ಹುಳಿಯಾರು:
ಇಡೀ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾಗಿ ಸಾರ್ವಜನಿಕರಿಗೆ ಅನೇಕ ನಿಯಮಗಳನ್ನು ಜಾರಿಗೆ ತಂದಿದ್ದರೂ ಕೂಡ ಹುಳಿಯಾರಿನ ಎಟಿಎಂ ಬಳಿ ಈ ನಿಯಮ ಪಾಲನೆಯಾಗದೆ ಸಂಪೂರ್ಣ ನಿರ್ಲಕ್ಷ್ಯಿಸಲಾಗುತ್ತಿದೆ.
ಹುಳಿಯಾರಿನಲ್ಲಿ ಪೊಲೀಸ್ ಇಲಾಖೆ ಹಾಗೂ ಪಪಂ ಅವರ ಜಂಟಿ ಶ್ರಮದ ಫಲವಾಗಿ ತರಕಾರಿ, ದಿನಸಿ, ಹಣ್ಣು, ಹಾಲು, ನೀರಿನ ಕೇಂದ್ರದಲ್ಲಿ ಲಾಕ್‍ಡೌನ್‍ನ ಸಾಮಾಜಿಕ ಅಂತರ ಮತ್ತು ಮಾಸ್ಕ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಿದೆ. ಆದರೆ ಇಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಮುಂದೆ ಈ ನಿಯಮ ಗಾಳಿಗೆ ತೂರಲಾಗಿದ್ದು ಮುಖಕ್ಕೆ ಮಾಸ್ಕ್ ಸಹ ಹಾಕದೆ ಒಬ್ಬರಿಗೊಬ್ಬರು ಅಂಟಿಕೊಂಡು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಅಲ್ಲದೆ ಎಂಟಿಎಂ ಒಳಗೆ ಒಬ್ಬರಿಗೆ ಮಾತ್ರ ಪ್ರವೇಶ ಎಂಬ ನಿಯಮವಿದ್ದರೂ ಮೂರ್ನಲ್ಕು ಜನ ಒಮ್ಮೆಲೇ ಒಳಗೋಗುತ್ತಾರೆ.
ಈ ಎಟಿಎಂನ ವಾಚ್ ಮ್ಯಾನ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಿದ್ದರೂ ಸಹ ಅವರ ಮಾತಿಗೆ ಗ್ರಾಹಕರು ಕಿಮ್ಮತ್ತು ಕೊಡದೆ ಒಬ್ಬರಿಗೊಬ್ಬರು ಅಂಟಿಕೊಂಡು ನಿಲ್ಲುತ್ತಿದ್ದಾರೆ. ಮಾಸ್ಕ್ ಹಾಕದೆ ಒಬ್ಬರಿಗೊಬ್ಬರು ಸಂಭಾಷಣೆಯಲ್ಲಿ ತೋಡುಗುತ್ತಾರೆ. ಸರ್ಕಾರ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಏನೆಲ್ಲಾ ನಿಯಮಗಳನ್ನು ಜಾರಿಗೆ ತಂದಿದ್ದರೂ ಸಹ ಇಂತಹ ಸಾರ್ವಜನಿಕರಿಂದ ಸರ್ಕಾರ ಮತ್ತು ಅಧಿಕಾರಿಗಳ ಶ್ರಮ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತ್ತಾಗುತ್ತಿದೆ.
ಕೊರೊನಾ ನಿಯಂತ್ರಣ ಮಾಡಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹುಮುಖ್ಯ. ಸದ್ಯ ಭಾರತದ ಮುಂದೆ ಇರುವುದು ಇದೊಂದೇ ದಾರಿ. ಈ ಕಾರಣಕ್ಕಾಗಿ 21 ದಿನಗಳ ಕಾಲ ದೇಶದಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಆದರೂ ಕೆಲವೊಂದು ಅಗತ್ಯ ಸೇವೆಯನ್ನು ಸರ್ಕಾರ ಸಾರ್ವಜನಿಕರಿಗೆ ಕಲ್ಪಿಸಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬೊಬ್ಬೆಯೊಡೆಯುತ್ತಿದ್ದರೂ ಜನರು ಸಾಮಾಜಿಕ ನಿರ್ಲಕ್ಷ್ಯಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳವ ಅಗತ್ಯವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ