ಬೆಂಗಳೂರು:
ಈ ಬಾರಿಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಹಲವು ಚರ್ಚೆ ಮತ್ತು ವಾಗ್ದಾಳಿಗಳಿಗೆ ಸಾಕ್ಷಿಯಾಯಿತು. ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿಯೇ ಸೀಮಿತ ಅವಧಿಯ ಅಧಿವೇಶನ ಶನಿವಾರ ಅಂತ್ಯಗೊಂಡಿತು. ಈ ನಡುವೆ ಹಲವು ವಿವಾದಿತ ಮಸೂದೆಗಳು ಅಂಗೀಕಾರಗೊಂಡವು.
ಬಿ.ಎಸ್.ಯಡಿಯೂರಪ್ಪ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ನಿರೀಕ್ಷೆಯಂತೆಯೇ ಯಶಸ್ಸು ಕಾಣಲಿಲ್ಲ. ಶನಿವಾರ ರಾತ್ರಿ ಧ್ವನಿಮತದ ಮೂಲಕ ನಡೆದ ಮತದಾನದಲ್ಲಿ ನಿರ್ಣಯದ ವಿರುದ್ಧವಾಗಿಯೇ ಹೆಚ್ಚು ಮತಗಳು ಬಂದವು. ಇದರೊಂದಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದು, ಸರ್ಕಾರಕ್ಕೆ ಇನ್ನು 6 ತಿಂಗಳುಗಳ ಕಾಲ ಯಾವುದೇ ಅಡೆತಡೆ ಇಲ್ಲ. ಈ ಅವಧಿಯಲ್ಲಿ ಮತ್ತೆ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವೂ ಇಲ್ಲ.
ಅಧಿವೇಶನವನ್ನು 6 ದಿನಗಳಿಗೆ ಸೀಮಿತಗೊಳಿಸಿದ್ದರಿಂದ ಶನಿವಾರ ರಾತ್ರಿ ಒಂದು ಗಂಟೆಯವರೆಗೂ ಕಲಾಪ ನಡೆಯಿತು. ಈ ನಡುವೆ ಹಲವು ಬಿಸಿಬಿಸಿ ಚರ್ಚೆಗಳಿಗೆ ವಿಧಾನ ಮಂಡಲ ಸಾಕ್ಷಿಯಾಯಿತು. ಸಿದ್ದರಾಮಯ್ಯ, ಯಡಿಯೂರಪ್ಪ, ಡಿ.ಕೆ.ಶಿವಕುಮಾರ್, ಜೆ.ಸಿ.ಮಾಧುಸ್ವಾಮಿ ಅವರುಗಳ ನಡುವೆ ಮಾತಿನ ಚಕಮಕಿಗಳು ನಡೆದವು.
ಸದನದಲ್ಲಿ ಹೆಚ್ಚು ಗಮನ ಸೆಳೆದ ಅಂಶಗಳೆಂದರೆ, ಕೊರೊನಾ ಉಪಕರಣಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಹಾಗೂ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಧ್ವನಿ ಎತ್ತಿದ್ದು. ಈ ಕಾರಣಕ್ಕಾಗಿಯೇ ಸದನ ಒಂದಷ್ಟು ಕಾಲ ಬಿಸಿ ಬಿಸಿ ಚರ್ಚೆ ಮತ್ತು ವಾಗ್ವಾದಗಳಿಗೂ ಕಾರಣವಾಯಿತು. ತನ್ನ ಮೇಲೆ ಭ್ರಷ್ಟಾಚಾರದ ಆರೋಪ ಎದುರಾದಾಗ ಅದನ್ನು ಕಡಾ ಖಂಡಿತವಾಗಿ ನಿರಾಕರಿಸಿದ ಬಿ.ಎಸ್.ಯಡಿಯೂರಪ್ಪ ಒಂದು ವೇಳೆ ಆರೋಪ ಸಾಬೀತಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಏರು ಧ್ವನಿಯಲ್ಲಿ ಆರ್ಭಟಿಸಿದರು.
ಇದಕ್ಕೆ ಪ್ರತ್ಯುತ್ತರವಾಗಿ ಸಿದ್ದರಾಮಯ್ಯ ಕೂಡ ಅದೇ ಧಾಟಿಯಲ್ಲಿ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದಲೇ ತನಿಖೆಯಾಗಲಿ ಎಂದು ತಮ್ಮ ಮೊನುಚಾದ ಮಾತುಗಳಿಂದ ಸದನದಲ್ಲಿ ಆರ್ಭಟಿಸಿದರು.
ರಾತ್ರಿ 10 ಗಂಟೆಯ ನಂತರ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ವಾಗ್ಯುದ್ಧ ನಡೆಯಿತು. ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಬಂದದ್ದನ್ನು ಪ್ರಸ್ತಾಪಿಸಿ ಜೆ.ಸಿ.ಮಾಧುಸ್ವಾಮಿ ಪ್ರಸ್ತಾಪ ಎತ್ತಿದರು. ಇದಕ್ಕೆ ಅಷ್ಟೇ ತೀವ್ರವಾಗಿ ಪ್ರತಿಕ್ರಿಯಿಸಿದ ಡಿಕೆಶಿ ನಿಮ್ಮ ನಾಯಕರು ಜೈಲಿಗೆ ಹೋಗಿ ಬಂದದ್ದು ನೆನಪಿಲ್ಲವೆ ಎಂದು ಕುಟುಕಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ