ಸಿಎಂ, ಸಚಿವರುಗಳ ನಡೆಯಿಂದ ಅಧಿಕಾರಿಗಳಿಗೆ ಲಂಗು ಲಗಾಮು ಇಲ್ಲದಂತಾಗಿದೆ : ಸಿದ್ದರಾಮಯ್ಯ

ಕಲಬುರಗಿ

     ನೆರೆ, ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇಲಿಂದ ಹಾರಾಟ ಮಾಡಿ ಹೋಗಿದ್ದಾರೆ. ಒಬ್ಬನೇ ಒಬ್ಬ ಸಂತ್ರಸ್ತರ ಕಷ್ಟವನ್ನು ಅವರು ಆಲಿಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಗಳು ಕೇವಲ ಮೇಲಿಂದ ಹಾರಾಟ ಮಾಡಿ ಹೋಗಿದ್ದಾರೆ. ಮೇಲಿಂದ ಅವರಿಗೆ ಏನು ಕಾಣಿಸಿತ್ತೊ ಗೊತ್ತಿಲ್ಲ ಎಂದು ಅವರು ಕುಟುಕಿದರು.ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರು, ಜನ ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲೆಗಳಲ್ಲಿ ಬೀಡು ಬಿಟ್ಟು ಪರಿಹಾರ ಕೈಗೊಳ್ಳಬೇಕಿತ್ತು. ಆದರೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮೇ ನಿಂದ ಜಿಲ್ಲೆಯತ್ತ ತಲೆ ಹಾಕಿಲ್ಲ ಎಂದು ಅವರು ಆರೋಪಿಸಿದರು.
ಕಂದಾಯ ಸಚಿವ ಆರ್ ಅಶೋಕ ಅವರು ಪಿಕ್ ನಿಕ್ ಬಂದಂತೆ ಕಲಬುರಗಿಗೆ ಬಂದು ಹೋಗಿದ್ದಾರೆ. ಇನ್ನು, ಸಿಎಂ ಮೇಲಿಂದ ಹಾರಾಟ ಮಾಡಿ ಹೋಗಿದ್ದಾರೆ. ಮುಖ್ಯಮಂತ್ರಿ, ಸಚಿವರ ನಡೆಯಿಂದ ಅಧಿಕಾರಿಗಳಿಗೆ ಲಂಗು ಲಗಾಮು ಇಲ್ಲದಂತಾಗಿದೆ ಎಂದು ಅವರು ಕಿಡಿಕಾರಿದರು.

    ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ನೆರೆ ಸಂಕಷ್ಟ ನಿಭಾಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದೇ ಕಾರಣಕ್ಕೆ ಸರ್ಕಾರಕ್ಕೆ ಧಮ್ ಇಲ್ಲ ಎಂದಿದ್ದೇನೆ. ಆದರೆ, ಕೆಲವರು ಇದನ್ನು ದೈಹಿಕ ತಾಕತ್ತಿಗೆ ಹೋಲಿಸುತ್ತಿದ್ದು, ಸಿದ್ರಾಮಯ್ಯನಿಗಿಂತ ನಾಲ್ಕು ಪಟ್ಟು ದಮ್ ಇದೆ ಎನ್ನುತ್ತಿದ್ದಾರೆ. ದೈಹಿಕ ದಮ್ ಬಗ್ಗೆ ನಾನು ಮಾತಾಡಿಲ್ಲ. ಸರ್ಕಾರಕ್ಕೆ ಪರಿಹಾರ ಕೊಡಿಸುವ ದಮ್ ಇಲ್ಲ ಎಂದಿದ್ದೇನೆ. ಈಗಲೂ ದಮ್ ಇದ್ದರೆ ಕೂಡಲೇ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಲಿ ಎಂದು ಅವರು ಸವಾಲು ಹಾಕಿದರು.

   ನೆರೆ ನಿರ್ವಹಣೆಯ ಬಗ್ಗೆ ಚರ್ಚೆಗಾಗಿ ಸರ್ಕಾರ ವಿಶೇಷ ಅಧಿವೇಶನ ಕರೆಯಲಿ ಎಂದು ಅವರು ಒತ್ತಾಯಿಸಿದ್ದಾರೆ. ನಾನು ಯಾವತ್ತೂ ಹೀರೋ…. ವಿಲನ್ ಅಲ್ಲವೇ ಅಲ್ಲ.. ಎಂದು ಹಿಂದಿನ ಸರ್ಕಾರ ಬೀಳಿಸುವಲ್ಲಿ ಸಿದ್ರಾಮಯ್ಯ ಪಾತ್ರ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ನನ್ನನ್ನು ಸುಮ್ಮನೆ ಕೆಣಕಬೇಡಿ ಎಂಬ ಎಚ್ ಡಿಕೆಗೆ ಎಚ್ಚರಿಕೆಗೆ ನಸುನಕ್ಕ ಸಿದ್ರಾಮಯ್ಯ ಅವರು, ಸುಮ್ಮಸುಮ್ಮನೆ ನಾನು ಯಾರನ್ನೂ ಕೆಣಕುವುದಿಲ್ಲ. ನನ್ನ ಮೇಲೆ ಟೀಕೆ ಮಾಡಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ. ಆ ಉತ್ತರದಿಂದ ಅವರಿಗೆ ಮುಜುಗರವಾಗಿದ್ದರೆ ನಾನೇನು ಮಾಡಲಿ ? ಎಂದು ಅವರು ಪ್ರಶ್ನಿಸಿದರು.

   ಸಿದ್ರಾಮಯ್ಯ ಸರ್ಕಾರ ಬೀಳಿಸಿದ್ದು ಎನ್ನುತ್ತಾರೆ. ಕುಣಿಯಲು ಬಾರದವರು ನೆಲ ಡೊಂಕು ಅಂದಂತಿದೆ ಈ ಮಾತು ಎಂದ ಅವರು, ಶಾಸಕರ ಕಷ್ಟ-ಸುಖ ಆಲಿಸಿ ಅವರ ವಿಶ್ವಾಸ ಗಳಿಸಬೇಕಿರುವುದು ಮುಖ್ಯಮಂತ್ರಿ ಕೆಲಸ ಅಲ್ಲವೇ ? ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸಿದರೆ ಇದು ಸಾಧ್ಯವೇ ? ಇದನ್ನೇ ನಾನು ಹೇಳಿದ್ದಕ್ಕೆ ವಿಲನ್ ಎನ್ನುತ್ತಾರೆ. ನಾನು ಯಾವತ್ತಿಗೂ ವಿಲನ್ ಅಲ್ಲವೇ ಅಲ್ಲ. ನನ್ನದೇನಿದ್ದರೂ ಹೀರೋ ಪಾತ್ರ ಎಂದು ಅವರು ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap