ದಾವಣಗೆರೆ:
ಉಡುಪಿ ಪೇಜಾವರ ಮಠದ ಡಾ.ವಿಶ್ವೇಶತೀರ್ಥ ಸ್ವಾಮೀಜಿ ಅವರು ಕರ್ನಾಟಕದ ಕೇಂದ್ರ ಬಿಂದು ಆಗಿರುವ ದೇವನಗರಿ (ದಾವಣಗೆರೆ)ಯೊಂದಿಗೆ ವಿಶೇಷ ನಂಟು ಹೊಂದಿದ್ದರಿಂದ ಶ್ರೀಗಳಿಗೆ ಇಲ್ಲಿ ಅಪಾರ ಭಕ್ತ ಸಮೂಹ ಹೊಂದಿದ್ದರು.
ಪೇಜಾವರ ಮಠದ ಡಾ.ವಿಶ್ವೇಶತೀರ್ಥ ಶ್ರೀಪಾದಂಗಳವರು ಭಾನುವಾರ ಬೆಳಗ್ಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿಧನರಾಗಿದ್ದು, ಶ್ರೀಗಳ ಅಗಲಿಕೆಯು ಅಪಾರ ಸಂಖ್ಯೆಯ ಭಕ್ತರಿಗೆ ದುಖಃ ಉಂಟು ಮಾಡುವ ಜೊತೆಗೆ ಭಕ್ತ ವೃಂದಕ್ಕೂ ಆಘಾತ ತಂದಿದೆ . ದಾವಣಗೆರೆಯ ಬ್ರಾಹ್ಮಣ ಸಮಾಜದ ಸಂಘ-ಸಂಸ್ಥೆಗಳು, ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ, ಸಮಾಜದ ಗಣ್ಯರು, ವಿವಿಧ ಸಮಾಜದ ಮುಖಂಡರ ನಿವಾಸಗಳಿಗೂ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ನೀಡಿ, ದರ್ಶನಾಶೀರ್ವಾದ ನೀಡುತ್ತಿದ್ದರು. ಅಲ್ಲದೇ, ಪರ್ಯಾಯ ಪೂರ್ವ ಸಂಚಾರ ಹೊರತುಪಡಿಸಿ ಬೇರೆ ಅವದಿಯಲ್ಲೂ ಇಲ್ಲಿಗೆ ಪೇಜಾವರರು ಭೇಟಿ ನೀಡಿದ್ದ ನಿದರ್ಶನಗಳಿವೆ.
ದಾವಣಗೆರೆ ಅಂದಾಕ್ಷಣವೇ ಇಲ್ಲಿನ ಜನತಾ ಗ್ರೂಪ್‍ನ ಮಾಲೀಕ, ಶ್ರೀ ಕೃಷ್ಣ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಆನಂದರಾವ್, ದಿವಂಗತ ಮೋತಿ ಪಿ.ರಾಮರಾವ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಬಿಳಿಚೋಡು ಶಾಮರಾವ್, ಅಸಗೋಡು ಜಯಸಿಂಹ, ಟ್ರಸ್ಟ್ ಕಾರ್ಯದರ್ಶಿ ಬಿ.ಅನಂತಯ್ಯ, ಕಂಪ್ಲಿ ಗುರುರಾಜಾಚಾರ್, ಒಡೆಯರ್ ಸುಬ್ಬಣ್ಣಾಚಾರ್, ಒಡೆಯರ್ ಜಯತೀರ್ಥಾಚಾರ್, ಕೆಬಿ ಬಡಾವಣೆ ಶ್ರೀ ರಾಯರ ಮಠದ ಮಧುಸೂದನಾಚಾರ್, ಹಿರಿಯ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ ಸೇರಿದಂತೆ ಅನೇಕರ ಬಗ್ಗೆ ವಿಚಾರಿಸುವ ಮೂಲಕ ಇಲ್ಲಿನ ಭಕ್ತರ ಕುಶಲೋಪರಿ ಚರ್ಚಿಸುತ್ತಿದ್ದ ಮೇರು ವ್ಯಕ್ತಿತ್ವ ಪೇಜಾವರ ಶ್ರೀಗಳದಾಗಿತ್ತು.
ವಿಶೇಷವಾಗಿ ಮೋತಿ ರಾಮರಾವ್‍ರ ನಿವಾಸ, ಕೆ.ವಿ.ಆನಂದರಾವ್, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ಭಕ್ತರ ನಿವಾಸಕ್ಕೆ ಭೇಟಿ, ಹರಸಿ, ಆಶೀರ್ವದಿಸುತ್ತಿದ್ದ ಪೇಜಾವರ ಶ್ರೀಗಳ ಬಗ್ಗೆ ಇಲ್ಲಿನ ಜನರು ಜಾತ್ಯತೀತವಾಗಿ, ಧರ್ಮಾತೀತವಾಗಿ ಅಭಿಮಾನ ತೋರುತ್ತಾ ಬಂದಿದ್ದಾರೆ. ಪರ್ಯಾಯ ಪೂರ್ವ ಸಂಚಾರದ ವೇಳೆ ಭಕ್ತರು ಸಹ ಭಕ್ತಿ, ಗೌರವದಿಂದ ದರ್ಶನ ಪಡೆಯುತ್ತಿದ್ದುದು ಇನ್ನು ನೆನಪಷ್ಟೇ.
ಪೇಜಾವರ ಶ್ರೀಗಳು 1969ರಲ್ಲಿ ದಾವಣಗೆರೆ ಆಗಮಿಸಿದ ಸಂದರ್ಭದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಬೇಕೆಂದು ಆಗಿನ ನಗರಸಭೆ ಅಧ್ಯಕ್ಷರಾಗಿದ್ದ ಡಾ.ಎ.ಗೋಪಾಲರಾಯರ ಮನವೊಲಿಸಿ, ಎಂ.ಸಿ. ಕಾಲೋನಿಯಲ್ಲಿ ನಿವೇಶನ ಪಡೆಡು, ಇಲ್ಲಿ ಅರಸನಘಟ್ಟ ಹನುಮಂತರಾಯರ ನೇತೃತ್ವದಲ್ಲಿ ಸಮಿತಿ ರಚಿಸಿ ಕಟ್ಟಡ ನಿರ್ಮಾಣ ಮಂದುವರೆಸಲು ಆದೇಶ ನೀಡಿದ್ದರ. ಇದರ ಫಲವಾಗಿ 1971ರಲ್ಲಿ ಸ್ಥಾಪನೆಗೊಂಡ ಶ್ರೀ ಕೃಷ್ಣ ವಿದ್ಯಾರ್ಥಿನಿಲಯವನ್ನು ಪೇಜಾವರ ಶ್ರೀಗಳೇ ಸ್ವತಃ ಉದ್ಘಾಟಿಸಿದ್ದರು. ಇದಾದ ಬಳಿಕ 1989ರಲ್ಲಿ ವಿದ್ಯುಕ್ತವಾಗಿ ಶ್ರೀಕೃಷ್ಣ ಸೇವಾ ಟ್ರಸ್ಟ್ ಅಸ್ಥಿತ್ವಕ್ಕೆ ಬಂದು, ಡಾ.ವಿಶ್ವೇಶತೀರ್ಥ ಶ್ರೀಪಾದಂಗಳರೇ ಅಧ್ಯಕ್ಷರಾಗಿದ್ದರು. ಸುಮಾರು 1200 ವಿದ್ಯಾರ್ಥಿಗಳು ಶ್ರೀಕೃಷ್ಣ ವಿದ್ಯಾರ್ಥಿ ನಿಲಯದಲ್ಲಿ ಜೀವನ ಕಟ್ಟಿಕೊಂಡಿದ್ದಾರೆ.
5ನೇ ಬಾರಿಯ ಪರ್ಯಾಯ ಪೀಠಾರೋಹಣ ಪೂರ್ವದಲ್ಲಿ ಸಂಪ್ರದಾಯದಂತೆ ಆಹ್ವಾನಿಸಲು 2015ರಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಭಕ್ತರ ಮನೆಗೆ ಭೇಟಿ ಕೊಟ್ಟು ಪಾದಪೂಜೆ ಸ್ವೀಕರಿಸಿ ಆಶೀರ್ವದಿಸಿದ್ದರು. ಶ್ರೀಗಳು ದಾವಣಗೆರೆಗೆ ಭೇಟಿ ನೀಡಿದಾಗಲೆಲ್ಲಾ ದೀಕ್ಷಿತ್ ರಸ್ತೆಯ ಶ್ರೀರಾಘವೇಂದ್ರ ಮಠದಲ್ಲೇ ಉಳಿದುಕೊಳ್ಳುತ್ತಿದ್ದರು. 2019 ಜೂನ್ 21ರಂದು ಮಠಕ್ಕೆ ಆಗಮಿಸಿದ್ದ ಶ್ರೀಗಳು ಪೂಜೆ ನೆರವೇರಿಸಿ ಉಪನ್ಯಾಸ, ಆಶೀರ್ವಚನ ನೀಡಿದ್ದರು. ಶ್ರೀಗಳು ನಾನಾ ಕಾರ್ಯಕ್ರಮಗಳ ನಿಮಿತ್ತ ದಾವಣಗೆರೆಗೆ ಬಂದಾಗ ಸಾಕಷ್ಟು ಭಕ್ತರ ಮನೆಗೆ ದಣಿವರಿಯದೇ ಹೋಗಿ ದರ್ಶನಾಶೀರ್ವಾದ ನೀಡುತ್ತಿದ್ದರು. ಈವರೆಗೂ ನಗರದ ಸಾವಿರಕ್ಕೂ ಹೆಚ್ಚು ಭಕ್ತರು ಪೇಜಾವರ ಶ್ರೀಗಳ ಪಾದಪೂಜೆ ಮಾಡಿ ಪುನೀತರಾಗಿದ್ದಾರೆ.
ಇದೇ ವರ್ಷದ, ಅಂದರೆ, 2019ರ ಜೂ.21ರಂದು ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪೇಜಾವರ ಶ್ರೀಗಳು ಉದ್ಘಾಟಿಸಿದ್ದರು. ದೇಹ, ಮನಸ್ಸು ಮತ್ತು ಆತ್ಮವನ್ನು ಐಕ್ಯಗೊಳಿಸುವ ವಿಶಿಷ್ಟ ಶಕ್ತಿ ಯೋಗಕ್ಕಿದ್ದು, ಇಂತಹ ಯೋಗಶಾಸ್ತ್ರವು ನಮ್ಮ ದೇಶದ ದೊಡ್ಡ ಕೊಡುಗೆಯಾಗಿದೆ ಎಂದು ಯೋಗ ಬಂಧುಗಳಿಗೆ ಸಂದೇಶ ನೀಡಿದ್ದರು.
ಇದೇ ಸಂದರ್ಭದಲ್ಲಿ ಎಂಸಿಸಿ ಎ-ಬ್ಲಾಕ್‍ನಲ್ಲಿರುವ ಶ್ರೀ ಕೃಷ್ಣ ಸೇವಾ ಟ್ರಸ್ಟ್‍ನ ಶ್ರೀ ಕೃಷ್ಣ ಕಲಾ ಮಂದಿರದಲ್ಲಿ ಪೇಜಾವರ ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಿದ್ದರು. ನಗರದ ಕೆ.ಬಿ. ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಉಪನ್ಯಾಸ ನೀಡಿದ್ದರು. ಮಧ್ವಾಚಾರ್ಯರ ಜನ್ಮ ಸ್ಥಳ ಪಾಜಕದಲ್ಲಿ ಪ್ರಾಥಮಿಕದಿಂದ ಕಾಲೇಜುವರೆಗೆ ಶಿಕ್ಷಣ ನೀಡುವ ಆನಂದತೀರ್ಥ ವಸತಿ ವಿದ್ಯಾಲಯ ಯೋಜನೆಗೆ ಉದಾರ ನೆರವು ನೀಡುವ ಮೂಲಕ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುವಂತೆ ಭಕ್ತರಿಗೆ ಮನವಿ ಮಾಡಿದ್ದರು. ಅದರಂತೆ ಸಾವಿರಾರು ಮಂದಿ ಭಕ್ತರು ಯೋಜನೆಗೆ ದೇಣಿಗೆ ನೀಡಿ ಕೈ ಜೋಡಿಸಿದ್ದರು.
ಇತ್ತೀಚೆಗೆ ಪೇಜಾವರ ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆಂಬ ವಿಷಯ ತಿಳಿದು, ಶ್ರೀಗಳ ಆರೋಗ್ಯ ಸುಧಾರಣೆಗಾಗಿ ಶ್ರೀ ಕೃಷ್ಣ ಕಲಾ ಮಂದಿರದಲ್ಲಿ ಭಕ್ತರು ವಿಶೇಷ ಪಾರಾಯಣ ಹಾಗೂ ಹೋಮ ನೆರವೇರಿಸಲಾಗಿತ್ತು. ಮನ್ಯು ಪಾರಾಯಣ, ವಿಷ್ಣು ಸಹಸ್ರನಾಮ, ಕೃಷ್ಟ ಅಷ್ಟೋತ್ತರ ಹಾಗೂ ವೆಂಕಟೇಶ್ವರ ಸ್ತೋತ್ರ ಪಾರಾಯಣ ಜರುಗಿತ್ತು. ಪಿ.ಜೆ. ಬಡಾವಣೆ ಹಾಗೂ ಕೆ.ಬಿ. ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠಗಳಲ್ಲೂ ವಿಶೇಷ ಪೂಜೆ, ಪ್ರಾರ್ಥನೆ, ಹೋಮ ನೆರವೇರಿಸಲಾಗಿತ್ತು. ಆದರೂ ದೈವ ಸಂಕಲ್ಪದಂತೆ ಶ್ರೀಕೃಷ್ಣನಲ್ಲಿ ಐಕ್ಯರಾಗಿರುವ ಪೇಜಾವರ ಶ್ರೀಗಳ ಅಗಲಿಕೆಗೆ ಭಕ್ತಜನರು ಕಣ್ಣೀರಿಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








