ಗುಬ್ಬಿ
20 ಲಕ್ಷ ಕೋಟಿ ರೂ.ಗಳ ಹೊಂದಾಣಿಕೆಗೆ ಶ್ರೀಸಾಮಾನ್ಯನ ಬದುಕಿಗೆ ಬರೆ ಹಾಕುವ ರೀತಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಜನ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಮುರಳಿಧರ ಹಾಲಪ್ಪ ದೂರಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ಮೌನ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಕುರಿತು ಮಾತನಾಡಿದ ಅವರು, ಕಳೆದ ಆರು ವರ್ಷದಿಂದ ಬ್ಯಾರೆಲ್ ತೈಲ ಬೆಲೆ ಸ್ಥಿರವಾಗಿದ್ದರೂ ಸಾರ್ವಜನಿಕರಿಗೆ ಏರಿಕೆ ಬಿಸಿ ಮುಟ್ಟಿಸುತ್ತಿರುವ ಕೇಂದ್ರ ಸರ್ಕಾರದ ಆರ್ಥಿಕ ತಂತ್ರ ತಿಳಿಯುತ್ತಿಲ್ಲ. ಅಗತ್ಯವಸ್ತುಗಳ ಬೆಲೆ ಹೆಚ್ಚಿಸುವ ಮುನ್ನ ಯೋಚಿಸಬೇಕಾದ ಸರ್ಕಾರದ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಔಚಿತ್ಯವಲ್ಲ ಎಂದು ತಿಳಿಸಿದರು.
ಆರು ವರ್ಷದಿಂದ ತೈಲ ಉದ್ದಿಮೆಯಲ್ಲಿ 18 ಲಕ್ಷ ಕೋಟಿ ರೂ.ಗಳ ಲಾಭ ಪಡೆದ ಕೇಂದ್ರ ಸರ್ಕಾರ ಅದನ್ನು ಯಾವ ಯೋಜನೆಗೆ ಬಳಸಲಾಗಿದೆ ಲೆಕ್ಕ ಕೇಳಿದ್ದೇವೆ. ಈ ಬಗ್ಗೆ 8 ಪತ್ರಗಳನ್ನು ಬರೆದರೂ ಪೆಟ್ರೋಲಿಯಂ ಸಚಿವರು ಉತ್ತರಿಸದೆ ಮೌನ ವಹಿಸಿದ್ದಾರೆ. ಅಂತಾರಾಷ್ಟ್ರೀಯ ತೈಲ ಬೆಲೆಯ ವ್ಯತ್ಯಾಸದ ಮಾಹಿತಿ ಕೂಡ ತಿಳಿಸುತ್ತಿಲ್ಲ. ಏಕಾಏಕಿ ನಿತ್ಯ ಬೆಲೆ ಏರಿಕೆ ಮಾಡುತ್ತಿರುವ ಉದ್ದೇಶವೇನು ತಿಳಿಯುತ್ತಿಲ್ಲ ಎಂದ ಅವರು, ಲೆಕ್ಕ ಕೇಳಿದರೆ ಕಾಂಗ್ರೆಸ್‍ಗೆ ದೇಶಭಕ್ತಿ ಇಲ್ಲ ಎಂದು ವದಂತಿ ಹಬ್ಬಿಸುತ್ತಾರೆ. ಚೀನಾ ಮತ್ತು ಕೊರೋನಾ ಎಂಬ ಅಂಶ ಮುಂದಿಟ್ಟು ಆರ್ಥಿಕ ಹೊಡೆತ ನೀಡುತ್ತಿರುವ ಹಿಂದೆ ಮಹತ್ತರ ಉದ್ದೇಶವೇ ಇದೆ ಎಂದು ವ್ಯಂಗ್ಯವಾಡಿದರು.
ದೇಶವನ್ನು ಸದೃಢತೆಗೊಳಿಸುವ ನಿಟ್ಟಿನಲ್ಲಿ ನಮ್ಮ ನೆರೆಹೊರೆ ರಾಷ್ಟ್ರಗಳ ದ್ವೇಷ ಕಟ್ಟಿಕೊಳ್ಳುವ ಅಗತ್ಯವಿಲ್ಲ. ನೇಪಾಳದಂತಹ ಸಣ್ಣ ದೇಶವೂ ನಮ್ಮ ವಿರುದ್ದ ಮಾತನಾಡುತ್ತಿದೆ. ಬದ್ದ ವೈರಿ ಪಾಕಿಸ್ತಾನ ಹೊರತು ಪಡಿಸಿದರೆ ಶ್ರೀಲಂಕಾ ದೇಶವು ನಮ್ಮನ್ನು ದ್ವೇಷಿಸುವ ಮಟ್ಟಕ್ಕೆ ತೆರಳಬಾರದಿತ್ತು ಎಂದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಪದಗ್ರಹಣ ಸಮಾರಂಭಕ್ಕೆ ಸಲ್ಲದ ರೀತಿ ಅಡ್ಡಿಪಡಿಸುತ್ತಿರುವ ರಾಜ್ಯ ಸರ್ಕಾರ ಎಲ್ಲಾ ಜಾಗೃತಿ ಅನುಸರಿಸಿ ಕಾರ್ಯಕ್ರಮ ಮಾಡಲು ಅನುಮತಿ ನೀಡಿರಲಿಲ್ಲ. ಅತಿರೇಕಕ್ಕೆ ಮುಟ್ಟುವ ಮುನ್ನ ಮುಖ್ಯಮಂತ್ರಿಗಳು ಅನುಮತಿ ನೀಡುವ ಜಾಣ್ಮೆ ಪ್ರದರ್ಶಿಸಿದರು. ಎಲ್ಲಾ ಪಂಚಾಯಿತಿ ಮಟ್ಟದಲ್ಲೂ ಕಾರ್ಯಕ್ರಮ ನಡೆಸಲು ಪೂರ್ವತಯಾರಿ ಮಾಡಲಾಗುವುದು ಎಂದರು.
ದೇಶದ ಆಳ್ವಿಕೆ ಚುಕ್ಕಾಣಿ ಹಿಡಿಯುವ ಅರ್ಹತೆ ಇರುವ ಸಿದ್ದರಾಮಯ್ಯ ಅವರ ಆಡಳಿತ ಮೆಚ್ಚುವಂತಹದು. 158 ಅಂಶಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಅಚ್ಚುಮಚ್ಚಿನ ನಾಯಕತ್ವ ತೋರಿದ್ದಾರೆ. ಕೇಂದ್ರ ಸರ್ಕಾರ ನಡೆಸುವ ಶಕ್ತಿ ಅವರಲ್ಲಿದೆ. ಅವರ ಮಾರ್ಗದರ್ಶನ ಇಂದಿಗೂ ಪ್ರಸ್ತುತ ಎಂದ ಅವರು, ಕಚ್ಛಾತೈಲ ಬೆಲೆ ಏರಿಕೆ ಬಗ್ಗೆ ಮತ್ತೊಮ್ಮೆ ಕೇಂದ್ರ ಸರ್ಕಾರ ಚಿಂತಿಸಬೇಕು. ಇಲ್ಲವಾದಲ್ಲಿ ದೇಶವೆ ವಿರೋಧ ವ್ಯಕ್ತಪಡಿಸಲಿದೆ. ತುರ್ತು ಪರಿಸ್ಥಿತಿಯಲ್ಲಿರುವಾಗ ನಿತ್ಯ ಬೆಲೆ ಏರಿಕೆ ಸಲ್ಲದು. ಕೂಡಲೇ ಕ್ರಮ ವಹಿಸಿ ಸಾಮಾನ್ಯ ಜನರ ಬದುಕು ಹಸನು ಗೊಳಿಸಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ರೇವಣಸಿದ್ದಯ್ಯ, ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ಜಿಲ್ಲಾ ಕಾರ್ಯದರ್ಶಿ ಬಿ.ಆರ್.ಭರತ್‍ಗೌಡ, ಪಪಂ ಸದಸ್ಯ ಮಹಮದ್ ಸಾದಿಕ್, ಮುಖಂಡರಾದ ಕೆ.ಆರ್.ತಾತಯ್ಯ, ಸಲೀಂಪಾಷ, ಜಿ.ವಿ.ಮಂಜುನಾಥ್, ಮಹಮದ್ ರಫಿ, ಜಿ.ಎಸ್.ಮಂಜುನಾಥ್, ಶಿವು ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ