುತಿಸುವ ಬಗ್ಗೆ ತುಮಕೂರು ತಾಲ್ಲೂಕು ತಹಸೀಲ್ದಾರ್ ಅವರೊಂದಿಗೆ ತುಮಕೂರು ತಾಲ್ಲೂಕು ಪಂಚಾಯಿತಿಯು ಚರ್ಚೆ ನಡೆಸಿದ ಮಹತ್ವದ ಬೆಳವಣಿಗೆ ನಡೆದಿದೆ.
ತಾಲ್ಲೂಕಿನ ಸರ್ಕಾರಿ ಶಾಲೆಗಳ ಜಾಗವನ್ನು ಗುರುತಿಸಿ ದಾಖಲೆಗಳನ್ನು ಸಿದ್ಧಪಡಿಸಬೇಕೆಂಬ ಬಗ್ಗೆ ತುಮಕೂರು ತಾಲ್ಲೂಕು ಪಂಚಾಯಿತಿ ಸಭೆಗಳಲ್ಲಿ ಸದಸ್ಯರುಗಳು ಪಕ್ಷಭೇದವಿಲ್ಲದೆ ಪ್ರಸ್ತಾಪಿಸಿ, ತಹಸೀಲ್ದಾರ್ ಅವರನ್ನು ಕರೆಸಿ ಚರ್ಚಿಸಬೇಕೆಂದು ಆಗ್ರಹಿಸುತ್ತಲೇ ಇದ್ದರು.
ಈ ಹಿನ್ನೆಲೆಯಲ್ಲಿ ಹಿಂದಿನ ತಾ.ಪಂ. ಸಭೆಗೆ ಆಗಮಿಸಿದ್ದ ತಹಸೀಲ್ದಾರ್ ಯೋಗಾನಂದ್ ಅವರು ಈ ಬಗ್ಗೆ ಸ್ವತಃ ತಾವೇ ದಿನಾಂಕ ನಿಗದಿಪಡಿಸಿ, ಅಂದು ಈ ಬಗ್ಗೆಯೇ ವಿಶೇಷವಾಗಿ ಚರ್ಚಿಸಬಹುದು ಎಂದು ಕೋರಿದ್ದರು. ಅದರಂತೆ ವಿಶೇಷ ಸಭೆ ನಡೆದು, ಚರ್ಚಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಜೈಶಂಕರ್, ತುಮಕೂರು ತಾಲ್ಲೂಕಿನ 503 ಸರ್ಕಾರಿ ಶಾಲೆಗಳ ಪೈಕಿ, 402 ಶಾಲೆಗಳಿಗೆ ಜಾಗವಿದೆ. ಇವುಗಳಿಗೆ ಮೂಲ ದಾಖಲೆಯನ್ನು ಮಾಡಿಕೊಡಬೇಕಾಗಿದೆ ಎಂದು ಕೋರಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳೂ ಇದಕ್ಕೆ ದನಿಗೂಡಿಸುತ್ತ, ಅನೇಕ ಸರ್ಕಾರಿ ಶಾಲೆಗಳಿಗೆ ಈಗ ಜಾಗದ ಸಮಸ್ಯೆ ಎದುರಾಗಿದೆ. ಹಿಂದೆ ಯಾವಾಗಲೋ ದಾನಿಗಳು ಜಮೀನನ್ನು ದಾನ ಮಾಡಿದ್ದರು. ಆದರೆ ಈಗ ಸದರಿ ದಾನಿಗಳ ಸರ್ಕಾರಿ ಶಾಲೆಗಳ ಜಾಗ ಉಳಿಸಬೇಕು ಎಂದು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಯೋಗಾನಂದ್, ಹಾಲಿ ಇರುವ ಸರ್ಕಾರಿ ಶಾಲೆಗಳು ಗ್ರಾಮಠಾಣಾದಲ್ಲಿ ಇದ್ದರೆ ಅದಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಬಹುದು. ಆ ಜಾಗ ಸರ್ವೆ ನಂಬರ್‍ನಲ್ಲಿದ್ದರೆ ಅಥವಾ ವ್ಯಕ್ತಿಗಳಿಂದ ದಾನವಾಗಿ ಬಂದಿದ್ದರೆ, ಅಂತಹ ಸ್ಥಳದಲ್ಲಿ ಈಗಾಗಲೇ ಶಾಲಾ ಕಟ್ಟಡ ನಿರ್ಮಿಸಿದ್ದರೆ, ಅಂತಹವುಗಳನ್ನು ಗುರುತಿಸಿ ಸಂಬಂಧಿಸಿದ ರೆವಿನ್ಯೂ ಇನ್ಸ್‍ಪೆಕ್ಟರ್‍ಗಳ ಮುಖಾಂತರ ಪ್ರಸ್ತಾವನೆ ಕಳುಹಿಸಬೇಕೆಂದು ಸಲಹೆಯಿತ್ತರು.
ಇದೇ ರೀತಿ ಗ್ರಾಮೀಣ ಆಶ್ರಯ ನಿವೇಶನಗಳಿಗಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸೂಕ್ತ ಸ್ಥಳ ಗುರುತಿಸಿ, ಆ ಜಾಗದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಿದರು.
ಜೊತೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಾರ್ವಜನಿಕ ಸ್ಮಶಾನಕ್ಕೆ ಜಾಗವನ್ನು ಗುರುತಿಸುವಂತೆ ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದನ್ನೂ ತಹಸೀಲ್ದಾರ್ ಉಲ್ಲೇಖಿಸಿದರು.
ಒತ್ತುವರಿ ವಿರುದ್ಧ ಕ್ರಮ
ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ಕಟ್ಟಿದ್ದರೆ ಅಥವಾ ಬೇರೆ ಚಟುವಟಿಕೆಗೆ ಬಳಸಿದ್ದರೆ ಆ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಮಾಡುವಂತೆಯೂ, ಇಂತಹ ಪ್ರಕರಣಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿಯೂ ತಹಸೀಲ್ದಾರ್ ಹೇಳಿದರು.
ಈ ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಗಂಗಾಂಜನೇಯ (ಸ್ವಾಂದೇನಹಳ್ಳಿ ಕ್ಷೇತ್ರ- ಬಿಜೆಪಿ), ಸದಸ್ಯರಾದ ಆರ್.ಕವಿತಾ ರಮೇಶ್ (ಕೋರಾ ಕ್ಷೇತ್ರ- ಬಿಜೆಪಿ), ರಂಗಸ್ವಾಮಯ್ಯ (ಸಿರಿವರ ಕ್ಷೇತ್ರ- ಕಾಂಗ್ರೆಸ್), ವಿ.ಜಗದೀಶ್ (ಬೆಳಧರ ಕ್ಷೇತ್ರ- ಜೆಡಿಎಸ್), ತಾ.ಪಂ.ನ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಶಶಿಧರ್, ತಾಲ್ಲೂಕಿನ ಎಲ್ಲ 41 ಗ್ರಾಮ ಪಂಚಾಯಿತಿಗಳ ಪಿ.ಡಿ.ಓ.ಗಳು, ಭೂದಾಖಲೆಗಳ ಇಲಾಖೆಯ ಅಧಿಕಾರಿ ಮೊದಲಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ