ತುಮಕೂರು
ಮನಸ್ಸು, ವಯಸ್ಸನ್ನು ಪರಿಪಕ್ವಗೊಳಿಸುವ ಶಕ್ತಿ ಜಗತ್ತಿನಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಲಲಿತ ಕಲೆ, ಜನಪದ ಕಲೆ ಇವುಗಳಿಗೆ ಮಾತ್ರ ಇದೆ. ಇದರಿಂದ ಮಾನವ ಕತ್ತಲಿನಿಂದ ಬೆಳಕಿನ ಕಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ನಡೆಯಬಲ್ಲ ಎಂದು ಸಾಹಿತಿ ಡಾ. ಕವಿತಾಕೃಷ್ಣ ಬಣ್ಣಿಸಿದರು.
ಬೆಂಗಳೂರು ಕೀರ್ತನಶ್ರೀ ಸಾಂಸ್ಕೃತಿಕ ವೇದಿಕೆಯ ಯೋಗ ವಿಶ್ವವಿದ್ಯಾನಿಲಯದಿಂದ ಪಿಎಚ್‍ಡಿ ಪದವಿ ಪಡೆದ ಡಾ. ಪ್ರಕಾಶ್ ಕೆ ನಾಡಿಗ್ ಅವರಿಗೆ ತುಮಕೂರಿನ ಕವಿತಾ ಕೃಷ್ಣ ಸಾಹಿತ್ಯ ಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಇಂದಿನ ಕಾಲದಲ್ಲಿ ಕವಿಯಾಗುವವನಿಗೆ ಯಾವ ಗುಣಧರ್ಮ ಇರಬೇಕೆಂದರೆ ಪ್ರತಿಭೆ, ಅಭ್ಯಾಸ, ವಿದ್ವಜ್ಜನ ಸೇವೆ ಇದ್ದರೆ ಪರಿಪಕ್ವ ಕವಿಯಾಗಬಲ್ಲ. ಅಂತಹ ಎಲ್ಲರೊಳಗೊಂದಾಗಿ ಬೆರೆಯುವ ಗುಣವಿರುವ ನಾಡಿಗ್ ಅವರು ಅಭಿನಂದನಾರ್ಹರು ಎಂದರು.
ಖ್ಯಾತ ಕಾದಂಬರಿಕಾರ ಡಾ. ಸುರೇಶ್ ಪಾಟೀಲ್ ಮಾತನಾಡಿ, ವೃತ್ತಿ ಪ್ರವೃತ್ತಿಯಲ್ಲಿ ಅಜ-ಗಜ ಅಂತರ ವಿದ್ದರೂ ಸಾಹಿತ್ಯದಲ್ಲಿ ಸಾಧನೆ ಮಾಡಿರುವ ಪ್ರಕಾಶ್ ಅಭಿನಂದನಾರ್ಹರು. ಕರ್ನಾಟಕ ಸಂಸ್ಕೃತಿಯಲ್ಲಿ ಹನುಮನಿಗೆ ಮಹತ್ತರ ಪಾತ್ರವಿದೆ. ಹನುಮನ ಬಗ್ಗೆ ಸಂಶೋಧನೆ ನಡೆಸಿರುವುದು ಹಾಗೂ ಸಾಹಿತ್ಯದಲ್ಲಿನ ಅವರ ಆಸಕ್ತಿ ನಿಜಕ್ಕೂ ಶ್ಲಾಘನೀಯ ಎಂದರು.
ಮುಖ್ಯ ಅತಿಥಿ ಕಮಲಾ ಬಡ್ಡಿಹಳ್ಳಿ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ನಿದ್ದೆಗೊಂದು ಕಥೆ, ಯೂರೋಪ್ ಯಾನದಂತಹ ಉತ್ಕೃಷ್ಟ ಕೃತಿಗಳನ್ನು ನೀಡಿದ ಪ್ರಕಾಶ್ ನಾಡಿಗ್ ಅವರು ಹನುಮಂತನ ಬಗ್ಗೆ ವಿಶೇಷ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಯೋಗ ವಿಶ್ವಾವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿರುವುದು ತುಮಕೂರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು. ಕೀರ್ತನಶ್ರೀ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಾ. ಚೌಡಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ವಿಶ್ರಾಂತ ನಿರ್ದೇಶಕರಾದ ನಾಡೋಜ ಮಹೇಶ್ ಜೋಷಿ, ಸಾಹಿತಿ ಜಿ.ಕೆ ಕುಲಕರ್ಣಿ, ಅಶ್ವಿನಿ ಪಿ ನಾಡಿಗ್. ಸಾಹಿತಿ ಸಂಜೀವಪ್ಪ ಎನ್ ಮುಂತಾದ ಗಣ್ಯರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








