ಬುಗುಡನಹಳ್ಳಿ ಜಲಸಂಗ್ರಹಾಗಾರದ ಸುತ್ತ ಕೆಸರು ತುಂಬಿದ ರಸ್ತೆ, ಹಳ್ಳ, ಅಪಾಯ

ತುಮಕೂರು
   ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿಯ ಜಲಸಂಗ್ರಹಾಗಾರಕ್ಕೆ ಹೊಂದಿಕೊಂಡಂತೆ ಇರುವ ಎಲ್ಲ ರಸ್ತೆಗಳೂ ಪ್ರಸ್ತುತ ಕೆಸರುಮಯವಾಗಿವೆ. ಹಳ್ಳಕೊಳ್ಳಗಳಿಂದ ಕೂಡಿದ್ದು, ಮಳೆಯ ನೀರು ತುಂಬಿದೆ. ಹೆಜ್ಜೆ ಹೆಜ್ಜೆಗೂ ಜಾರುವ (ಸ್ಕಿಡ್) ಅಪಾಯ ಉಂಟಾಗುತ್ತಿದ್ದು, ಇಲ್ಲಿನ ಸಂಚಾರಿಗರು ಜೀವವನ್ನು ಕೈಲಿ ಹಿಡಿದು ಸಂಚರಿಸಬೇಕಾದ ಸನ್ನಿವೇಶ ಎದುರಾಗಿದೆ.
     ಬುಗುಡನಹಳ್ಳಿಯು ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿದೆ. ಇದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡಲಿದೆ. ಆದರೆ ಈ ಬುಗುಡನಹಳ್ಳಿಯಲ್ಲಿರುವ ಹೇಮಾವತಿ ಜಲಸಂಗ್ರಹಾಗಾರವು ತುಮಕೂರು ಮಹಾನಗರ ಪಾಲಿಕೆಯ ಸುಪರ್ದಿನಲ್ಲಿದೆ. ಮಹಾನಗರ ಪಾಲಿಕೆಯು ಕೋಟ್ಯಂತರ ರೂ.ಗಳನ್ನು ವಿನಿಯೋಗಿಸಿ, ನೀರು ಶುದ್ಧೀಕರಣ ಘಟಕ, ಪಂಪ್ ಹೌಸ್ ಇತ್ಯಾದಿಗಳನ್ನು ನಿರ್ಮಿಸಿದೆ. ಪಾಲಿಕೆಯ ಸಿಬ್ಬಂದಿ ಹಗಲಿರುಳೂ ಇಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಜೊತೆಗೆ ಈ ಜಲಸಂಗ್ರಹಾಗಾರದ ಸುರಕ್ಷತೆಯನ್ನೂ ಗಮನಿಸುತ್ತಾರೆ.
      ಮಹಾನಗರ ಪಾಲಿಕೆಯ ನೀರು ಪೂರೈಕೆ ವಿಭಾಗವು ಈ ಜಲಸಂಗ್ರಹಾಗಾರದೊಡನೆ ನೇರ ಸಂಪರ್ಕದಲ್ಲಿದ್ದು, ಪಾಲಿಕೆಯ ಅಧಿಕಾರಿಗಳು ನಿಯಮಿತವಾಗಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುತ್ತಾರೆ. ತುಮಕೂರು ನಗರದ ನಾಲ್ಕು ಲಕ್ಷ ಜನರಿಗೆ ವರ್ಷಪೂರ್ತಿ ಕುಡಿಯುವ ನೀರು ಪೂರೈಸುವ ಈ ಜಲಸಂಗ್ರಹಾಗಾರವು ಅತ್ಯಂತ ಮಹತ್ವದ ಸ್ಥಳವಾಗಿದೆ. ಇದರ ಜೊತೆಗೆ ಇದೀಗ ಹೊಸದಾಗಿ ತುಮಕೂರು ಅಮಾನಿಕೆರೆಗೆ ನೀರು ಪೂರೈಸಲು ಮತ್ತೊಂದು ಜಾಕ್‍ವೆಲ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 
      ಈ ಜಲಸಂಗ್ರಹಾಗಾರ ಮತ್ತು ಅದರ ಸುತ್ತಮುತ್ತಲಿನ ಪಾಲಿಕೆಯ ನೀರು ಪೂರೈಕೆ ಕೇಂದ್ರಗಳಿಗೆ ಭೇಟಿ ನೀಡುವುದೇ ಒಂದು ಸಾಹಸವಾಗುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ, ಮಳೆ ಬರುವಾಗ ಇಲ್ಲಿ ಸಂಚರಿಸುವುದೇ ಅತ್ಯಂತ ಅಪಾಯಕಾರಿ ಆಗುತ್ತಿದೆ. ಮಣ್ಣಿನ ರಸ್ತೆಯಲ್ಲಿ ಹೆಜ್ಜೆಹೆಜ್ಜೆಗೂ ಹಳ್ಳ-ಕೊಳ್ಳಗಳಿವೆ. ಮಳೆ ನೀರು ತುಂಬಿ ಕೆಸರುಮಯವಾಗಿವೆ. ಹೆಜ್ಜೆಯಿಟ್ಟರೆ ಜಾರುತ್ತದೆ. ದ್ವಿಚಕ್ರವಾಹನಗಳಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ. ನಾಲ್ಕು ಚಕ್ರದ ವಾಹನವಾದರೂ, ಕೆಸರಿನಿಂದ ನಿಯಂತ್ರಣ ತಪ್ಪಿದಂತಾಗುತ್ತಿದೆ. ಕೆರೆಯ ಏರಿಯ ಸಣ್ಣ ದಾರಿಯಲ್ಲಿ ಸಂಚರಿಸುವುದು ಪ್ರಾಣಾಪಾಯ ಉಂಟುಮಾಡುವಂತಿದೆ. 
      ಕುಪ್ಪೂರು ಬಳಿ ಜಾಕ್ವೆಲ್ ಹಾಗೂ ಪಂಪ್ ಹೌಸ್ ಇದೆ. ನರಸಾಪುರ ಕೆರೆಯ ಅಂಚಿನಲ್ಲಿ ಜಾಕ್ವೆಲ್ ಮತ್ತು ಪಂಪ್ ಹೌಸ್ ಇದೆ. ಬುಗುಡನಹಳ್ಳಿಯಲ್ಲಿ ಶುದ್ಧನೀರಿನ ಯಂತ್ರಾಗಾರ ಇದೆ. ಇಲ್ಲೆಲ್ಲ ಮಹಾನಗರ ಪಾಲಿಕೆಯು ಕೋಟ್ಯಂತರ ರೂ. ವಿನಿಯೋಗಿಸಿ ಬೃಹತ್ ಯಂತ್ರೋಪಕರಣಗಳನ್ನು ಅಳವಡಿಸಿದೆ. ಇವುಗಳ ಸುರಕ್ಷತೆ ಹಾಗೂ ನಿರ್ವಹಣೆಗಾಗಿ ಹಗಲಿರುಳೂ ಪಾಲಿಕೆಯ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
     ಇನ್ನು ಹೇಮಾವತಿ ಮುಖ್ಯ ನಾಲೆಯಲ್ಲಿ ಬುಗುಡನಹಳ್ಳಿ ಜಲಸಂಗ್ರಹಾಗಾರದ ಕಡೆಗೆ ಇರುವ ಎಸ್ಕೇಪ್ ಬಳಿ ಹಾಗೂ ಅಲ್ಲಿಂದ ಆ ನೀರು ಕಾಲುವೆ ಮೂಲಕ ಜಲಸಂಗ್ರಹಾಗಾರ ಸೇರುವ ಬಳಿಯೂ ಪಾಲಿಕೆಯ ಸಿಬ್ಬಂದಿ ಸಂಚರಿಸುತ್ತಿರುತ್ತಾರೆ. ದುರಂತವೆಂದರೆ ಇವೆಲ್ಲದರ ಬಳಿಗೆ ತೆರಳುವ ಒಂದೇ ಒಂದು ರಸ್ತೆಯೂ ಸಮರ್ಪಕವಾಗಿಲ್ಲ. ಎಲ್ಲವೂ ಮಣ್ಣುರಸ್ತೆಯಾಗಿದ್ದು, ಈಗಂತೂ ಮಳೆಯ ಕಾರಣದಿಂದ ಕೆಸರುಗದ್ದೆ ಯಾಗಿದೆ. ಪಾಲಿಕೆಯ ಅಧಿಕಾರಿಗಳು ಹಾಗೂ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಂಚಾರಕ್ಕೆ ತೀವ್ರ ತೊಡಕು ಉಂಟಾಗಿದೆ. 
      ಇಲ್ಲೆಲ್ಲ ಕೋಟ್ಯಂತರ ರೂ.ಗಳ ಯಂತ್ರೋಪಕರಣಗಳಿವೆ. ಅವುಗಳಲ್ಲಿ ಆಕಸ್ಮಿಕವಾಗಿ ತಾಂತ್ರಿಕ ತೊಂದರೆಗಳು ಉಂಟಾಗುತ್ತಿರುತ್ತವೆ. ಅಂತಹ ಸನ್ನಿವೇಶದಲ್ಲಿ ತುರ್ತಾಗಿ ಸ್ಥಳಕ್ಕೆ ಧಾವಿಸುವುದು ಕಷ್ಟವಾಗುತ್ತಿದೆ. ರಾತ್ರಿ ಹೊತ್ತಿನಲ್ಲಂತೂ ವಿದ್ಯುತ್ ದೀಪಗಳೂ ಇಲ್ಲದಿರುವುದರಿಂದ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರವಾಗುತ್ತಿದೆ. ಮಳೆ ಬಂದರಂತೂ ದೇವರೇ ಗತಿ ಎನ್ನುವಂತಾಗುತ್ತಿದೆ. ಇನ್ನು ಕೆಟ್ಟುಹೋದ ಪಂಪು ಮೋಟಾರ್‍ಗಳನ್ನು ಸಾಗಿಸುವುದೆಂದರೆ ಇನ್ನೂ ಕಷ್ಟವಾಗುತ್ತಿದೆ. ಕಾರಣ ರಸ್ತೆಯ ದುಸ್ಥಿತಿ. 
       ಬುಗುಡನಹಳ್ಳಿ, ನರಸಾಪುರ, ಕುಪ್ಪೂರು ಸುತ್ತಮುತ್ತ ರೈತಾಪಿ ಜನರೇ ಇದ್ದಾರೆ. ಪ್ರತಿನಿತ್ಯ ರೈತರು ತಾವು ಬೆಳೆದ ಉತ್ಪನ್ನಗಳನ್ನು ವಿವಿಧ ರೀತಿಯ ವಾಹನಗಳಲ್ಲಿ ತುಮಕೂರಿನ ಮಾರುಕಟ್ಟೆಗೆ ತರುತ್ತಾರೆ. ಆದರೆ ಅವರಿಗೂ ಸಹ ಈಗ ಸೂಕ್ತ ರಸ್ತೆ ಇಲ್ಲದೆ ಸಮಸ್ಯೆ ಉಂಟಾಗುತ್ತಿದೆ. ಇದಲ್ಲದೆ ಆ ಭಾಗದ ಸಣ್ಣಪುಟ್ಟ ಹಳ್ಳಿಗಳ, ತೋಟದ ನಿವಾಸಿಗಳ ಸಂಚಾರಕ್ಕೂ ತೊಂದರೆ ಎದುರಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಪಡುವ ಪಾಡು ಹೇಳತೀರದು. ಇನ್ನು ಈ ಭಾಗದಲ್ಲಿ ತುರ್ತು ಸಂದರ್ಭ ಎದುರಾದರೆ ಒಂದು ಆಂಬ್ಯುಲೆನ್ಸ್ ಬರುವುದಾದರೂ ಹೇಗೆ ಎಂಬ ಪ್ರಶ್ನೆ ಹಲವರನ್ನು ಕಾಡುವಂತಾಗಿದೆ.
      ಬುಗುಡನಹಳ್ಳಿಯಲ್ಲಿರುವುದು ಈಗ ಕೇವಲ ಒಂದು ಕೆರೆಯಲ್ಲ. ಇದೊಂದು ಜಲಸಂಗ್ರಹಾಗಾರ. ಹೀಗಾಗಿ ಇದರ ಸಂರಕ್ಷಣೆ ಅನಿವಾರ್ಯ. ಜೊತೆಗೆ ಇಲ್ಲಿ ಪಾಲಿಕೆಗೆ ಸೇರಿದ ಪಂಪ್ ಹೌಸ್, ಶುದ್ಧ ನೀರಿನ ಯಂತ್ರಾಗಾರ ಇವೆಲ್ಲ ಇರುವುದರಿಂದ ಪಾಲಿಕೆ ಅಧಿಕಾರಿಗಳು- ಸಿಬ್ಬಂದಿಗಳು ನಿರಂತರವಾಗಿ ಸಂಚರಿಸುತ್ತಾರೆ. ಹೀಗಾಗಿ ಬುಗುಡನಹಳ್ಳಿ ಜಲಸಂಗ್ರಹಾಗಾರದ ಸುತ್ತಲೂ ಹಾಗೂ ನರಸಾಪುರ ಕೆರೆ ಏರಿಯ ಮಾರ್ಗವನ್ನು ಮತ್ತು ಕುಪ್ಪೂರು ಕಡೆಯ ರಸ್ತೆಯನ್ನು ಮೊದಲ ಆದ್ಯತೆಯಿಂದ ತುರ್ತಾಗಿ ಅಭಿವೃದ್ಧಿಪಡಿಸಬೇಕಾಗಿದೆ ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.  
      ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರು ಮತ್ತು ತುಮಕೂರು ನಗರದ ಶಾಸಕರು ಜಂಟಿಯಾಗಿ ಈ ಬಗ್ಗೆ ಕಾರ್ಯೋನ್ಮುಖರಾಗಬೇಕಾಗಿದೆ. ಜೊತೆಗೆ ಮಹಾನಗರ ಪಾಲಿಕೆಯ ಚುನಾಯಿತ ಮಂಡಲಿಯೂ ವಿಶೇಷ ಗಮನ ನೀಡಿ, ಜಲಸಂಗ್ರಹಾಗಾರದ ಸುತ್ತಲಿನ ಎಲ್ಲ ರಸ್ತೆಗಳ ಅಭಿವೃದ್ಧಿಗೆ ತುರ್ತುಗಮನ ಕೊಡಬೇಕಾಗಿದೆ ಎಂಬುದು ಜನಾಗ್ರಹವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link