ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ : ಹೆಚ್ ಡಿ ಕೆ

ಬೆಂಗಳೂರು     ಸಮಾಜ ವಿರೋಧಿ ಕಾರಣಕ್ಕೆ ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ. ಚಿಕ್ಕಮಗ ಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುತ್ತೇನೆ ಎಂದಿದ್ದ ನಿಮ್ಮದೇ ಸಿದ್ಧಾಂತ ಪ್ರತಿಪಾದ ಕರೂ ದೇಶದ್ರೋಹಿಗಳೇ ಅಲ್ಲವೇ ಬಿಜೆಪಿ ನಾಯಕರೇ? ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

   ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪಾಕಿಸ್ತಾನ ಎಂಬ ದೇಶ ಈ ಭೂಪಟದಲ್ಲಿ ಇರದೇ ಹೋಗಿದ್ದರೆ ನೀವಿಲ್ಲಿ ಒಂದು ವೋಟು ಪಡೆಯಲೂ ಸಾಧ್ಯವಿರುತ್ತಿರಲಿಲ್ಲ. ಅದಕ್ಕಾಗಿಯೇ ಪಾಕ್ ನಾಮಸ್ಮರಣೆ ನಿಮ್ಮ ಕಾಯಕವಾಗಿಬಿಟ್ಟಿದೆ. ನಿಮ್ಮದೂ ರಾಜಕಾರಣವೇ? ನಿಮ್ಮದೂ ದೇಶ ಪ್ರೇಮವೇ? ಎಂಥ ಯಃಕಶ್ಚಿತ್ ಬದುಕು….? ಎಂದು ಹರಿಹಾಯ್ದಿದ್ದಾರೆ.

   ನನ್ನನ್ನು ದೇಶದ್ರೋಹಿ, ಪಾಕಿಸ್ತಾನ ಪರ ವಾದಿ ಎಂದು ಕೂಗು ಮಾರಿಯಂತೆ ಅರಚುತ್ತಿರುವ ಪ್ರಹ್ಲಾದ್ ಜೋಶಿ ಅವರೇ, ದಿನಬೆಳಗಾದರೆ ಪಾಕಿಸ್ತಾನವನ್ನೇ ಜಪಿಸುವ ನಿಮ್ಮ ಮೂಲ ಪಾಕ್ ಇರಬಹುದೇನೋ ನನಗೆ ಗೊತ್ತಿಲ್ಲ. ಪಾಕಿಸ್ತಾನದ ನೆಲ ಸ್ಪರ್ಶಿಸಿ, ಬಿರಿಯಾನಿ ತಿಂದು ಬಂದ ಪ್ರಧಾನಿಯ ಮಂತ್ರಿಮಂಡಲದಲ್ಲಿರುವ ನೀವು ದೇಶಭ್ರಷ್ಟರು. ನಾನು ಈ ಮಣ್ಣಿನವ ಎಂದು ಪ್ರತ್ಯುತ್ತರ ನೀಡಿದ್ದಾರೆ.

     ರೈತರ ಸಾಲಮನ್ನಾ, ಬಡವರ ಬಂಧು, ಸಾಲ ಋಣಮುಕ್ತ ಕಾಯ್ದೆ ಇವೆಲ್ಲವೂ ನಾನು ತಂದ ಕಾರ್ಯಕ್ರಮಗಳು. ಇವು ದೇಶವಿರೋಧಿಯೇ? ನಿಮ್ಮ ಸರ್ಕಾರ ಜಾರಿಗೆ ತಂದಿರುವ ದೇಶಭಕ್ತಿಯ ಕಾರ್ಯಕ್ರಮಗಳನ್ನು ತೋರಿಸಿ ನೋಡೋಣ. ಬಡವ ಬಲ್ಲಿದರು ಬೇಕಿಲ್ಲದ ನಿಮಗೆ ಕೋಮು ಭಾವನೆಗಳೇ ಬಂಡವಾಳ. ನಿಮ್ಮಂಥ ದೇಶಪ್ರೇಮ(ದ್ರೋಹ) ನಮಗೆ ಬೇಕಿಲ್ಲ ಸುರೇಶ್ ಅವರೇ ಎಂದು ಪ್ರಶ್ನಿಸಿದ್ದಾರೆ.

    ‘ಆತ’ನ ದೇಶಭಕ್ತಿಗೆ ಸಾಕ್ಷ್ಯ ಕೊಡುವ ಸುರೇಶ್ ಕುಮಾರ್ ಅವರೇ, ನನ್ನ ಮನೆಗೆ ಒಮ್ಮೆ ಬನ್ನಿ. ನಿತ್ಯವೂ ಸಾವಿರಾರು ಮಂದಿ ನೆರವು ಕೋರಿ ನನ್ನ ಹುಡುಕಿ ಬರುತ್ತಾರೆ. ಬಾಲ್ಯದಿಂದ ಈವರೆಗೆ ಜಾತಿ, ಮತ, ಪಕ್ಷವೆಂದು ನೋಡದೆ ಲಕ್ಷಾಂತರ ಮಂದಿಗೆ ಹೆಗಲಾಗಿದ್ದೇನೆ. ಅದನ್ನು ನಾನು ವರ್ಣಿಸಿಕೊಳ್ಳಬೇಕಿಲ್ಲ.ಹಾಗೇ ನಿಮ್ಮಿಂದ ದೇಶ ಭಕ್ತಿ ತಿಳಿಯಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಸಾಲುಮರಗಳನ್ನು ಬೆಳೆಸಿದ ತಿಮ್ಮಕ್ಕ ನಿಮಗೆ ದೇಶಪ್ರೇಮಿ ಎನಿಸರು, ಕೆರೆ ಕಟ್ಟಿದ ಕಾಮೇಗೌಡ ನಿಮಗೆ ದೇಶಪ್ರೇಮಿಯಾಗರು. ರಾಜಕೀಯಕ್ಕಾಗಿ ಧರ್ಮಗಳನ್ನು ಬಳಸಿಕೊಳ್ಳುವ, ಕೋಮು ದಳ್ಳುರಿ ಬಿತ್ತುವವರಲ್ಲಿ ದೇಶಪ್ರೇಮ ಕಂಡ ನೀವು ನಿಮ್ಮಲ್ಲಿರುವ ಮಾನಸಿಕ ಭ್ರಷ್ಟಾಚಾರಿಯನ್ನು ಸಮಾಜದೆದುರು ಅನಾವರಣ ಮಾಡಿದ್ದೀರಿ. ದೇಶಪ್ರೇಮಕ್ಕೆ ಸುರೇಶ್ ಕುಮಾರ್ ರಾಂಕ್ ಕೊಡುತ್ತಾರೆ. ತಾಯಿ ಮೇಲಿನ ಪ್ರೀತಿಗೆ ರಾಂಕ್ ನೀಡಲು ಸಾಧ್ಯವೇ? ರಾಜಕೀಯಕ್ಕೆ ದೇಶಪ್ರೇಮವನ್ನು ಬಳಸಿಕೊಂಡ ನಿಮ್ಮ ಬೌದ್ಧಿಕ ದಿವಾಳಿತನ ನಿಜಕ್ಕೂ ನನ್ನಲ್ಲಿ ಬೇಸರ ತರಿಸಿದೆ. ಸಜ್ಜನರಾದ ನಿಮ್ಮ ಮೇಲಿನ ನನ್ನ ಅಭಿಮಾನಕ್ಕೇ ಕುಂದುಂಟಾಗಿದೆ… ದೇಶಪ್ರೇಮದ ವಿಚಾರದಲ್ಲಿ ರಾಕ್ ಕೊಟ್ಟರೆ ‘ಆತ’ ಕೊನೇ ರಾಂಕ್ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

   ಹೈದರಾಬಾದಿನ ಪಶುವೈದ್ಯೆ ಅತ್ಯಾಚಾರಿಗಳಲ್ಲೂ ಧರ್ಮ ಹುಡುಕಿದವ, ಮತ ಕೇಳಲು ವೀರಯೋಧ ಅಭಿನಂದನ್ ವರ್ದಮಾನ್ ಫೋಟೊ ಬಳಸಿದವ, ಪೂರ್ಣಪ್ರಜ್ಞಾ ವಿದ್ಯಾಪೀಠದ ಪವಿತ್ರ ಆವರಣವನ್ನು ರಾಜಕೀಯಕ್ಕೆ ಬಳಸಿಕೊಂಡವ, ಬಿಜೆಪಿ ನಾಯಕ ಸದಾನಂದಗೌಡರಿಂದಲೇ ದೇಶದ್ರೋಹಿ ಎನಿಸಿಕೊಂಡವ ಸುರೇಶ್ ಕುಮಾರ್ ಅವರಿಗೆ ದೇಶಪ್ರೇಮಿ! ಎಂದು ವ್ಯಂಗ್ಯವಾಡಿದ್ದಾರೆ.

   ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ವಿಷಯವನ್ನು ಪ್ರಸ್ತಾಪಿಸಿ ಕುಮಾರಸ್ವಾಮಿ ಅವರು ನಿನ್ನೆ ಇದೊಂದು ಅಣಕು ಪ್ರದರ್ಶನದಂತೆ ಕಾಣುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಕುಮಾರಸ್ವಾಮಿ ಪಾಕಿಸ್ತಾನಪರ, ದೇಶದ್ರೋಹಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮಾತ್ರವಲ್ಲ ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿ ‘ ಕುಮಾರ ಸ್ವಾಮಿಯವರೇ, ನೆರೆ ಬಂದಾಗ ಸರಕಾರದ ನೆರವಿಲ್ಲದೆ ಪರಿಹಾರ ಕಾರ್ಯ ಮಾಡುವುದು, ಕೆರೆ ಕಲ್ಯಾಣಿ ಸ್ವಚ್ಛತೆ ಮಾಡುವುದ, ಕುಗ್ರಾಮಗಳಲ್ಲಿ ಕನಿಷ್ಠ ಸೌಕರ್ಯ ಒದಗಿಸುವುದು, ಇವು ದೇಶಭಕ್ತಿ ಕಾರ್ಯಗಳೆಂದಾರೆ ಚಕ್ರವರ್ತಿ ಸೂಲಿಬೆಲೆ ನಂ.1 ದೇಶಭಕ್ತ ಎಂದು ಹೇಳಿದ್ದಾರೆ.ಇದಕ್ಕೆ ಇಂದು ಅಷ್ಟೇ ಖಾರವಾಗಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap