ದಾವಣಗೆರೆ:
ಚಾಕೋಲೇಟ್ ಆಸೆ ತೋರಿಸಿ ಹಸುಳೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಗೈದಿರುವ ದುಷ್ಕರ್ಮಿಗಳನ್ನು ಬಂಧಿಸಿ, ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಮತ್ತು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಗಳ ನೇತೃತ್ವದಲ್ಲಿ ಮಡಿವಾಳ ಸಮಾಜಬಾಂಧವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಮಡಿವಾಳ ಸಮಾಜ ಬಾಂಧವರು, ಪ್ರತಿಭಟನಾ ಮೆರವಣಿಗೆಯ ಮೂಲಕ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಜಿ.ಉಮೇಶ್, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಗೇರಿ ಗ್ರಾಮದ ರೇವಣ್ಣ ಮಡಿವಾಳ ಕುಟುಂಬ ಸಮೇತ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದ ಈಶ್ವರಪ್ಪ ಗುಡಿ ಬಳಿ ಬಾಡಿಗೆ ಮನೆಯಲ್ಲಿ ನೆಲಸಿ ಜೀವನ ನಿರ್ವಹಣೆಗೆ ಪೇಂಟರ್ ಕೆಲಸ ಮಾಡುತ್ತಿದ್ದರು.
ದುಷ್ಕರ್ಮಿಗಳು 1ನೇ ತರಗತಿ ಓದುತ್ತಿದ್ದ ರೇವಣ್ಣರ ಹಸು ಕಂದಮ್ಮಗೆ ಚಾಕೋಲೇಟ್ ಆಸೆ ತೋರಿಸಿ, ಕರೆದೊಯ್ದು ಹಸುಳೆಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಪೈಶಾಚಿಕ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೇವಣ್ಣ ಮಡಿವಾಳರ ಪುತ್ರಿ ರೂಪ ಸೆ.8ರಂದು ಸಂಜೆ 7 ಗಂಟೆಗೆ ಕಾಣೆಯಾಗಿದ್ದು, ಸೆ.10ರ ಬೆಳಿಗ್ಗೆ ಚೀಲವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ವಡ್ಡು ಗ್ರಾಮದಲ್ಲಿ ಪೇಂಟಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರೇವಣ್ಣನ 6 ವರ್ಷದ ಅಪ್ರಾಪ್ತ ಮಗಳಿಗೆ ಯಾರೋ ದುಷ್ಕರ್ಮಿಗಳು ಚಾಕೋಲೇಟ್ ನೀಡುವ ಆಸೆ ತೋರಿಸಿ, ಕರೆದೊಯ್ದು ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವುದು ಸ್ಪಷ್ಟವಾಗಿದ್ದು, ರಾಜ್ಯದಲ್ಲಿ ಇಂತಹ ಅತ್ಯಾಚಾರ, ಹತ್ಯೆ ಪ್ರಕರಣಗಳು ಪದೇ, ಪದೇ ಮರುಕಳಿಸುತ್ತಲೇ ಇದ್ದರೂ ಸಹ ಸರ್ಕಾರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ದುಷ್ಕರ್ಮಿಗಳು ಯಾರೇ ಆಗಿದ್ದರೂ ಅಂತಹವರನ್ನು ಪತ್ತೆ ಮಾಡಿ, ಬಂಧಿಸಿ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಅತ್ಯಂತ ಕ್ರೂರವಾಗಿ ಹಿಂಸಿಸಿ, ನರಳಿಸುವಂತಹ ಶಿಕ್ಷೆ ದೇಶದಲ್ಲಿ ಜಾರಿಗೆ ತರಬೇಕು. ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಿಸಬೇಕು. ಅತ್ಯಾಚಾರಕ್ಕೊಳಗಾಗಿ, ಹತ್ಯೆಯಾದ ಬಾಲಕಿಯನ್ನಂತೂ ಮರಳಿ ತಂದು ಕೊಡಲು ಸಾಧ್ಯವಿಲ್ಲ. ನೊಂದ ಪಾಲಕರಿಗೆ 10 ಲಕ್ಷ ರೂ. ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.
ವಡ್ಡು ಗ್ರಾಮದ ಅಪ್ರಾಪ್ತೆ ಬಾಲಕಿ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳನ್ನು ತಕ್ಷಣವೇ ಬಂ„ಸಿ, ಕಠಿಣ ಶಿಕ್ಷೆಗೆ ಗುರಿಪಡಿಸದಿದ್ದರೆ ಇಡೀ ರಾಜ್ಯಾದ್ಯಂತ ಮಡಿವಾಳ ಸಮಾಜ ಸೇರಿದಂತೆ ವಿವಿಧ ಸಮಾಜ, ಸಂಘಟನೆಗಳಿಂದ ತೀವ್ರ ಸ್ವರೂಪದ ಹೋರಾಟವನ್ನು ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ ಮಾತನಾಡಿ, ಈ ಅತ್ಯಾಚಾರ, ಹತ್ಯೆಯನ್ನು ಯಾರೋ ಪರಿಚಯಸ್ಥರೇ ಮಾಡಿರುವ ಶಂಕೆ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ, ಆರೋಪಿಗಳನ್ನು ಬಂ„ಸಿ, ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಖಜಾಂಚಿ ಸುರೇಶ ಕೋಗುಂಡೆ, ಆರ್.ಎನ್.ಧನಂಜಯ, ವಿಜಯಕುಮಾರ, ಪಿ.ಮಂಜುನಾಥ, ಡೈಮಂಡ್ ಮಂಜುನಾಥ, ಪತ್ರಕರ್ತ ಎಂ.ವೈ.ಸತೀಶ, ರೈತ ಮುಖಂಡ ಅಂಜಿನಪ್ಪ ಪೂಜಾರ, ಎಂ.ರುದ್ರೇಶ, ಸಿ.ಗುಡ್ಡಪ್ಪ, ಪರಶುರಾಮ, ಬಸವರಾಜಪ್ಪ ಕುಂದುವಾಡ, ಅನ್ನಪೂರ್ಣಮ್ಮ ಬಸವರಾಜಪ್ಪ, ನಾಗಮ್ಮ, ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ, ಪಿ.ಕೆ.ಲಿಂಗರಾಜ, ಜಿ.ಆರ್.ನಾಗರಾಜ, ಹರಿಹರ ಭೀಮಣ್ಣ, ಡಿ.ಷಣ್ಮುಗಂ, ಅಬ್ದುಲ್ ರೆಹಮಾನ್ ಸಾಬ್, ಭಜನಿ ಹನುಮಂತಪ್ಪ, ಮಹಮ್ಮದ್ ರಫೀಕ್, ಶಿವಕುಮಾರ ಡಿ.ಶೆಟ್ಟರ್, ಫಯಾಜ್ ಅಹಮ್ಮದ್ ಚಂದ್ರಾನಹಳ್ಳಿ, ಆವರಗೆರೆ ಹನುಮಂತಪ್ಪ, ಲಂಕೇಶ, ಕುಮಾರ, ಮುರುಗೇಶ, ನಾಗರಾಜ, ಎಚ್.ಕೆ.ಆರ್.ಸುರೇಶ, ಬಿ.ದುಗ್ಗಪ್ಪ, ಶ್ಯಾಗಲೆ ಲಕ್ಷ್ಮಣ, ಗೋಶಾಲೆ ರಮೇಶ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ