ಶಿರಾ:
ತಾಲ್ಲೂಕಿನ ದಾವೂದ್‍ಪಾಳ್ಯದಲ್ಲಿ ಬಹುತೇಕ ಮಂದಿ ಅಲ್ಪಸಂಖ್ಯಾತ ಸಮುದಾಯದವರಿದ್ದು ಈ ಗ್ರಾಮದ ರಸ್ತೆ ಹದಗೆಟ್ಟು ವರ್ಷಗಳೇ ಉರುಳಿದರೂ ಸದರಿ ರಸ್ತೆಯನ್ನು ದುರಸ್ಥಿಗೊಳಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಜೆ.ಡಿ.ಯು, ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಲಿಂಗದಹಳ್ಳಿ ಚೇತನ್‍ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ತಾಲ್ಲೂಕಿನ ಹೊನ್ನಗೊಂಡನಹಳ್ಳಿ ಗ್ರಾ.ಪಂ.ಗೆ ಸೇರಿದ ದಾವೂದ್‍ಪಾಳ್ಯ ಕುಗ್ರಾಮವಾಗಿದ್ದು ಅತಿ ಹೆಚ್ಚು ಅಲ್ಪಸಂಖ್ಯಾತ ಸಮುದಾಯವೇ ಇಲ್ಲಿ ಹೆಚ್ಚಾಗಿದೆ. ಈ ಗ್ರಾಮದಲ್ಲಿ ಯಾವುದೇ ರೀತಿಯ ಪ್ರಭಾವಿ ರಾಜಕಾರಣಿಗಳಿಲ್ಲವಾದ್ದರಿಂದ ಈ ಭಾಗದ ಜನಪ್ರತಿನಿಧಿಗಳು ಸದರಿ ಗ್ರಾಮದ ಅಭಿವೃದ್ಧಿಯ ಬಗ್ಗೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ದಾವೂದ್‍ಪಾಳ್ಯ ಗ್ರಾಮದ ಒಳಗಿನ ಈ ಮಣ್ಣಿನ ರಸ್ತೆಯು ಸಿ.ಸಿ.ರಸ್ತೆಯನ್ನೂ ಕಾಣದೆ, ಡಾಂಬರ್ ರಸ್ತೆಯನ್ನೂ ಕಾಣದೆ ಸಂಪೂರ್ಣ ಹದಗೆಟ್ಟಿದ್ದು ಗ್ರಾಮದ ಜನತೆ ಮಳೆ ಬಂದರೆ ಗ್ರಾಮದಲ್ಲಿ ಓಡಾಡಲು ಕೂಡಾ ಸಾದ್ಯವಾಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮದ ರಸ್ತೆ ದುರಸ್ಥಿ ಕೈಗೊಳ್ಳುವಂತೆ ಲಿಂಗದಹಳ್ಳಿ ಚೇತನ್‍ಕುಮಾರ್ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ