ಚಿತ್ರದುರ್ಗ
ನಾಟಕಗಳು ಮಾನವನಿಗೆ ಜೀವನದ ರೀತಿ ನೀತಿಗಳನ್ನು, ಬದುಕನ್ನು ಕಲಿಸುವ ಸಾಧನಗಳು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.
ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ ಮಲ್ಲಾಡಿಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಹಯೋಗದಲ್ಲಿ ನಡೆದ ರಾಘವೇಂದ್ರ ಸ್ವಾಮಿಗಳವರ 24ನೆಯ ಮತ್ತು ಸೂರ್‍ದಾಸ್‍ಜೀ ಸ್ವಾಮಿಗಳವರ 22ನೇ ಪುಣ್ಯಾರಾಧನೆ, ತಿರುಕನೂರಿನಲ್ಲಿ ರಂಗದಾಸೋಹ-17 ಮತ್ತು ತಿರುಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.
ನಾಟಕ, ಕಲೆ, ಸಾಹಿತ್ಯ ಇವು ಸಾಮೂಹಿಕ ಪ್ರಜ್ಞೆಯ ರೂಪಗಳು. ಮಾನವ ಆರಂಭದಲ್ಲಿ ಮಗುವಾಗಿರುತ್ತಾನೆ ನಂತರ ಬೆಳೆಯುತ್ತ ಬೆಳೆಯುತ್ತ ಮೃಗೀಯ ಭಾವನೆ ಬೆಳೆಸಿಕೊಳ್ಳುತ್ತಿದ್ದಾನೆ. ಆದರೆ ಮಾನವ ಮಾನವನಾಗಬೇಕು. ಆತನ ಮೃಗೀಯ ವರ್ತನೆ ಹೋಗಿ ಮಾನವೀಯತೆ ತುಂಬಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಮಹತ್ತರವಾದ ಕಾರ್ಯ ಕೈಗೊಂಡವರು.
ಈ ಸೇವಾಶ್ರಮವನ್ನು ಭೌತಿಕವಾಗಿ ಬೌದ್ಧಿಕವಾಗಿ ಎತ್ತರಿಸುವ ಕೆಲಸ ಶ್ರೀಮಠದಿಂದ ನಡೆಯುತ್ತಿದೆ ಎಂದರು.
ತಿರುಕಶ್ರೀ ಪ್ರಶಸ್ತಿಗೆ ಭಾಜನರಾದ ಶ್ರೀನಿವಾಸ ಕಪ್ಪಣ್ಣನವರು ಇಂದಿನ ಯುವಸಮುದಾಯಕ್ಕೆ ಮಾದರಿಯಾಗಿರುವವರು. ಕಲೆಗಾರನಿಗೆ ವಯಸ್ಸಾಗಬಹುದು ಆದರೆ ಆ ಕಲೆಗೆ ವಯಸ್ಸಾಗುವುದಿಲ್ಲ. ಅವರ ಜೀವನೋತ್ಸಾಹ ಅತ್ಯಂತ ದೊಡ್ಡದು ಎಂದು ಪ್ರಶಂಸಿಸಿದರು.
ನಂತರ ಶ್ರೀಗಳು ಹಿರಿಯ ರಂಗಕರ್ಮಿ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣ ಅವರಿಗೆ ತಿರುಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಮಾತನಾಡಿ, ನಾಟಕಗಳ ರಚನೆ ಮತ್ತು ಅಭಿನಯ ನಿನ್ನೆ ಮೊನ್ನೆಯದಲ್ಲ. ಇದು ಬಹು ಹಿಂದಿನಿಂದ ಬಂದಿದೆ. ಮಾನವನಲ್ಲಿ ನೈತಿಕತೆಯನ್ನು ಹೆಚ್ಚಿಸುವ, ಸಮಾಜವನ್ನು ತಿದ್ದುವ ಶಕ್ತಿಯೂ ಈ ನಾಟಕಗಳಿಗೆ ಇದೆ ಎಂದರು
ಇದೊಂದು ಸಂಯುಕ್ತ ಕಲೆ.
ಸಂಗೀತ, ಸಾಹಿತ್ಯ, ಅಭಿನಯ ಇನ್ನೂ ಹಲವುಗಳ ಸಂಗಮ. ನಾಟಕ ನೋಡಿ ಚಿಂತನೆಗೆ ಒಳಗಾಗಿ ಜೀವನವನ್ನು ಪರಿವರ್ತಿಸಿಕೊಂಡವರಿದ್ದಾರೆ. ಇಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳನ್ನು ಸಭಿಕರನ್ನು ಚಿಂತನೆಗೆ ಒಡ್ಡುವಂತಹವು. ಸಾಂಸ್ಕøತಿಕವಾಗಿ ಆಗಬೇಕಾಗದ ಕೆಲಸಗಳಿಗೆ ಮುರುಘಾ ಶರಣರು ಸದಾ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ ಎಂದು ಸ್ಮರಿಸಿದರು.
ತಿರುಕಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅವರು, ನನ್ನ ಸಂದರ್ಭದಲ್ಲಿ ತಿರುಕಶ್ರೀ ಒಂದು ಅನ್ವರ್ಥನಾಮ. ನನ್ನ ಹಿನ್ನೆಲೆ ನೋಡಿದರೆ ನಾನು ಅತ್ಯಂತ ಬಡಕುಟುಂಬದಲ್ಲಿ ಬಂದದ್ದು. ನಾಟಕದ ಹುಚ್ಚು ನನ್ನನ್ನು ಅಂತಿಮ ಬಿಎಸ್ಸಿ ಪರೀಕ್ಷೆಗೂ ಹೋಗದಂತೆ ಮಾಡಿತು. ಆದರೆ ನಾನು ಓದುತ್ತಿದ್ದುದು ಬೀದಿ ದೀಪದಲ್ಲಿ. ಜಾನಪದ ಕಲೆ ಉಳಿಸುವ ಹಿನ್ನೆಲೆಯಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದೇನೆ. ತಾಯಿ ತೀರಿದ 13ನೇ ದಿನದ ಗೌರವವನ್ನು ಬಿಟ್ಟು ನಾಟಕ ರಂಗದಲ್ಲಿ ಕೆಲಸ ಮಾಡಿದ್ದೇನೆ. ಪ್ರತಿ ಹಂತದಲ್ಲೂ ಕನಸು ಕಾಣುವವನು. ಸಮಾಜಕ್ಕೆ ಸದಾ ಸೇವೆ ಸಲ್ಲಿಸಬೇಕೆಂಬ ಮನೋಭಾವದವನು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೋ. ಕೆ.ಇ. ರಾಧಾಕೃಷ್ಣ, ಆಂತರಿಕ, ಆಧ್ಯಾತ್ಮಿಕ ಶಿಸ್ತು ನೀಡುವುದು ಈ ನಾಟಕ. ಉದಾತ್ತ ಮನೋಭಾವ ಬೆಳೆಸುವಂತಹದು ಈ ನಾಟಕ. ಈ ನಾಟಕೋತ್ಸವ ಯಶಸ್ವಿಯಾಗಲಿ ಎಂದರು.ಅನಾಥಸೇವಾಶ್ರಮದ ವಿಶ್ವಸ್ತರಾದ ಎಂ.ಡಿ. ಲಕ್ಷ್ಮೀನಾರಾಯಣ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಾರದಮ್ಮ ಶಿವಾನಂದ, ಶ್ರೀಮತಿ ಲಲಿತ ಜಿ.ಕಪ್ಪಣ್ಣ, ಸೇವಾಶ್ರಮದ ವ್ಯವಸ್ಥಾಪಕ ಸಿದ್ಧರಾಮಣ್ಣ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
