ಕುಣಿಗಲ್
ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾ.ಪಂ ಪಿಡಿಓಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇದ್ದು ಕರ್ತವ್ಯ ನಿರ್ವಹಿಸದಿದ್ದರೆ ಮುಲಾಜಿಲ್ಲದೆ ಅಮಾನತ್ತಿಗೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶನಿವಾರ ನಡೆದ ಗ್ರಾ.ಪಂ ಆಡಳಿತಾಧಿಕಾರಿಗಳು ಹಾಗೂ ಪಿಡಿಓಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಾಕಷ್ಟು ಮಂದಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಇರದೆ ಬೇರೆ ಬೇರೆ ಊರುಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ತಾಲ್ಲೂಕಿನ ಜನತೆಗೆ ಅಧಿಕಾರಿಗಳು ಸಕಾಲಕ್ಕೆ ಸಿಗದೆ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಕೇಂದ್ರ ಸ್ಥಾನದಲ್ಲಿ ವಾಸ ಇರದ ಅಧಿಕಾರಿಗಳ ವಿರುದ್ದ ಯಾವ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂಬುದನ್ನು ಅಧಿಕಾರಿಗಳ ಬಾಯಿಂದಲೆ ಹೇಳಿಸಿದರು. ನಂತರ ನಿಮಗೆ ತಿಳಿದಿರುವ ಹಾಗೆಯೇ ನೀವು ಕೇಂದ್ರ ಸ್ಥಾನದಲ್ಲಿ ವಾಸ ಇಲ್ಲವಾದರೆ ಒಂದು ವಾರ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಕೇಂದ್ರ ಸ್ಥಾನದಲ್ಲಿ ವಾಸ ಇದ್ದು, ವಾಸದ ವಿಳಾಸವನ್ನು ಶಾಸಕ ಡಾ.ರಂಗನಾಥ್ ಅವರಿಗೆ ಸಲ್ಲಿಸಬೇಕು. ಇಲ್ಲವಾದರೆ ಅಮಾನತ್ತು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾ.ಪಂ ಅಡಳಿತಾಧಿಕಾರಿಯಾಗಿ ನೇಮಕವಾಗಿರುವ ಅಧಿಕಾರಿಗಳಿಗೆ ಕೆಲಸ ಮಾಡಲು ಉತ್ತಮ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಶಾಶ್ವತ ಕಾಮಗಾರಿಗಳನ್ನು ಮಾಡಿ. ಗ್ರಾ.ಪಂನಲ್ಲಿ ಈಗ ಚುನಾಯಿತ ಸದಸ್ಯರು ಇಲ್ಲದಿರುವ ಕಾರಣ ಯಾವುದೇ ರಾಜಕೀಯ ಒತ್ತಡ ಇರುವುದಿಲ್ಲ. ಈ ಸಂಬಂಧ ನರೇಗಾ ಹಾಗೂ 15ನೆ ಹಣಕಾಸು ಯೋಜನೆಯ ಅನುದಾನವನ್ನು ಬಳಕೆ ಮಾಡಿಕೊಂಡು ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ಶಾಶ್ವತ ಕಾಮಗಾರಿಗಳನ್ನು ಮಾಡುವಂತೆ ಸೂಚನೆ ನೀಡಿದರು. ಆಡಳಿತಾಧಿಕಾರಿಯಾಗಿ ಅಧಿಕಾರ ಸಿಕ್ಕಿದೆ ಎಂದು ದುರುಪಯೋಗ ಮಾಡಿಕೊಂಡರೆ ಮುಲಾಜಿಲ್ಲದೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಎಚ್ಚರಿಸಿದರು.
ಗ್ರಾಪಂನಲ್ಲಿ ಪ್ರತಿ ತಿಂಗಳ ಕೊನೆಯ ವಾರದಲ್ಲಿ ಇ-ಖಾತಾ ಆಂದೋಲನ ಹಮ್ಮಿಕೊಂಡು ಎಲ್ಲರಿಗೂ ಅವರ ಸ್ವತ್ತಿನ ಇ-ಖಾತಾ ಮಾಡಿಕೊಡಲು ಕ್ರಮಕೈಗೊಳ್ಳಬೇಕು. ಈ ರೀತಿ ಈಗಾಗಲೇ ಕನಕಪುರ ತಾಲ್ಲೂಕಿನಲ್ಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಮೊದಲು ನಾಲ್ಕು ಗ್ರಾ.ಪಂಗಳ ಆಂದೋಲನಕ್ಕೆ ನಾನೆ ಖುದ್ದು ಬಂದು ಉದ್ಘಾಟನೆ ಮಾಡಿಕೊಡುತ್ತೇನೆ ಎಂದು ಸೂಚಿಸಿದ ಅವರು, ಗ್ರಾಮೀಣ ಭಾಗದ ಜನರು ಈಗ ತಮ್ಮ ಸ್ವತ್ತುಗಳ ದಾಖಲಾತಿಗಳನ್ನು ಮಾಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಅಧಿಕಾರಿಗಳು ನೀವು ಕೂಡ ಇದಕ್ಕೆ ಸ್ಪಂದಿಸಿ ಕೆಲಸ ಮಾಡಿದರೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನರೇಗಾ ಯೋಜನೆ ಒಂದು ಉತ್ತಮ ಯೋಜನೆಯಾಗಿದೆ. ಇದು ಗುತ್ತಿಗೆ ಅಧಾರಿತ ಯೋಜನೆ ಅಲ್ಲ ಕೂಲಿ ಆಧಾರಿತ ಕಾಯ್ದೆಯಾಗಿದೆ. ಇದನ್ನು ಬಳಕೆ ಮಾಡಿಕೊಂಡು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಬಹುದಾಗಿದೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು. ನರೇಗಾದಲ್ಲಿ ಸಾಕಷ್ಟು ಅಕ್ರಮ ಅವ್ಯವಹಾರಗಳು ನಡೆಯುತ್ತಿವೆ. ಫಲಾನುಭವಿ ಕೈಗೆ ನೇರವಾಗಿ ಹಣ ಸೇರುತಿಲ್ಲ. ಗುತ್ತಿಗೆದಾರ, ಗ್ರಾ.ಪಂ ಪಿಡಿಓ ಹಾಗೂ ಕಂಪ್ಯೂಟರ್ ಆಪರೇಟರ್‍ಗಳು ಹೊಂದಾಣಿಕೆ ಮಾಡಿಕೊಂಡು ಜಾಬ್ ಕಾರ್ಡ್‍ದಾರರ ಬ್ಯಾಂಕ್ ಎಟಿಎಂಗಳನ್ನು ತಮ್ಮ ಬಳಿ ಇಟ್ಟುಕೊಂಡು ಹಣ ಡ್ರಾ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ.
ಈಗ ನೂತನವಾಗಿ ನೇಮಕವಾಗಿರುವ ಆಡಳಿತಾಧಿಕಾರಿಗಳು ಈ ಅಕ್ರಮಕ್ಕೆ ಕಡಿವಾಣ ಹಾಕಿ ಪಲಾನುಭವಿಗಳ ಕೈಗೆ ಹಣ ಸೇರುವಂತೆ ಮಾಡಬೇಕೆಂದು ಸೂಚಿಸಿದರು. ತಾಲ್ಲೂಕಿನಲ್ಲಿ 58 ಸಾವಿರ ಬಿಪಿಎಲ್ ಕಾರ್ಡ್‍ದಾರರಿದ್ದಾರೆ. ಆದರೆ 36 ಸಾವಿರ ಮಾತ್ರ ಜಾಬ್ ಕಾರ್ಡ್ ರೂಪಿಸಲಾಗಿದೆ. ಉಳಿಕೆ ಜಾಬ್ ಕಾರ್ಡ್‍ಗಳನ್ನು ರೂಪಿಸಲು ಮನೆ ಮನೆಗೆ ಕ್ಯಾಂಪೈನ್ ಮಾಡಿ ಕಾರ್ಡ್ ಮಾಡಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕಂದು ಸೂಚಿಸಿದರು. ಇದರಿಂದ ಕೊರೊನಾ ಭೀತಿಯಿಂದ ಬೇರೆ ಬೇರೆ ಊರುಗಳಿಂದ ಉದ್ಯೋಗ ಬಿಟ್ಟು ಕುಣಿಗಲ್ ತಾಲ್ಲೂಕಿಗೆ ಮರಳಿ ಬಂದಿರುವ ಸಾವಿರಾರು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಅವಕಾಶ ಸಿಗಲಿದೆ ಎಂದು ತಿಳಿಸಿದರು.
ಸಭೆ ಮುಗಿಯುವವರೆಗೂ ಅಧಿಕಾರಿಗೆ ನಿಲ್ಲುವ ಶಿಕ್ಷೆ:-
ಸಭೆಯಲ್ಲಿ ಗಂಭೀರವಾಗಿ ಚೆರ್ಚೆ ನಡೆಯತ್ತಿದ್ದಾಗ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ಪುರಸಭೆ ಪರಿಸರ ಎಂಜಿನಿಯರ್ ಚಂದ್ರಶೇಖರ್ ಅವರನ್ನು ಸಂಸದ ಡಿ.ಕೆ.ಸುರೇಶ್ ತರಾಟೆಗೆ ತೆಗೆದುಕೊಂಡು ಸಭೆ ಮುಗಿಯುವವರೆಗೂ ನಿಂತುಕೊಂಡಿರುವಂತೆ ಶಿಕ್ಷೆ ವಿಧಿಸಿದರು. ಸಭೆ ಮಧ್ಯದಲ್ಲಿ ಶಾಸಕ ಡಾ.ರಂಗನಾಥ್ ಮಧ್ಯ ಪ್ರವೇಶ ಮಾಡಿ, ನಿಂತಿರುವ ಅಧಿಕಾರಿ ಆಪರೇಷನ್ ಮಾಡಿಸಿಕೊಂಡು ಬಂದಿದ್ದಾರೆ.
ಕುಳಿತುಕೊಳ್ಳಲು ಹೇಳಿ ಎಂದಾಗ ಮತ್ತೆ ಸಂಸದ ಡಿ.ಕೆ.ಸುರೇಶ್ ಚಂದ್ರಶೇಖರ್ ಅವರನ್ನು ಪ್ರಶ್ನೆ ಮಾಡಿ ಏನ್ ಮಾತನಾಡುತ್ತಿದ್ದೆ ಎಂದು ಕೇಳಿದಾಗ ಕೊರೊನಾ ಬಗ್ಗೆ ಮಾಹಿತಿ ನೀಡುತ್ತಿದ್ದೆ ಸರ್ ಎಂದು ಹೇಳಿದಾಗ ಕೊರೊನಾ ಅಂದರೆ ನಾನು ಹೆದರಿಕೊಳ್ಳುತ್ತೇನೆ ಅಂದುಕೊಂಡಿದ್ದೀಯ ಎಂದು ತರಾಟೆಗೆ ತೆಗೆದುಕೊಂಡು ನೀನು ಸಭೆ ಮಯುಗಿಯುವವರೆಗೂ ನಿಂತೆ ಇರಬೇಕೆಂದು ಶಿಕ್ಷೆಯನ್ನು ಮುಂದುವರೆಸಿದರು.ಜಿಲ್ಲಾ ಯೋಜನಾ ನಿರ್ದೇಶಕ ಮಹಮದ್ ಮುಬೀನ್, ತಾ.ಪಂ ಇಓ ಶಿವರಾಜಯ್ಯ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
