ತುಮಕೂರು
ಕೊರೋನ ವೈರಸ್ ಲಾಕ್ಡೌನ್ನಿಂದ ಜನಸಾಮಾನ್ಯರ ಸಂಕಷ್ಟಕ್ಕೆ ನೆರವಾಗಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಸರ್ಕಾರದ ಬದಲು ಕಾಂಗ್ರೆಸ್ ಮತ್ತು ಸಂಘ ಸಂಸ್ಥೆಗಳು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿ ನೆರವಾಗುತ್ತಿವೆ, ಇಲ್ಲವಾಗಿದ್ದರೆ ರಾಜ್ಯದಲ್ಲಿ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು ಹಸಿವಿನಿಂದ ಸಾಯುವ ಪರಿಸ್ಥಿತಿ ಬರುತ್ತಿತ್ತು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಕೋವಿಡ್-19 ಟಾಸ್ಕ್ಫೋರ್ಸ್ ಸಮಿತಿಯ ಬೆಂಗಳೂರು ವಿಭಾಗದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಅಭಿಪ್ರಾಯವ್ಯಕ್ತಪಡಿಸಿದರು.
ಭಾನುವಾರ ನಗರದ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಬಳಗದ ವತಿಯಿಂದ ಪ್ರತಿನಿತ್ಯ ಬಡವರು, ಕೂಲಿ ಕಾರ್ಮಿಕರು, ಪೊಲೀಸರು, ಆರೋಗ್ಯ ಇಲಾಖೆ, ಸಿಬ್ಬಂದಿ, ಹೋಂಗಾರ್ಡ್ ಸಿಬ್ಬಂದಿ, ಸರ್ಕಾರಿ ಇಲಾಖೆ ಸಿಬ್ಬಂದಿಗಳಿಗೆ ಸರಬರಾಜು ಮಾಡುತ್ತಿರುವ ಆಹಾರ ವಿತರಣೆ ಕಾರ್ಯಕ್ರಮವನ್ನು ಪರಿಶೀಲಿಸಿ, ಈ ಸೇವಾಕಾರ್ಯವನ್ನು ಶ್ಲಾಘಿಸಿ, ಸ್ಥಳದಲ್ಲಿದ್ದ ಆರ್. ರಾಜೇಂದ್ರರನ್ನು ಅಭಿನಂದಿಸಿದರು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಆರ್.ರಾಜೇಂದ್ರ ಅವರು ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ, ಸರ್ಕಾರಿ ಇಲಾಖೆ, ಹೋಂಗಾರ್ಡ್, ಆರೋಗ್ಯ ಇಲಾಖೆ, ಕೂಲಿಕಾರ್ಮಿಕರು, ಹಕ್ಕಿಪಿಕ್ಕಿ ಜನಾಂಗದವರಿಗೆ ಇಲ್ಲಿಯವರಿಗೆ 40 ಸಾವಿರ ಆಹಾರ ಪೊಟ್ಟಣ, ಮತ್ತು 1.05 ಲಕ್ಷ ಮಾಸ್ಕ್ ವಿತರಣೆ, 2500 ಎನ್-95 ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಕೊಡುವುದರೊಂದಿಗೆ ಮನೆ ಕೆಲಸದಂತೆ ಇವರ ತಂಡ ಅತ್ಯುತ್ತಮವಾಗಿ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಆದೇಶದಂತೆ ರಾಜ್ಯದಲ್ಲಿ 5 ಟಾಸ್ಕ್ಪೋರ್ಸ್ಗಳನ್ನು ನಾಲ್ಕು ಕಂದಾಯ ವಿಭಾಗ ಮತ್ತು ಬೆಂಗಳೂರು ಸೇರಿ 5 ಟಾಸ್ಕ್ಪೋರ್ಸ್ಗಳನ್ನು ಮಾಡಿ ಅದರಲ್ಲಿ ಬೆಂಗಳೂರು ವಿಭಾಗದ ಟಾಸ್ಕ್ಪೋರ್ಸ್ಗೆ ಅಧ್ಯಕ್ಷನಾಗಿ ನಾನು ಮತ್ತು ಮಾಜಿ ಸಚಿವರಾದ ವಿ.ಮುನಿಯಪ್ಪ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಂಸದರಾದ ಮುದ್ದಹನುಮೇಗೌಡ, ಚಂದ್ರಪ್ಪ, ಕೋಲಾರದ ಕೆಜಿಎಫ್ನ ರೂಪಾ ಶಶಿಧರ್ ತಂಡ ನಿನ್ನೆಯಿಂದ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಪ್ರವಾಸ ಮುಗಿಸಿ ಬಂದಿದ್ದು, ಇಂದು ತುಮಕೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.
ಇಂದು ಸರ್ಕಾರ ಮಾಡಬೇಕಿರುವ ಕೆಲಸವನ್ನು ಯುವ ಕಾಂಗ್ರೆಸ್ ಸೇರಿದಂತೆ ವೀರಶೈವ ಸಮಾಜ, ಮಾರ್ವಾಡಿ ಸಮಾಜ, ಜೈನ್ ಸಮಾಜ ವಿವಿಧ ಸಂಘ ಸಂಸ್ಥೆಗಳು ಜನರ ದುಃಖ ದುಮ್ಮಾನಗಳಿಗೆ ಸ್ಪಂಧಿಸುತ್ತಿವೆ. ಇದು ಸರ್ಕಾರ ಮಾಡಬೇಕಾದ ಕೆಲಸವನ್ನು ಸಂಘ ಸಂಸ್ಥೆಗಳು ಮಾಡುತ್ತಿವೆ ಎಂದರೆ ಸರ್ಕಾರ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾಗಿದೆ ಎಂದು ಆರೋಪಿಸಿದರು.
ಸರ್ಕಾರ ನಾವೇನು ಮಾಡುತ್ತಿದ್ದೇವೆ ಎಂಬುದನ್ನು ನಿಖರವಾಗಿ ಜನತೆಗೆ ತಿಳಿಸಬೇಕಿದೆ, ಸರ್ಕಾರದಲ್ಲಿ ಸಾಮರಸ್ಯವಿಲ್ಲ, ಮಂತ್ರಿಗಳದ್ದೇ ದರ್ಬಾರು, ಒಂದು ರೀತಿಯ ತೊಘಲಕ್ ದರ್ಬಾರ್ ಆಡಳಿತ. ಇಬ್ಬರು ಆರೋಗ್ಯ ಸಚಿವರಲ್ಲೂ ಸಾಮರಸ್ಯವಿಲ್ಲ, ತೋಟಗಾರಿಕೆ ಮತ್ತು ಎಪಿಎಂಸಿ ಸಚಿವರಲ್ಲೂ ಹೊಂದಾಣಿಕೆಯಿಲ್ಲ ಎಂದು ಟೀಕಿಸಿದರು.
ಇದುವರೆಗೂ ಸರ್ಕಾರ ಎಷ್ಟು ಕಿಟ್ ಕೊಟ್ಟಿದೆ. ತಾಜ್ಯದಲ್ಲಿ ಕೊರೊನಾ ಸೋಂಕಿತರ ಪರೀಕ್ಷೆಗೆ ಎಷ್ಟು ಪ್ರಯೋಗಾಲಗಳಿವೆ, ಎಷ್ಟು ಜನಕ್ಕೆ ಟೆಸ್ಟ್ ಮಾಡಿದ್ದಾರೆ ಎಂಬ ಅಂಕಿ ಅಂಶವನ್ನು ಸರ್ಕಾರ ಕೊಡುತ್ತಿಲ್ಲ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಲಾಕ್ ಡೌನ್ ಸಡಿಲಗೊಳಿಸುತ್ತೇವೆ ಎಂದು ಒಂದು ಸಲ ಹೇಳುತ್ತಾರೆ, ಮತ್ತೊಂದು ಸಲ ಲಾಕ್ಡೌನ್ ಮುಂದುವರೆಸುತ್ತೇವೆ ಎಂದು ಹೇಳುತ್ತಾರೆ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಐಟಿಬಿಟಿ ಕ್ಷೇತ್ರದಲ್ಲಿ ಶೇ.50 ರಷ್ಟು ಕೆಲಸ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳುತ್ತಾರೆ, ಮತ್ತೆ ಶೇ.33 ರಷ್ಟು ಮಾತ್ರ ಎಂದು ಗೊಂದಲದ ಮಾತುಗಳನ್ನಾಡುತ್ತಾರೆ.
ಜನರು ಯಾವುದನ್ನು ಪಾಲಿಸಬೇಕು, ಈ ರೀತಿ ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ಸರ್ಕಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇರಳದಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾದ ತಕ್ಷಣ 20 ಸಾವಿರ ಕೋಟಿ ರೂ. ಘೋಷಣೆ ಮಾಡಿ, ಅತ್ಯುತ್ತಮವಾಗಿ ಭಾರತದಲ್ಲಿ ಕೊರೋನ ನಿಯಂತ್ರಣವನ್ನು ಮಾಡಿದ ಏಕೈಕ ರಾಜ್ಯ ಎಂದು ಹೇಳಬಹುದು. ರಾಜ್ಯದಲ್ಲಿ ಕೊರೊನಾ ಈ ಮಟ್ಟದಲ್ಲಿ ಹೆಚ್ಚದಂತೆ ತಡೆಯಲು ಅವಕಾಶವಿತ್ತು, ವಿಮಾನ ನಿಲ್ದಾಣದಲ್ಲಿ ಹೊರ ದೇಶದಿಂದ ಬಂದವರನ್ನು ತಡೆದು ಅಲ್ಲೇ ಕ್ವಾರೈಂಟನ್ನಲ್ಲಿಟ್ಟು ಚಿಕಿತ್ಸೆ ಕೊಡಿಸಿದ್ದರೆ ನಮಗೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಹೇಳಿದರು.ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಶಾಸಕ ಬಸನ್ ಗೌಡ ಪಾಟೀಲ್ ಯತ್ನಾಳ್ ಅವರು ಬಾಯಿಗೆ ಬಂದಂತೆ ಮಾತಾಡುತ್ತಾರೆ. ಜನಸಾಮಾನ್ಯರ ಕಷ್ಟ ಇವೆರಿಗೇನು ಗೊತ್ತಿದೆಯೇ ಎಂಬುದೇ ತಿಳಿಯುತ್ತಿಲ್ಲ ಎಂದರು.
ನಾವು ಈಗಾಗಲೇ 5 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ನೀಡಿಡಲಾಗಿದೆ. ನಾಳೆಯಿಂದ ಇತರೆ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆಯೂ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಮುಖಂಡರಾದ ಆರ್.ರವೀಂದ್ರ, ಕಲ್ಲಳ್ಳಿ ದೇವರಾಜ್, ಆರ್.ಆರ್. ಅಭಿಮಾನಿ ಬಳಗದ ರಾಜೇಶ್ ದೊಡ್ಮನೆ, ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಆರ್.ಪಾತಣ್ಣ, ಟಿ.ಬಿ.ಮಲ್ಲೇಶ್, ಗುರುಪ್ರಸಾದ್, ಕೆಂಪರಾಜು ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








