ಹೆಗ್ಗೆರೆ ಬಡಾವಣೆಯಲ್ಲಿ ಅಧ್ವಾನಗೊಂಡ ರಸ್ತೆಗಳು

ತುಮಕೂರು

    ಜನಸಂಖ್ಯೆ ಹೆಚ್ಚಿದಂತೆಲ್ಲಾ ಬಡಾವಣೆಗಳು ವಿಸ್ತಾರಗೊಳ್ಳುತ್ತಿವೆ. ದುಬಾರಿ ನಿವೇಶನಗಳ ಪರಿಣಾಮವಾಗಿ ಜನತೆ ಹೊರವಲಯ ಅಥವಾ ಗ್ರಾಮಾಂತರ ಕ್ಷೇತ್ರಗಳತ್ತ ಹೋಗಲು ಮುಂದಾಗುತ್ತಿದ್ದಾರೆ. ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ ಮೂಲಭೂತ ಸೌಕರ್ಯಗಳ ಕಡೆ ಗಮನ ಹರಿಸಿದಾಗ ನಿರೀಕ್ಷಿತ ವಾತಾವರಣ ಮತ್ತು ಸೌಕರ್ಯಗಳು ಸಿಗುತ್ತಿಲ್ಲ.

    ತುಮಕೂರಿನ ಬಹಳಷ್ಟು ಮಂದಿ ಹೆಗ್ಗೆರೆಯಲ್ಲಿ ನಿವೇಶನಗಳನ್ನು ಪಡೆದು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಬಹಳಷ್ಟು ಮಂದಿ ನಿವೃತ್ತರು, ವಿವಿಧ ಉದ್ಯೋಗಿಗಳು ಹೆಗ್ಗೆರೆ ಒಂದು ಸುರಕ್ಷಿತ ಪ್ರದೇಶ ಎಂದೇ ಪರಿಗಣಿಸಿ ಅತ್ತ ಪದಾರ್ಪಣೆ ಮಾಡಿದ್ದಾರೆ. ಬಡಾವಣೆ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಲೇ ಇದೆ. ತುಮಕೂರಿನಿಂದ 7 ಕಿ.ಮೀ. ದೂರ ಇರುವ ಈ ಪ್ರದೇಶ ನಗರಕ್ಕೆ ಹತ್ತಿರ ಎಂದೇ ಪರಿಗಣಿಸಿ ಜನತೆ ಇಂತಹ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಸೂಕ್ತ ಮೂಲಭೂತ ಸೌಲಭ್ಯಗಳ ಕೊರತೆಗಳು ಎದ್ದು ಕಾಣುತ್ತಿವೆ.

     ಹೆಗ್ಗೆರೆ ಹೊಸ ಬಡಾವಣೆಗೆ ತೆರಳಿದರೆ ಅಸಮರ್ಪಕ ರಸ್ತೆಗಳೇ ಎಲ್ಲ ಕಡೆ ಸ್ವಾಗತಿಸುತ್ತವೆ. ಹೆಗ್ಗೆರೆ ಮುಖ್ಯ ರಸ್ತೆಯ ಬಲ ತಿರುವಿನ ರಸ್ತೆಗಳಿಗೆ ಹೋದರೆ ಯಾವ ರಸ್ತೆಯೂ ಸಮರ್ಪಕವಾಗಿಲ್ಲ. ಹೊಸ ಬಡಾವಣೆಯ ಎಲ್ಲ ಪ್ರದೇಶಗಳ ರಸ್ತೆಗಳು ಅವ್ಯವಸ್ಥೆಯಿಂದಲೆ ಕೂಡಿವೆ. ಇರುವ ರಸ್ತೆಗಳೆ ಸರಿ ಇಲ್ಲ. ಕಚ್ಛಾ ರಸ್ತೆಗಳಾಗಿರುವ ಇಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬೀಳುತ್ತಿವೆ. ಇದೀಗ ಮಳೆಗಾಲದ ಸಮಯವಾದ್ದರಿಂದ ರಸ್ತೆಗಳಲ್ಲಿ ನೀರು ತುಂಬಿಕೊಂಡು ಕೆಸರು ಗದ್ದೆಗಳಂತಾಗಿವೆ. ಈ ಭಾಗದ ಮನೆಗಳಿಗೆ ಹೋಗಿ ಬರುವವರು ಕೆಸರನ್ನು ವಾಹನಗಳಿಗೆ ಮೆತ್ತಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ.

    ಹೆಗ್ಗೆರೆ ಹೊಸ ಬಡಾವಣೆ ವಿಶಾಲವಾದ ಪ್ರದೇಶ ಒಳಗೊಂಡಿದೆ. ಖಜಾನೆ ಬಡಾವಣೆ, ಒಕ್ಕೋಡಿ ಹೊಸ ಬಡಾವಣೆ, ಹೆಂಜಾರಪ್ಪ ಲೇಔಟ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ದಿನೆ ದಿನೆ ವಿಸ್ತಾರಗೊಳ್ಳುತ್ತಿವೆ. ಅಂದರೆ ಮನೆಗಳು ನಿರ್ಮಾಣವಾಗುತ್ತಿವೆ. ಆದರೆ ಸಮರ್ಪಕ ರಸ್ತೆಗಳು ಮಾತ್ರ ನಿರ್ಮಾಣವಾಗುತ್ತಿಲ್ಲ. ಆಗಾಗ ಮಳೆ ಬಂದರಂತೂ ಈ ನಿವಾಸಿಗಳು ಹೊರಬರುವುದೆ ಒಂದು ಕಷ್ಟಕರ ಪರಿಸ್ಥಿತಿ ಎದುರಿಸಬೇಕಾಗಿದೆ.

     ತುಮಕೂರು ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಪೈಕಿ ಹೆಗ್ಗೆರೆ ಗ್ರಾಮ ಪಂಚಾಯತಿಗೆ ಉತ್ತಮ ಆದಾಯವೂ ಇದೆ. ಕರ ಸಂದಾಯವೂ ಆಗುತ್ತಿದೆ. ನಿವೇಶನಗಳ ಖಾತೆ, ನೋಂದಣಿ, ಮನೆಗಳ ವಿವಿಧ ಕರ ಸೇರಿದಂತೆ ಸಾಕಷ್ಟು ವರಮಾನ ಇದೆ. ಆದರೆ ನೀರಿನ ಸೌಲಭ್ಯ ಹೊರತುಪಡಿಸಿದರೆ ರಸ್ತೆ ಮತ್ತು ಚರಂಡಿಯಂತಹ ವ್ಯವಸ್ಥೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.

    ಹಿಂದೆಲ್ಲ ಕಡಿಮೆ ಮನೆಗಳಿದ್ದವು. ಈಗ ಈ ಸುತ್ತಮುತ್ತ ಸುಮಾರು 2000 ಕ್ಕೂ ಅಧಿಕ ಮನೆಗಳು ನಿರ್ಮಾಣವಾಗಿವೆ. ಬೇರೆ ಬೇರೆ ಹೆಸರುಗಳಿಂದ ಈ ಬಡಾವಣೆಗಳನ್ನು ಕರೆಯಲಾಗುತ್ತದೆ. ಆದರೆ ಯಾವುದೇ ರಸ್ತೆ ಮತ್ತು ಪ್ರದೇಶಕ್ಕೆ ಹೋದರೂ ರಸ್ತೆ ಮತ್ತು ಚರಂಡಿಗಳ ಕೊರತೆ ಎದ್ದು ಕಾಣುತ್ತಿದೆ. ರಾತ್ರಿ ವೇಳೆಯಂತೂ ಮಳೆಗಾಲದ ಸಮಯದಲ್ಲಿ ಬರುವುದಕ್ಕೆ ಆಗುವುದಿಲ್ಲ. ವಾಹನಗಳು ಹೂತು ಹೋಗುತ್ತವೆ ಎನ್ನುತ್ತಾರೆ ಖಜಾನೆ ಇಲಾಖೆಯ ನಿವೃತ್ತ ನೌಕರ ಸಣ್ಣತಿಮ್ಮಯ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link