ಹುಳಿಯಾರು
ಸೂಚನೆ ನೀಡದೆ ಸಾಕಾಣಿಕೆದಾರರು ಹಂದಿಗಳನ್ನು ಸೆರೆ ಹಿಡಿಯದಂತೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್ ಆದೇಶ ಪಾಲಿಸುವಂತೆ ಪಟ್ಟಣದ ಹಂದಿ ಸಾಕಾಣಿಕೆದಾರರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಹಂದಿ ಸಾಕಾಣಿಕೆದಾರರು ಅಲೆಮಾರಿಗಳಾಗಿದ್ದು ಸ್ವಂತ ಮನೆ ಇರುವುದಿಲ್ಲ. ಜೋಪಡಿಗಳಲ್ಲಿ ವಾಸ ಮಾಡುತ್ತಿದ್ದೇವೆ.
ಜೀವನೋಪಾಯಕ್ಕಾಗಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಹಂದಿ ಸಾಕಿ ಜೀವನ ನಡೆಸುತ್ತಿದ್ದೇವೆ. ಈಗ ಏಕಾಏಕಿ ಸುಮಾರು 180 ಹಂದಿಗಳನ್ನು ಹಿಡಿದಿದ್ದಾರೆ. ಇದರಿಂದ ಸಾಲ ತೀರಿಸಲು ಸಾಧ್ಯವಾಗದೆ ಬ್ಯಾಂಕ್‌ನವರು ನೋಟಿಸ್ ನೀಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಹುಳಿಯಾರು ಕೆರೆಯ ದಡದಲ್ಲಿ ಗುಡಿಸಲು ಹಾಕಿಕೊಂಡು ಐವತ್ತಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಮಳೆ ಬಂದರೆ, ಕೆರೆ ತುಂಬಿದರೆ ಇವರೆಲ್ಲರೂ ಅಂಗೈಯಲ್ಲಿ ಜೀವ ಹಿಡಿದು ಗುಡಿಸಲಿನಲ್ಲಿರುತ್ತಾರೆ. ಹಾಗಾಗಿ ಇವರೆಲ್ಲರಿಗೂ ವಾಸಿಸಲು ಮನೆ ಹಾಗೂ ಹಂದಿ ಸಾಕಾಣಿಕೆ ಮಾಡಲು ಸ್ಥಳಾವಕಾಶ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಲೆಮಾರಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಪ್ಪ, ಹಂದಿ ಸಾಕಾಣಿಕೆದಾರರಾದ ನಾಗಣ್ಣ, ಮಂಜುನಾಥ, ಮಳಲಿ ಗಂಗಣ್ಣ, ಗಂಗಾಧರ್, ಸಣ್ಣಲಕ್ಷ್ಮಕ್ಕ, ರವಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ