ಸಮಾಜದ ರೋಗಗಳನ್ನು ಯಾರು ಗುಣಪಡಿಸುತ್ತಾರೊ ಅವರೆಲ್ಲರೂ ವೈದ್ಯರೆ : ಡಾ.ಸಿ.ಎನ್.ಮಂಜುನಾಥ್

ತುಮಕೂರು
    ಯಾರು ಸಮಾಜದಲ್ಲಿ ಅಡಗಿರುವ ರೋಗಗಳನ್ನು ಗುಣಪಡಿಸುತ್ತಾರೊ ಅವರೆಲ್ಲರೂ ವೈದ್ಯರೆ. ಚಿನ್ನದ ಪದಕ, ಉನ್ನತ ಪದವಿ ಜೊತೆಗೆ ಉತ್ತಮ ಸಂಸ್ಕೃತಿ, ಮಾನವೀಯತೆ, ಸೂಕ್ಷ್ಮ ಮನೋಭಾವ ಬೆಳೆಸಿಕೊಂಡರೆ ಮಾತ್ರ ಪರಿಪೂರ್ಣ ವೈದ್ಯರಾಗಲು ಸಾಧ್ಯ. ಇಲ್ಲದಿದ್ದರೆ ನೀವು ಯಾವ ರೋಗಿಯನ್ನು ಸಹ ಗುಣಪಡಿಸಲು ಸಾಧ್ಯವಾಗುವುದಿಲ್ಲ ಎಂದು ಜಯದೇವ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
    ತಾಲ್ಲೂಕಿನ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ಉನ್ನತ ಶಿಕ್ಷಣ ಸಂಸ್ಥೆಯ (ಎಸ್‍ಎಎಚ್‍ಇ) 8ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ರೋಗಕ್ಕೆ ಚಿಕಿತ್ಸೆ ನೀಡಬೇಕು ಎನ್ನುವ ಮನಸ್ಸುಳ್ಳವರು ಹೆಚ್ಚಾಗ ಬೇಕು ಯುವ ಸಮೂಹ ಇಂತಹ ಮನೋಭಾವ ಬೆಳೆಸಿಕೊಳ್ಳಬೇಕು. ವೈದ್ಯ ವೃತ್ತಿಯಿಂದ ಸಮಾಜಕ್ಕೆ ನೀಡುವ ಕೊಡುಗೆಯ ಮುಂದೆ ಯಾವ ಪ್ರಶಸ್ತಿಯೂ ಅಗತ್ಯವಿಲ್ಲ. ಕಷ್ಟದಲ್ಲಿರುವ ಜನರಿಗೆ ಸಹಾಯಆದರೆ ನಾವು ಪಡೆದ ವಿದ್ಯಾಭ್ಯಾಸ ಸಾರ್ಥಕವಾದಂತಾಗುತ್ತದೆ ಎಂದರು.
    ವೈದ್ಯರು ಮೊದಲು ರೋಗಿಗಳನ್ನು ಮುಟ್ಟಬೇಕು ನಂತರ ಅವರ ಜೊತೆ ಮಾತನಾಡಬೇಕು. ಅವರ ಸಮಸ್ಯೆ ಏನು ಎಂಬುದು ಅವರಿಂದ ತಿಳಿದುಕೊಳ್ಳಬೇಕು. ಅದನ್ನು ಅರ್ಥೈಸಿಕೊಳ್ಳಬೇಕು. ರೋಗಿಯನ್ನು ಮುಟ್ಟಿ ಮಾತನಾಡಿಸಿದರೆ ನಿಮ್ಮ ಬಗ್ಗೆ ರೋಗಿಗೆ ಗೌರವ ಭಾವ ಮೂಡುವುದು ನಂತರ ಚಿಕಿತ್ಸೆ ನೀಡಬೇಕು. ಅದಕ್ಕೂ ಮುಂಚೆ ಎಕ್ಸ್‍ರೇ, ಸ್ಕ್ಯಾನಿಂಗ್, ಎಕೋ ಎಂದು ಗಾಬರಿ ಮಾಡಬಾರದು ಎಂದು ಸಲಹೆ ನೀಡಿದರು.
     ನಗು ವೈದ್ಯರು ರೋಗಿಗೆ ನೀಡುವ ಮೊದಲ ಔಷದಿ. ಆದರೆ ರೋಗಿಯ ಮುಂದೆ ಹೆಚ್ಚಿನದಾಗಿ ತಮಾಷೆ ಮಾಡುವುದಾಗಲಿ ಮಾಡಬಾರದು. ಚಿಕಿತ್ಸೆ ನೀಡುವಾಗ ಒಂದು ಕೈಯಲ್ಲಿ ಮೊಬೈಲ್ ಬಳಕೆ ಮಾಡುತ್ತಾ, ಇನ್ನೊಂದು ಕೈಯಲ್ಲಿ ಚಿಕಿತ್ಸೆ ನೀಡಲು ಹೋದರೆ ಇನ್ನಿಲ್ಲದ ಸಮಸ್ಯೆಗಳು ಎದುರಾಗುತ್ತವೆ. ಹೊಸದಾಗಿ ವೈದ್ಯ ವೃತ್ತಿಗೆ ಬರುವವರು ಚಿಕಿತ್ಸೆ ಮೊದಲು ಹಣ ನಂತರ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಇಷ್ಟು ದಿನ ಪುಸ್ತಕದಲ್ಲಿ ಇರುವುದನ್ನು ಓದಿದ್ದೀರಿ, ಮುಂದೆ ಸಮಾಜದ ನಡುವೆ, ಜನರ ನಡುವೆ ಇರುವುದನ್ನು ಓದಬೇಕು ಎಂದರು.
      ದಕ್ಷಿಣದ ಭಾರತದಲ್ಲಿ ಶೇ 60ರಷ್ಟು ವೈದ್ಯಕೀಯ ಕಾಲೇಜುಗಳಿವೆ. ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಭಾರತದಲ್ಲಿ ವೈದ್ಯಕೀಯ ಕಾಲೇಜುಗಳು ಕಡಿಮೆ. ಓದುವ ಕಾರಣಕ್ಕೆ, ಉತ್ತಮ ಚಿಕಿತ್ಸೆ ಸಲುವಾಗಿ ದಕ್ಷಿಣ ಭಾಗದ ಕಡೆಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
      ವೈದ್ಯರು ದೇವರಲ್ಲ, ದೇವಧೂತರೂ ಅಲ್ಲ, ಜಾಧೂಗಾರರೂ ಅಲ್ಲ. ವೈದ್ಯರು ಸಾಮಾನ್ಯ ಜನರೇ. ಆದರೆ ವೈದ್ಯರು ಒಬ್ಬ ರೋಗಿಯ ಪ್ರಾಣ ಕಾಪಾಡುತ್ತಿದ್ದಂತೆ ದೇವರಾಗುತ್ತಾರೆ. ಒಂದು ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ ಆತನನ್ನು ಅತ್ಯಂತ ಕೀಳುಮಟ್ಟವಾಗಿ ನೋಡುತ್ತಾರೆ. ಇದು ಬದಲಾವಣೆಯಾಗಬೇಕು. ಇಂದು ಹಳ್ಳಿಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಪರಿಸ್ಥಿತಿ ಹೇಳತೀರದಾಗಿದೆ ಎಂದರು. 
     ನಾನು ಎಂಬ ಪದವನ್ನು ದೂರವಿಡಿ, ನಾವು ಎಂಬುದನ್ನು ಒಪ್ಪಿಕೊಳ್ಳಿ, ಅಹಂನ್ನು ಬಿಡಿ, ಪ್ರೀತಿಗೆ ಬೆಲೆ ಕೊಡಿ, ನಗುವನ್ನು ಸದಾ ಹೊಂದಿರಿ. ವದಂತಿಗಳ ಬಗ್ಗೆ ಗಮನ ಹರಿಸದಿರಿ, ಯಶಸ್ಸನ್ನು ಗಳಿಸಲು ಪ್ರಯತ್ನಿಸಿ, ಜ್ಞಾನವನ್ನು ಪಡೆದುಕೊಳ್ಳಿ, ವಿಶ್ವಾಸವನ್ನು ನಂಬಿ, ಅಸೂಯೆಯನ್ನು ದೂರಮಾಡಿ ಎಂದು ಹತ್ತು ಪದಗಳ ಮಹತ್ವವನ್ನು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.
     ನೀವು ಕಾಣುವ ಕನಸ್ಸನ್ನು ಸಾಧಿಸಲು ಬದ್ಧತೆಯನ್ನು ಹೊಂದಿರಬೇಕು. ಕಲಿಕೆಗೆ ಯಾವುದೇ ಶಾರ್ಟ್‍ಕಟ್‍ಗಳಿಲ್ಲ. ಬದಲಿಗೆ ಕಠಿಣ ಪರಿಶ್ರಮ ಒಂದೇ ದಾರಿ. ಆಶಾವಾದ ಜೀವನವನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಮತ್ತು ಆರ್ಥಿಕತೆಗೆ ಹೋಲಿಕೆ ಮಾಡಬೇಡಿ. ಸಹೋದ್ಯೋಗಿಗಳ ಬೆಳವಣಿಗೆಗೆ ಪ್ರೋತ್ಸಾಹಿಸಿ. ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದು ಜವಾಬ್ದಾರಿಯಾಗಿ ಸ್ವೀಕರಿಸಿ. ಎಂದಿಗೂ ತಂದೆತಾಯಿಯನ್ನು, ಗುರು ಹಿರಿಯರನ್ನು ಹಾಗೂ ಮಾತೃಭೂಮಿಯನ್ನು ಮರೆಯಬೇಡಿ. ಆತ್ಮವಿಶ್ವಾಸ ಮತ್ತು  ಸಕರಾತ್ಮಕ ವರ್ತನೆಯಿಂದ ಮುಂದಿನ ಜೀವನವನ್ನು ರೂಪಿಸಿಕೊಳ್ಳಿ ಎಂದು ಉತ್ತಮ ವೃತ್ತಿ ಜೀವನಕ್ಕೆ ಬೇಕಾದ ಸಲಹೆಗಳನ್ನು ನೀಡಿದರು.
     ಸಾಹೆ ವಿಶ್ವವಿದ್ಯಾಲಯದ ಕುಲಪತಿಗಳಾದ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಇಂಜಿನಿಯರಿಂಗ್ , ವೈದ್ಯಕೀಯ ಮತ್ತು ಡೆಂಟೆಲ್ ಕೋರ್ಸ್ ಮುಗಿಸಿದ ಒಟ್ಟು 831 ಮಂದಿಗೆ ಪದವಿ ಘೋಷಿಸಿದರು. ಇವರಲ್ಲಿ 707 ಮಂದಿ ಘಟಿಕೋತ್ಸವದಲ್ಲಿ ಪಾಲ್ಗೊಂಡು ಗಣ್ಯರಿಂದ ಪದವಿ ಪಡೆದರು. 11 ಮಂದಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಡಾ.ಮಂಜುನಾಥ್ ಅವರನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
     ವೈದ್ಯಕೀಯ ವಿಭಾಗ ಸಿ.ನಾಗೇಂದ್ರ, ನಿಶ್ಚಲ್ ಎನ್ ಹೆಗಡೆ, ರಮ್ಯ ಉಮರ, ದಂತ ವೈದ್ಯಕೀಯ ವಿಭಾಗದಲ್ಲಿ ವರ್ಷ, ನೀತು, ಎಲ್ಸಾ ವರ್ಗೀಸ್ ಚಿನ್ನದ ಪದಕ ಸ್ವೀಕರಿಸಿದರು.
     ವೈದ್ಯಕೀಯ ವಿಭಾಗದಲ್ಲಿ ಸಿ.ನಾಗೇಂದ್ರ, ವರ್ಷ, ಅಪೂರ್ವ ಪಂಡಿತ್, ಆರ್.ಎಂ.ಪುಷ್ಪಾಂಜಲಿ, ಡಿ.ಶಶಾಂಕ್, ಬಿ.ಎಂ.ವರ್ಷಿತ, ಪ್ರಥಾ ವಿ ಪ್ರಮಾರ್ ಹೆಚ್ಚು ಅಂಕಗಳನ್ನು ಪಡೆದರೆ ಎಂಜಿನಿಯರಿಂಗ್ ವಿಭಾಗದಲ್ಲಿ ಟಿ.ಆಕರ್ಷ್ ಭಾರದ್ವಾಜ್, ಆರ್.ನಿರಂಜನ್, ನಿತೀಶ್ ಕುಮಾರ್, ಪ್ರತಿಭಾ, ಸಿ.ಎಂ.ದಿವ್ಯ, ಎನ್.ಎಸ್.ವಿಷ್ಣು ಭೂಪತಿ, ಎಂ.ಜಿ.ಸದ್ವಿನಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 
 
     ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾರುತಿ ಡಿ ಮಾಲೆ, ಸಂಸ್ಥೆಯ ಟ್ರಸ್ಟಿ ಡಾ. ಜಿ.ಎಸ್‍ಆನಂದ್, ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ, ರಿಜಿಸ್ಟ್ರಾರ್ ಡಾ. ಎಮ್.ಝೆಡ್.ಕುರಿಯನ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ್‍ಮೂರ್ತಿ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಕಾಶಿನಾಥ್ ಶಾಸ್ತ್ರಿ, ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿಪ್ರಕಾಶ್ ಇತರೆ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link