ಪ್ರಾಯೋಗಿಕವಾಗಿ 2 ಕಾಲೇಜು ಗುರ್ತಿಸಲು ಸೂಚನೆ
ಚಿತ್ರದುರ್ಗ :

ಪಿಯುಸಿ ತರಗತಿಯಲ್ಲಿ ವಿಜ್ಞಾನ ವಿಷಯವನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ವಿಶೇಷವಾಗಿ 02 ಕಾಲೇಜುಗಳನ್ನು ಗುರುತಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ನೂತನ ವರ್ಷಾಚರಣೆ ಹಾಗೂ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಈ ವಿಷಯ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಎಸ್‍ಎಸ್‍ಎಲ್‍ಸಿ ವರೆಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ಬಳಿಕ ಪಿಯುಸಿ ನಲ್ಲಿ ವಿಜ್ಞಾನ ವಿಷಯವನ್ನು ಓದಲು ಕಷ್ಟಕರ ಎನ್ನುವ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ವಿಷಯವನ್ನೇ ಓದಬೇಕು ಎನ್ನುವ ಬಯಕೆ ಇರುವಂತಹ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಪಿಯುಸಿ ತರಗತಿಯಲ್ಲಿ ವಿಜ್ಞಾನ ವಿಷಯವನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವಂತಾಗಲು ಜಿಲ್ಲೆಯಲ್ಲಿ ವಿಶೇಷವಾಗಿ ಎರಡು ಕಾಲೇಜುಗಳನ್ನು ಗುರುತಿಸಲು ಪಿಯು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು
ಕನ್ನಡ ಮಾಧ್ಯಮದಲ್ಲಿ ಎಸ್‍ಎಸ್‍ಎಲ್‍ಸಿ ವರೆಗೂ ಓದಿದ ವಿದ್ಯಾರ್ಥಿಗಳು ತಮಗೆ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಓದಬೇಕೆಂಬ ಆಸೆಯಿದ್ದರೂ, ಇಂಗ್ಲಿಷ್ ಭಾಷೆ ಕಷ್ಟ ಎಂಬ ಭಯದಿಂದ ಕಲೆ, ವಾಣಿಜ್ಯ ಮತ್ತಿತರ ಕೋರ್ಸ್‍ಗೆ ಸೇರುತ್ತಾರೆ ಅಥವಾ ಓದನ್ನೇ ಮೊಟಕುಗೊಳಿಸುತ್ತಾರೆ. ಈಗಾಗಲೆ ಪಿಯುಸಿ ವಿಜ್ಞಾನ ವಿಷಯಗಳ ಕನ್ನಡ ಮಾಧ್ಯಮದ ಪುಸ್ತಕಗಳು ಲಭ್ಯವಿದೆ. ಅಲ್ಲದೆ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮಗಳೆರಡರಲ್ಲೂ ನೀಡಲಾಗುತ್ತಿದೆ.
ಮೆಡಿಕಲ್ ಓದಬಯಸುವ ವಿದ್ಯಾರ್ಥಿಗಳು ಬರೆಯುವ ನೀಟ್ ಪ್ರವೇಶ ಪರೀಕ್ಷೆ, ಐಎಎಸ್, ಐಪಿಎಸ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಭಾಷೆಯಲ್ಲಿಯೂ ಪ್ರಶ್ನೆಗಳನ್ನು ನೀಡಲಾಗುತ್ತಿದೆ. ಹೀಗಿರುವಾಗ ವಿಜ್ಞಾನ ವಿಷಯವನ್ನು ಪಿಯುಸಿ ಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವುದು ಉತ್ತಮ ಬೆಳವಣಿಗೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಇಂತಹ ಎರಡು ಕಾಲೇಜುಗಳನ್ನು ಆಯ್ಕೆ ಮಾಡಿ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಪ್ರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ ಉತ್ತಮ ಮಳೆ, ಬೆಳೆಯಾಗಿ ರೈತರು ಸಂತಸದಿಂದ ಇರುವಂತಾಯಿತು. ಅಲ್ಲದೆ ಜಿಲ್ಲೆಯ ಜನರ ಬಹು ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಕೂಡ ಹರಿಯುವಂತಾಯಿತು. ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ವೇಗ ಪಡೆದುಕೊಂಡಿವೆ. 2020 ರ ವರ್ಷದಲ್ಲೂ ಕೂಡ ಜಿಲ್ಲೆಯಲ್ಲಿ ಉತ್ತಮ ಮಳೆ, ಬೆಳೆಯಾಗಲಿ, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚು ಹೆಚ್ಚು ಆಗಿ, ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿಯಾಗಲಿ ಎಂಬ ಆಶಯವನ್ನು ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಅವರು ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು, ಹೊಸ ವರ್ಷದ ಶುಭಾಷಯ ಕೋರಿ, ಜಿಲ್ಲೆಯಲ್ಲಿ ನೂತನ ವರ್ಷದಲ್ಲಿ ಎಲ್ಲ ವರ್ಗದ ಜನರೂ ಸುಭಿಕ್ಷವಾಗಿ, ನೆಮ್ಮದಿಯಿಂದ ಜೀವನ ನಡೆಸು ವಂತಾಗಲಿ ಎಂದು ಹಾರೈಸಿದರು.ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ವಾರ್ತಾಧಿಕಾರಿ ಬಿ. ಧನಂಜಯ ,ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷನ್ಮುಖ ಇನ್ನಿತರರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
