ಸರ್ಕಾರಿ ಆಸ್ಪತ್ರೆಯಲ್ಲಿ ಕಡು ಬಡ ರೋಗಿಗಳನ್ನು ಸುಲಿದು ತಿಂದು ಬಿಡುತ್ತಾರೆ’

 ಶಿರಾ

     ಶಿರಾ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕಡು ಬಡವರನ್ನು ಸುಲಿದು ತಿಂದು ಬಿಡುತ್ತಾರೆ. ನಮ್ಮದೆ ಕುಟುಂಬದ ಬಾಣಂತಿಯ ಜೊತೆ ಐದು ದಿನ ಈ ಆಸ್ಪತ್ರೆಯಲ್ಲಿ ನಾನೆ ಇದ್ದುಕೊಂಡು ನೋವುಂಡಿದ್ದೇನೆ. ಸಾಕಪ್ಪಾ…ಸಾಕು ಈ ಆಸ್ಪತ್ರೆಯ ಸಹವಾಸ ಎಂದು ತಾ.ಪಂ. ಸದಸ್ಯೆಯೊಬ್ಬರು ತಮ್ಮದೇ ಆದ ಅಪ್ಪಟ ಗ್ರಾಮೀಣ ಭಾಷೆಯಲ್ಲಿ ಆಸ್ಪತ್ರೆಯ ಸಮಸ್ಯೆಗಳನ್ನು ನಿವೇದಿಸಿಕೊಂಡ ಪ್ರಸಂಗ ನಡೆದಿದೆ.

      ಇಲ್ಲಿನ ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಂಗಳವಾರ ತಾ.ಪಂ. ಅಧ್ಯಕ್ಷ ಚಂದ್ರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಸ್ಪತ್ರೆಯ ಕರುಣಾಜನಕ ಕೆಲ ಸಂಗತಿಗಳನ್ನು ಸದಸ್ಯೆಯೊಬ್ಬರು ಸಭೆಯಲ್ಲಿ ನಿವೇದಿಸಿಕೊಂಡರು.ಹೊನ್ನಗೊಂಡನಹಳ್ಳಿ ತಾಲ್ಲೂಕು ಪಂಚಾಯ್ತಿಯ ಸದಸ್ಯರಾದ ತಿಪ್ಪಮ್ಮ, ಈ ಹಿಂದಿನ ಯಾವುದೇ ಸಭೆಗಳಲ್ಲಿ ತುಟಿ ಎರಡು ಮಾಡಿದವರಲ್ಲ. ಅದೇಕೋ ಏನೋ ಸಭೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳು ಕೊರೋನಾ ಸಂಬಂಧ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾಗ ಕುಪಿತಗೊಂಡ ಸದಸ್ಯೆ ತಿಪ್ಪಮ್ಮ ಶಿರಾ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಕಿಡಿ ಕಾರಿದರು.

     ಶಿರಾ ಆಸ್ಪತ್ರೆಯಲ್ಲಿ ನಮ್ಮದೇ ಕುಟುಂಬದ ಮಗು ಮತ್ತು ಬಾಣಂತಿಯ ಜೊತೆ ನಾನೆ ಐದು ದಿನಗಳವರೆಗೆ ಇದ್ದೇನೆ. ಇಲ್ಲಿನ ಅವ್ಯವಸ್ಥೆಯನ್ನು ಕಣ್ಣಾರೆ ಕಂಡಿದ್ದೇನೆ. ಐದು ದಿನಗಳಾದರೂ ರೋಗಿಗಳ ಹಾಸಿಗೆ ಮೇಲಿನ ಬಟ್ಟೆಯನ್ನೆ ಬದಲಾಯಿಸುವುದಿಲ್ಲ. ಬಟ್ಟೆ ವಾಸನೆ ಬರುತ್ತಿದೆ, ಬಟ್ಟೆ ಬದಲಾಯಿಸಿ ಎಂದು ಕಾಡಿ ಬೇಡಿದರೂ ಬದಲಾಯಿಸುವುದಿಲ್ಲ ಎಂದು ನಿವೇದಿಸಿಕೊಂಡರು.

   ತಳ್ಳುವ ಗಾಡಿಯಿಂದ ಹಿಡಿದು ಇಲ್ಲಿ ಎಲ್ಲರಿಗೂ 100 ರಿಂದ 300 ರೂ.ಗಳವರೆಗೆ ಹಣ ನೀಡಲೇಬೇಕು. ಇಲ್ಲಿನ ವೈದ್ಯರು ಮೊದಲಿಗೆ ಈ ಸಮಸ್ಯೆಗಳನ್ನು ಸರಿಪಡಿಸಿ ಎಂದು ತರಾಟೆಗೆ ತೆಗೆದುಕೊಂಡರು. ಸದಸ್ಯೆಯ ಗ್ರಾಮೀಣ ಸೊಗಡಿನ ಭಾಷೆಯ ಸಂಕಟ ಸಭೆಯಲ್ಲಿದ್ದವರನ್ನು ಕ್ಷಣ ಕಾಲ ಮೌನವಾಗಿಸಿತಲ್ಲದೆ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಾ.ವೈದ್ಯಾಧಿಕಾರಿ ಡಾ.ಅಫ್ಜಲ್ ರೆಹಮಾನ್ ಭರವಸೆ ನೀಡಿದರು.

   ತಾಲ್ಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ನಿರ್ವಹಿಸುತ್ತಿಲ್ಲ. ಬಟ್ಟಿಗಾನಹಳ್ಳಿ ಗ್ರಾಮದಲ್ಲಿ ಬಹುತೇಕ ಮಂದಿ ಹಿಂದುಳಿದ ಮತ್ತು ಪ.ಜಾತಿ ಜನಾಂಗಗಳಿದ್ದು, ಇಲ್ಲಿನ ನೀರಿನ ಘಟಕ ಕೆಟ್ಟು ಒಂದು ವರ್ಷ ಆಗಿದೆ. ಇದು ಇನ್ನೂ ದುರಸ್ತಿಯಾಗಿಲ್ಲ. ಗಾಣದ ಹುಣಸೆ ಸೇರಿದಂತೆ ಹಲವು ಘಟಕಗಳು ಇನ್ನೂ ದುರಸ್ತಿಗೊಂಡಿಲ್ಲ. ಇವುಗಳನ್ನು ದುರಸ್ತಿ ಮಾಡುವ ಗೋಜಿಗೂ ಯಾರೂ ಹೋಗುತ್ತಿಲ್ಲ ಎಂದು ಸದಸ್ಯ ಪುಟ್ಟರಾಜು ಸಭೆಯ ಗಮನಕ್ಕೆ ತಂದರು.

   ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮೋಹನ್‍ಕುಮಾರ್ ಸದಸ್ಯರ ಪ್ರಶ್ನೆಗೆ ಉತ್ತರಿಸಿ, ತಾಲ್ಲೂಕಿನಲ್ಲಿ ಒಟ್ಟು 16 ಶುದ್ದ ಕುಡಿಯುವ ನೀರಿನ ಘಟಕಗಳು ದುರಸ್ತಿಯಾಗಬೇಕಿದೆ. ಅವುಗಳನ್ನು ಹೊರತುಪಡಿಸಿ ಯಾವ ಗ್ರಾಮದ ಘಟಕಗಳು ದುರಸ್ತಿಗೊಂಡಿಲ್ಲ ಎಂದು ಹೇಳಿದರೆ ಕೂಡಲೆ ದುರಸ್ತಿಗೊಳಿಸಲು ಏಜೆನ್ಸಿ ಅವರಿಗೆ ಸೂಚನೆ ನೀಡಲಾಗುವುದು ಎಂದರು.

    ಇಂತಹುದ್ದೇ ಗ್ರಾಮ ಎಂದು ಹೆಸರಿಸುವ ಬದಲು ತಾಲ್ಲೂಕಿನ ಸುಮಾರು 50 ಕ್ಕೂ ಹೆಚ್ಚು ನೀರಿನ ಘಟಕಗಳು ದುರಸ್ತಿಗೊಳ್ಳಬೇಕು. ನೀವೇ ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಸದಸ್ಯ ಪುಟ್ಟರಾಜು, ಶ್ರೀನಿವಾಸ್ ಸೇರಿದಂತೆ ಹಲವು ಸದಸ್ಯರು ಒತ್ತಡ ಹೇರಿದರು.
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆಯಾ ಗ್ರಾ.ಪಂ.ಗಳಿಗೆ ಹಸ್ತಾಂತರಿಸಿ ಎಂದು ಸದಸ್ಯ ಪುಟ್ಟರಾಜು ಸಭೆಯ ಗಮನಕ್ಕೆ ತಂದಾಗ, ತಾ.ಪಂ. ಇ.ಓ. ಮಾತನಾಡಿ ಸದರಿ ಘಟಕಗಳನ್ನು ಗ್ರಾ.ಪಂ.ಗಳಿಗೆ ಹಸ್ತಾಂತರಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ. ಆಗ ಎಲ್ಲಾ ಸಮಸ್ಯೆಗಳೂ ಬಗೆಹರಿಯಲಿವೆ ಎಂದರು.

ತಾಯಿ-ಮಗು ಆಸ್ಪತ್ರೆ ನಮಗೆ ವರದಾನ :

    ಶಿರಾ ತಾಲ್ಲೂಕಿನಲ್ಲಿ ಕೊರೋನಾ ವಾರಿಯರ್ಸ್‍ಗಳ ಪರಿಶ್ರಮದಿಂದಾಗಿ ಸೋಕಿನ ಸುಳಿವು ಸಂಪೂರ್ಣವಾಗಿ ದೂರವಾಗಿದೆ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಅಫ್ಜಲ್ ರೆಹಮಾನ್ ಸಭೆಗೆ ತಿಳಿಸಿದರು.

   ಶಿರಾದಲ್ಲಿ ಕೊರೋನಾದಿಂದ ಓರ್ವ ಮೃತಪಟ್ಟು ಎರಡು ಪಾಸಿಟೀವ್ ಬಂದಾಗ ನಿಜಕ್ಕೂ ಎಲ್ಲರಿಗೂ ಭಯವಿತ್ತು. ಈ ಸಂದರ್ಭದಲ್ಲಿ ಶಂಕಿತರನ್ನು ಕ್ವಾರಂಟೈನ್ ಮಾಡಲು ನಮಗೆ ನೆರವಾಗಿದ್ದು ತಾಯಿ-ಮಗು ಆಸ್ಪತ್ರೆ. ಇನ್ನೂ ಉದ್ಘಾಟನೆಗೊಳ್ಳದ್ದರಿಂದ ಈ ಆಸ್ಪತ್ರೆ ನಮಗೆ ವರದಾನವಾಯಿತು ಎಂದು ಡಾ.ಅಫ್ಜಲ್ ರೆಹಮಾನ್ ಸ್ಮರಿಸಿದರು.

   ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ದಾದಿಯರು, ಕಂದಾಯ ಇಲಾಖೆ ಸೇರಿದಂತೆ ಆರಕ್ಷಕ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಇಂದು ಕೊರೋನಾ ಸೋಂಕು ದೂರವಾಗಲು ಕಾರಣವಾಯಿತು ಎಂದರು.ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಯ್ಯ ಸೇರಿದಂತೆ ತಾ.ಪಂ. ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link