ಬೆಂಗಳೂರು
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ದಿಗಂತ್, ಐಂದ್ರಿತಾ ರೇ ದಂಪತಿಗೆ ಮೊದಲ ಹಂತದ ವಿಚಾರಣೆ ನಡೆಸಲಾಗಿದ್ದು, ಎರಡನೇ ಹಂತದ ವಿಚಾರಣೆ ನಡೆಯಲಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಗ್ಗೆಯಿಂದ ವಿಚಾರಣೆ ನಡೆಸಿದ್ದು, ಹಲವು ಮಾಹಿತಿ ಲಭ್ಯವಾಗಿದೆ.
ಬಹುತೇಕ ದಂಪತಿಯ ಮೊದಲ ಹಂತದ ವಿಚಾರಣೆ ಮುಕ್ತಾಯಗೊಂಡಿದೆ. ಸದ್ಯ ದಂಪತಿಯನ್ನು ವಾಪಸ್ ಕಳುಹಿಸಲಾಗಿದೆ ಎಂದರು. ಗುರುವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ದಂಪತಿಗೆ ಸೂಚಿಸಿಲ್ಲ. ಆದರೆ, ಮತ್ತೊಮ್ಮೆ ದಿನಾಂಕ ನಿಗದಿಗೊಳಿಸಿ ಎರಡನೇ ಹಂತದ ವಿಚಾರಣೆಗೆ ಬರುವಂತೆ ಸೂಚಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕಾಟನ್ ಪೇಟೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಫ್ರಿಕಾ ಮೂಲದ ಮತ್ತೋರ್ವ ಡ್ರಗ್ಸ್ ಪೆಡ್ಲರ್ ಡೊನಾಲ್ಡ್ ಉಡೇನಾ ಎಂಬಾತನನ್ನು ಸಹ ಬಂಧಿಸಲಾಗಿದೆ. ಬಂಧಿತನಿಂದ 12 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಈತ ಮೂರು ವಿಭಿನ್ನ ಹೆಸರಿನ ಮೊಬೈಲ್‍ಗಳನ್ನು ಡ್ರಗ್ ವ್ಯವಹಾರಕ್ಕೆ ಬಳಕೆ ಮಾಡುತ್ತಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ನಗರದಲ್ಲಿ ಆಯೋಜಿಸಿದ ಬಹುತೇಕ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡಿದ್ದನು ಎಂದು ಅವರು ತಿಳಿಸಿದರು. ವಿಚಾರಣೆ ಮುಗಿದ ಬಳಿಕ ನಟ ದಿಗಂತ್ ಪ್ರತಿಕ್ರಿಯಿಸಿ, ಸಿಸಿಬಿ ಅಧಿಕಾರಿಗಳ ತನಿಖೆಗೆ ನಾವು ಸಹಕರಿಸುತ್ತೇವೆ. ವಿಚಾರಣೆಗೆ ಕರೆದಾಗ ಮತ್ತೆ ಹಾಜರಾಗುತ್ತೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ