ಸಂತೆ ಇಲ್ಲದೆ ಪರದಾಡಿದ ಕುರಿಗಾಹಿಗಳು

ತುಮಕೂರು:

     ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಇನ್ನೂ ಸಂತೆ ಮತ್ತಿತರ ಜನ ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಕೊಟ್ಟಿಲ್ಲ. ನಿರ್ಬಂಧಗಳ ನಡುವೆ ವ್ಯಾಪಾರ ವಹಿವಾಟು ನಡೆಯುತ್ತಿದೆ.

     ಬಟವಾಡಿಯಲ್ಲಿರುವ ಎಪಿಎಂಸಿ ಆವರಣದ ಬಳಿ ಕುರಿ ಸಂತೆ ನಡೆಯುತ್ತಿತ್ತು. ಇದಕ್ಕೂ ಮುನ್ನ ಕ್ಯಾತ್ಸಂದ್ರದಲ್ಲಿ ಕುರಿ ಸಂತೆ ಅತ್ಯಂತ ಹೆಚ್ಚು ಪ್ರಚಲಿತವಾಗಿತ್ತು. ಅಲ್ಲಿ ಸ್ಥಗಿತಗೊಂಡ ನಂತರ ಎಪಿಎಂಸಿಯಲ್ಲಿ ಈ ವಹಿವಾಟು ಜೋರಾಗಿ ನಡೆಯುತ್ತಿತ್ತು. ವಾರದ ಪ್ರತಿ ಮಂಗಳವಾರ ಇಲ್ಲಿ ಕುರಿ ಸಂತೆ ನಡೆಯುತ್ತಾ ಬಂದಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕುರಿ ಸಂತೆಗೆ ಅವಕಾಶ ಕಲ್ಪಿಸಿಲ್ಲ.

    ಕಳೆದ ಮಂಗಳವಾರ ಎಪಿಎಂಸಿ ಬಳಿ ರೈತರು, ಕುರಿಗಾಹಿಗಳು ಒಂದಷ್ಟು ಸಣ್ಣಪುಟ್ಟ ವ್ಯಾಪಾರ ನಡೆಸಿದ್ದಾರೆ. ಇನ್ನು ಮುಂದೆ ಸಂತೆ ಆರಂಭವಾಗಬಹುದು ಎಂದುಕೊಂಡ ಕುರಿಗಾಹಿಗಳು ನಿನ್ನೆ ಅತಿ ಹೆಚ್ಚು ಸಂಖ್ಯೆಯಲ್ಲಿ ಎಪಿಎಂಸಿ ಬಳಿ ಬರತೊಡಗಿದರು. ಆದರೆ ಅಲ್ಲಿ ಅವಕಾಶವಿಲ್ಲದ ಕಾರಣ ಹಾಗೂ ಪೊಲೀಸರಾದಿಯಾಗಿ ಕುರಿ ಸಂತೆ ನಡೆಸಲು ಅವಕಾಶ ಕೊಡದ ಕಾರಣ ಕ್ಯಾತ್ಸಂದ್ರ ಕಡೆಗೆ ತೆರಳಿದರು. ಅಲ್ಲಿಯೂ ಅವಕಾಶ ಇಲ್ಲದ ಕಾರಣ ಮತ್ತೆ ಬಟವಾಡಿ ಕಡೆಗೆ ಬರತೊಡಗಿದರು. ಅಲ್ಲಿಂದಲ್ಲಿಲ್ಲಿಗೆ, ಇಲ್ಲಿಂದಲ್ಲಿಗೆ ಓಡಾಡುತ್ತಾ ಕುರಿಗಾಹಿಗಳು ಗಂಟೆಗಟ್ಟಲೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

  ಸರ್ವೀಸ್ ರಸ್ತೆ ಬದಿಯಲ್ಲೇ ಕೆಲಹೊತ್ತು ಕುರಿಗಾಹಿಗಳು ತಮ್ಮ ಕುರಿ ಮತ್ತು ಮೇಕೆಗಳನ್ನು ನಿಲ್ಲಿಸಿಕೊಂಡು ನಿಂತುಬಿಟ್ಟರು. ಸುಮಾರು 2000ಕ್ಕೂ ಅಧಿಕ ಕುರಿ ಮತ್ತು ಮೇಕೆಗಳನ್ನು ತರಲಾಗಿತ್ತು. ಆದರೆ ವ್ಯಾಪಾರಕ್ಕೆ ಅವಕಾಶವಿಲ್ಲದೆ ಕುರಿಗಾಹಿಗಳು ನಲುಗಿ ಹೋದರು. ಕೆಲವರು ಕಡಿಮೆ ದರಕ್ಕೆ ಜಾನುವಾರುಗಳನ್ನು ಮಾರಿದ್ದುಂಟು. ಸಂತೆ ನಡೆಸಲು ಅವಕಾಶವಿಲ್ಲ. ಅದಕ್ಕೆ ಅನುಮತಿಯನ್ನೂ ಕೊಟ್ಟಿಲ್ಲ. ಆದರೂ ಕುರಿಗಾಹಿಗಳು ದಿಢೀರ್ ತಮ್ಮ ಕುರಿಗಳೊಂದಿಗೆ ಪ್ರತ್ಯಕ್ಷವಾಗಿ ಬವಣೆ ಪಡುವಂತಾಯಿತು.

   ಬಟವಾಡಿಯ ಎಪಿಎಂಸಿ ಬಳಿಯಿಂದ ಸಿದ್ಧಗಂಗಾ ಮಠದ ಹಿಂಭಾಗದ ಬಂಡೇಪಾಳ್ಯದ ರಸ್ತೆಯಲ್ಲೆಲ್ಲಾ ಕುರಿಗಳನ್ನು ಬೆಳಗ್ಗೆ ಹೊಡೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂದಿತು. ಕೆಲವರು ಸಿದ್ಧಗಂಗಾ ಮಠದ ಹಿಂಭಾಗದಲ್ಲಿರುವ ದೂರದ ರಸ್ತೆಯಲ್ಲಿ ವಿಶ್ರಮಿಸಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link