ಗುರುವಾರದೊಳಗಾಗಿ ಖಾತೆಗಳ ಹಂಚಿಕೆ:ದಿನೇಶ್ ಗುಂಡೂರಾವ್

ಬೆಂಗಳೂರು

          ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರಿಗೆ ಗುರುವಾರದೊಳಗಾಗಿ ಖಾತೆಗಳ ಹಂಚಿಕೆಯಾಗಲಿದ್ದು, ಉತ್ತರ ಕರ್ನಾಟಕಕ್ಕೆ ಉತ್ತಮ ಖಾತೆಗಳು ದೊರೆಯಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

          ಎರಡು ಮೂರು ಖಾತೆಗಳನ್ನು ಹೊಂದಿರುವ ಪ್ರಭಾವಿ ಸಚಿವರಿಂದ ಖಾತೆಗಳನ್ನು ಕಸಿದು ನೂತನ ಸಚಿವರಿಗೆ ಹಂಚಿಕೆ ಮಾಡುವ ಸುಳಿವನ್ನು ದಿನೇಶ್ ಗುಂಡೂರಾವ್ ನೀಡಿದರು.

         ನಗರದ ಕೆಪಿಸಿಸಿ ಕಚೇರಿಯಲ್ಲಿ ನೂತನ ಮಾಧ್ಯಮ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರಿಗೆ ಯಾವ ಖಾತೆ ನೀಡಬೇಕೆಂಬ ಕುರಿತು ವೇಣುಗೋಪಾಲ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿ ಅಂತಿಮಗೊಳಿಸಲಿದ್ದಾರೆ. ಆದರೆ ಖಾತೆಗಳಿಗಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನಡುವೆ ಯಾವುದೇ ವಾಗ್ವಾದ ನಡೆದಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಊಹಾಪೆಹದ ಸುದ್ದಿಗಳು ಪ್ರಸಾರವಾಗುತ್ತಿವೆ. ಆಧಾರವಿಲ್ಲದ ಸುದ್ದಿಗಳಿಂದ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಟೀಕಿಸಿದರು.

         ಡಾ. ಪರಮೇಶ್ವರ್ ಅವರು ಸಭೆಯಿಂದ ಮದ್ಯದಲ್ಲೇ ಎದ್ದುಹೋದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷರು, ವಿಧಾನಸೌಧದ ಮುಂಭಾಗ ಗೃಹ ಇಲಾಖೆಯ ಕಾರ್ಯಕ್ರಮ ಇದ್ದ ಕಾರಣ ಅವರು ಸಭೆಯಿಂದ ನಿರ್ಗಮಿಸಿದರು. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು, ಅವರಿಗಾಗಿ ಕಾಯುತ್ತಿದ್ದ ಹಿನ್ನೆಲೆಯಲ್ಲಿ ಸಭೆಯಿಂದ ತೆರಳಿದ್ದಾರೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ಇದನ್ನೇ ಮುಂದಿಟ್ಟುಕೊಂಡು ಊಹಾಪೆಹದ ವರದಿ ಮಾಡುವುದು ಸೂಕ್ತವಲ್ಲ ಎಂದರು.

         ಹಿರಿಯ ಸಚಿವರು ಪ್ರಭಾವಿ ಖಾತೆಗಳನ್ನು ಹೊಂದಿದ್ದು, ಅವರನ್ನು ನೂತನ ಸಚಿವರಿಗೆ ಬಿಟ್ಟುಕೊಡಲಿದ್ದಾರೆಯೇ ಎನ್ನುವ ಪ್ರಶ್ನೆಗೆ, ಎಲ್ಲದಕ್ಕೂ ನಾಳೆ ಉತ್ತರ ದೊರೆಯಲಿದೆ. ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆ ನಡೆದಿದೆ. ಸಂಪುಟದಲ್ಲಿ ಉತ್ತರ ಕರ್ನಾಟಕ್ಕೆ ಪ್ರಾತಿನಿಧ್ಯ ದೊರೆತಿದ್ದು, ಖಾತೆಗಳ ಹಂಚಿಕೆಯಲ್ಲೂ ಇದು ಮುಂದುವರೆಯಲಿದೆ ಎಂದರು.

          ಆರು ತಿಂಗಳ ಮೈತ್ರಿ ಸರ್ಕಾರವನ್ನು ಮುಂದಿನ 24 ಗಂಟೆಗಳಲ್ಲಿ ಉರುಳಿಸುವುದಾಗಿ ಬಿಜೆಪಿ ನಾಯಕ ಉಮೇಶ್ ಕತ್ತಿ ಮಾಡಿರುವ ವಾಲಿಗೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದ ದಿನೇಶ್ ಗುಂಡೂರಾವ್, ತಾಖತ್ತಿದ್ದರೆ ಸರ್ಕಾರ ಪತನಗೊಳಿಸಲಿ. ಇಲ್ಲವಾದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.

          ತಮ್ಮ ಬಳಿ 15ಕ್ಕೂ ಹೆಚ್ಚು ಶಾಸಕರಿದ್ದು, ಸರ್ಕಾರವನ್ನು ಪತನಗೊಳಿಸುವುದಾಗಿ ಉಮೇಶ್ ಕತ್ತಿ ಹುಚ್ಚು ಹುಚ್ಚಾಗಿ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಹತಾಶೆಯಿಂದ ಜನರಲ್ಲಿ ಗೊಂದಲ ಮೂಡಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ಇದು ಶೋಭೆ ತರುವುದಿಲ್ಲ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap