ಬೆಂಗಳೂರು
ರಾಜ್ಯದ ಸಿಸಿಬಿ ಪೊಲೀಸರ ನಿದ್ದೆ ಕೆಡಿಸಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿ ಕೊಂಡಿರುವ ಶಿವಪ್ರಕಾಶ್, ಆದಿತ್ಯ ಆಳ್ವ, ಶೇಖ್ ಫಾಝಲ್ ಸಿಕ್ಕಿಬಿದ್ದರೆ ಡ್ರಗ್ಸ್ ಜಾಲಕ್ಕೆ ಸಂಬಂಸಿದಂತೆ ಮಹತ್ವದ ಮಾಹಿತಿಗಳು ಲಭ್ಯವಾಗಲಿವೆ.
ಸಿಸಿಬಿ ಪೊಲೀಸರು ಈ ಮೂವರಿಗಾಗಿ ಇನ್ನೂ ವ್ಯಾಪಕ ಶೋಧ ನಡೆಸುತ್ತಿದ್ದಾರೆ.ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಪ್ರಕರಣದಲ್ಲಿ ಉದ್ಯಮಿ ಶಿವಪ್ರಕಾಶ್ ಮೊದಲನೆ ಆರೋಪಿ. ಆದಿತ್ಯ ಆಳ್ವ ಆರನೆ ಆರೋಪಿ. ಶಿವಪ್ರಕಾಶ್ ಈಗ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿಯ ಪರಮಾಪ್ತ ಎಂದು ಹೇಳಲಾಗುತ್ತಿದೆ.
ಹೆಬ್ಬಾಳದಲ್ಲಿನ ಭವ್ಯ ಬಂಗಲೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರೂ ಸಹ ಆದಿತ್ಯ ಆಳ್ವ ಅಲ್ಲಿಗೆ ಬಂದಿರಲಿಲ್ಲ. ನಗರದ ಶಾಸಕರೊಬ್ಬರ ಆಪ್ತ ಎಂದು ಹೇಳಲಾಗಿರುವ ಶೇಖ್ ಫಾಜಲ್ ಇನ್ನೂ ತಲೆಮರೆಸಿಕೊಂಡಿದ್ದಾನೆ.ನಟಿ ಸಂಜನಾ ಬಂಧನದ ನಂತರ ಈತ ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಈ ಮೂವರಿಗಾಗಿ ಸಿಸಿಬಿ ಪೊಲೀಸರು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತಿತರ ಕಡೆ ವ್ಯಾಪಕ ಶೋಧ ನಡೆಸಿದರೂ ಸುಳಿವು ಸಿಕ್ಕಿಲ್ಲ. ಆದರೂ ಸಿಸಿಬಿ ಪೊಲೀಸರು ಈ ಮೂವರ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ