ನೀರಿನ ವಿಚಾರದಲ್ಲಿ ರಾಜಕೀಯ ಬೇಡ :ರಘುಮೂರ್ತಿ

ಚಿತ್ರದುರ್ಗ:

     ಚಳ್ಳಕೆರೆ ತಾಲ್ಲೂಕು ಪರಶುರಾಂಪುರದ ಹತ್ತಿರವಿರುವ ಕೋಟೆಕೆರೆ ವೇದಾವತಿ ನದಿಯ ಬ್ಯಾರೇಜ್‍ಗೆ ಕಳೆದ 2 ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಬಾಗಿನ ಅರ್ಪಿಸಿ ನನ್ನನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘಿಸಿರುವುದು ಆರೋಗ್ಯ ಸಚಿವರ ಅನಾರೋಗ್ಯಕರ ಬೆಳವಣಿಗೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಖಂಡಿಸಿದರು.

    ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕರು ಚಳ್ಳಕೆರೆ ಕ್ಷೇತ್ರದ ಶಾಸಕನಾಗಿ ನಾನು ಸ್ವಂತಿಕೆ ಪ್ರತಿಷ್ಟೆಯನ್ನು ಬಿಟ್ಟು ಎಲ್ಲಾ ಪಕ್ಷದವರೊಡನೆ ಅಭಿವೃದ್ದಿಗಾಗಿ ಕೈಜೋಡಿಸಿಕೊಂಡು ಬಂದಿದ್ದೇನೆ. ಆದರೆ ಸಚಿವ ಬಿ.ಶ್ರೀರಾಮುಲು ನನ್ನನ್ನು ಕಡೆಗಣಿಸಿದ್ದಾರೆ. ಜಿ.ಪಂ.ನೂತನ ಅಧ್ಯಕ್ಷೆ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಸೇರಿದಂತೆ ಚಳ್ಳಕೆರೆ ತಾಲ್ಲೂಕಿನ ಯಾವ ಜನಪ್ರತಿನಿಧಿಯನ್ನು ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ.

     ಅಂದು ಕೊನೆ ಗಳಿಗೆಯಲ್ಲಿ ತಹಶೀಲ್ದಾರ್ ನನಗೆ ದೂರವಾಣಿ ಮೂಲಕ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದರು. ಇದರ ಹಿಂದೆ ಇರುವ ದುರುದ್ದೇಶವಾದರೂ ಏನು ಎಂದು ಪ್ರಶ್ನಿಸಿದ ಟಿ.ರಘುಮೂರ್ತಿ ಚಿತ್ರದುರ್ಗ ಲೋಕಸಭಾ ಸದಸ್ಯರು ಹಾಗೂ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಇವರುಗಳು ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಸಚಿವರಿಗೆ ನಮ್ಮನ್ನು ಆಹ್ವಾನಿಸಬೇಕೆಂಬ ಸೌಜನ್ಯವಿಲ್ಲದಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವೇದಾವತಿ ನದಿಗೆ ನೀರು ಹರಿಸಿದ್ದು, ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ. 2015 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ವಿ.ವಿ.ಸಾಗರದಿಂದ ಚಳ್ಳಕೆರೆ ತಾಲ್ಲೂಕಿನ ವೇದಾವತಿ ನದಿಗೆ 0.25ಟಿ.ಎಂ.ಸಿ. ನೀರು ಹರಿಸಲು ಆದೇಶ ಮಾಡಿ ಬ್ಯಾರೇಜ್ ನಿರ್ಮಾಣಕ್ಕೆ ನೆರವಾದರು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿಕೆಗೆ ಟಿ.ರಘುಮೂರ್ತಿ ತಿರುಗೇಟು ನೀಡಿದರು.

   ಜಿಲ್ಲೆಯಲ್ಲಿ ಐದು ಮಂದಿ ಬಿಜೆಪಿ.ಶಾಸಕರಿದ್ದು, ಕಾಂಗ್ರೆಸ್‍ನ ನಾನೊಬ್ಬನೆ ಏಕೈಕ ಶಾಸಕ ಎಂದು ಬಿಜೆಪಿ.ಯವರು ಕಡೆಗಣಿಸುತ್ತಿರಬಹುದು. ಆದರೆ ಎರಡನೇ ಅವಧಿಗೆ ಶಾಸಕನಾಗಿ ಮೊದಲಿನಿಂದಲೂ ನಾನು ಯಾವುದೇ ಪಕ್ಷಪಾತ, ತಾರತಮ್ಯವಿಲ್ಲದೆ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿವಾಗಿ ಶ್ರಮಿಸುತ್ತ ಜನರಿಗೆ ಅತ್ಯಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡು ಬರುತ್ತಿದ್ದೇನೆ. ಸಚಿವ ಬಿ.ಶ್ರೀರಾಮುಲು ಬಾಗಿನ ಅರ್ಪಿಸಿದ ಸಂದರ್ಭದಲ್ಲಿ ಅಭಿಮಾನಿಗಳಿಂದ ಆಳೆತ್ತರದ ಸೇಬಿನ ಹಾರ ಹಾಕಿಸಿಕೊಂಡಿರುವುದು ಕೊರೋನಾ ಹಾವಳಿಯಿರುವ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಎಷ್ಟು ಸರಿ. ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿರುವ ಸಚಿವರೇ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಕೇಳಿದರು.

    ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರು ಹಿರಿಯ ರಾಜಕಾರಣಿ. ನನಗೆ ಅವರ ಮೇಲೆ ಅಪಾರವಾದ ಗೌರವವಿದೆ. ಆದರೆ ಅವರಿಗೆ ಇದ್ದಕ್ಕಿದಂತೆ ಚಳ್ಳಕೆರೆ ಕ್ಷೇತ್ರದ ಮೇಲೆ ಯಾಕೋ ಅತಿಯಾದ ವ್ಯಾಮೋಹವಿದ್ದಂತಿದೆ. ಉದ್ದೇಶಪೂರ್ವಕವಾಗಿ ಅವರು ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಹೋದಂತಿಲ್ಲ. ನೀರಿನ ವಿಚಾರಕ್ಕಾಗಿ ಯಾರು ರಾಜಕಾರಣ ಮಾಡಬಾರದು ಎಂದು ಹೇಳಿದರು.

     ಸಿದ್ದರಾಮಯ್ಯ ನೀರಿನ ವಿಚಾರದಲ್ಲಿ ರಾಜಕಾರಣ ಮಾಡಿದ್ದಾರೆಂದು ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ. ಸಿದ್ದರಾಮಯ್ಯನವರು ಪಕ್ಷಪಾತಿ, ದ್ವೇಷ ರಾಜಕಾರಣಿಯಲ್ಲ ಎನ್ನುವುದನ್ನು ಮೊದಲು ವಿರೋಧಿಗಳು ಅರ್ಥಮಾಡಿಕೊಂಡರೆ ಒಳ್ಳೆಯದು. ಚಳ್ಳಕೆರೆಯ ಬಿಸಿಎಂ.ಹಾಸ್ಟೆಲ್‍ನಲ್ಲಿದ್ದ ಕೊರೋನಾ ಸೋಂಕಿತರಿಗೆ ಕೊರೋನಾ ದೃಢಪಟ್ಟಿದ್ದು, ಚಿತ್ರದುರ್ಗ ಕೋವಿಡ್-19 ಆಸ್ಪತ್ರೆಗೆ ಅವರುಗಳನ್ನೆಲ್ಲಾ ಏಕೆ ಸ್ಥಳಾಂತರಿಸಲಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿ ಇದನ್ನು ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಚಳ್ಳಕೆರೆ ಸುತ್ತಮುತ್ತಲಿನ ಜನ ಭಯಭೀತರಾಗಿದ್ದಾರೆ ಎಂದರು.

    ಜಿ.ಪಂ.ಅಧ್ಯಕ್ಷೆ ಶಶಿಕಲ ಸುರೇಶ್‍ಬಾಬು, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿ.ಪಂ.ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ಮಾಜಿ ಸದಸ್ಯರುಗಳಾದ ರವಿಕುಮಾರ್, ಬಾಬುರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಡಿ.ಎನ್.ಮೈಲಾರಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap