ಹುಳಿಯಾರು : ಕೋರ್ಟ್ ಆಜ್ಞೆ ಉಲ್ಲಂಘಿಸಿ ಮಳಿಗೆ ಹರಾಜು!

ಹುಳಿಯಾರು:

     ಹುಳಿಯಾರು ಪಟ್ಟಣ ಪಂಚಾಯ್ತಿಯ ವಾಣಿಜ್ಯ ಮಳಿಗೆಗಳ ಇ-ಹರಾಜಿಗೆ ಕರ್ನಾಟಕ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಸಹ ಕೋರ್ಟ್ ಆಜ್ಞೆ ಉಲ್ಲಂಘಿಸಿ ಇ-ಹರಾಜು ಪ್ರಕ್ರಿಯೆ ನಡೆದಿದೆ. ಆದರೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹೇಳಿಕೊಂಡು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈಗ ತಡೆಯಾಜ್ಞೆ ತಂದವರು ಕೋರ್ಟ್ ಮೆಟ್ಟಿಲೇರುತ್ತಿದ್ದು ಈ ಕಂಟೆಂಪ್ಟ್ ಆಫ್ ಕೋರ್ಟ್ ಯಾವ ಅಧಿಕಾರಿಗಳ ತಲೆದಂಡ ಪಡೆಯುವುದೋ ಎನ್ನುವುದು ಬಹು ಚರ್ಚಿತ ವಿಷಯವಾಗಿದೆ.

    ಹುಳಿಯಾರು ಪಪಂನ 52 ವಾಣಿಜ್ಯ ಮಳಿಗೆಗಳನ್ನು ಮೂರ್ನಲ್ಕು ದಶಕಗಳಿಂದ ಕಾನೂನು ಬಾಹೀರವಾಗಿ ಹಾಲಿ ಬಾಡಿಗೆದಾರರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ನವೀಕರಿಸಿಕೊಡುತ್ತಿದ್ದು ಇದರಿಂದ ಪಪಂ ಅಧಿವೃದ್ಧಿಗೆ ಆರ್ಥಿಕ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದರು. ಅದರಂತೆ 52 ಮಳಿಗೆಗಳನ್ನೂ ಇ-ಹರಾಜು ಮೂಲಕ ವಿಲೇವಾರಿಗೆ ನಿರ್ಧರಿಸಿ ಪ್ರಕಟಣೆಯನ್ನು ಸಹ ಹೊರಡಿಸಿತ್ತು. ಆದರೆ ಹಾಲಿ ಬಾಡಿಗೆದಾರರನ್ನು ತೆರವು ಮಾಡದೆ ಹರಾಜು ಪ್ರಕ್ರಿಯೆ ನಡೆಸುವುದು ನಿಯಮಬಾಹೀರ ಎಂದು ಕೋರ್ಟ್‍ನಿಂದ ಹಾಲಿ ಬಾಡಿಗೆದಾರರು ತಡೆಯಾಜ್ಞೆ ತಂದಿದ್ದರು.

    52 ಮಳಿಗೆಗಳ ಪೈಕಿ ಒಂದು ಮಳಿಗೆಯ ಬಾಡಿಗೆದಾರ ಪುಟ್ಟರಾಜು ಮರಣ ಹೊಂದಿದರಿಂದಲೂ, ಇನ್ನೊಂದು ಮಳಿಗೆಯ ಬಾಡಿಗೆದಾರ ಡಿ.ಆರ್.ನರೇಂದ್ರಬಾಬು ಕೋರ್ಟ್ ಮೆಟ್ಟಿಲೇರಲು ಇಚ್ಚಿಸದಿದ್ದರಿಂದ 50 ಮಳಿಗೆಗಳ ಇ-ಹರಾಜಿಗೆ ಕೋರ್ಟ್ 2019 ಡಿ. 2 ಮತ್ತು ಡಿ. 9 (ಎರಡು ಪ್ರತ್ಯೇಕ ತಡೆಆಜ್ಞೆ) ರಂದು 6 ವಾರಗಳ ಕಾಲ ತಡೆಯಾಜ್ಞೆ ನೀಡಿತ್ತು.

     ಅದರಂತೆ ಹುಳಿಯಾರು ಪಪಂ ಮುಖ್ಯಾಧಿಕಾರಿಗಳು ಇ-ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಪಪಂ ನೋಟಿಸ್ ಬೋರ್ಡ್‍ನಲ್ಲೂ, ಪತ್ರಿಕಾ ಹೇಳಿಕೆಯಲ್ಲೂ ತಿಳಿಸಿದ್ದರು.ಆದರೆ 52 ಮಳಿಗೆಗಳ ಪೈಕಿ 13 ಮಳಿಗೆಗಳನ್ನು ಇ-ಹರಾಜು ಮಾಡಲಾಗಿದ್ದು ಇದರಲ್ಲಿ 1 ಮಳಿಗೆ 16 ಸಾವಿರಕ್ಕೂ ಹೆಚ್ಚಿನ ಮಾಸಿಕ ಬಾಡಿಗೆಗೆ ವಿಲೆಯಾಗಿದೆ. ಇತ್ತ ಕೋರ್ಟ್ ತಡೆಯಾಜ್ಞೆ ಇದ್ದರೂ, ಅತ್ತ ಪಪಂ ಅಧಿಕಾರಿ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದರೂ ಇ-ಹರಾಜು ನಡೆದಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಆಡಳಿತಾಧಿಕಾರಿಗಳನ್ನು ಪ್ರಶ್ನಿಸಿದರೆ ಯೋಜನ ನಿರ್ದೇಶಕರ ಕಡೆಗೂ, ಯೋಜನಾ ನಿರ್ದೆಶಕರನ್ನು ಪ್ರಶ್ನಿಸಿದರೆ ಪಪಂ ಅಧಿಕಾರಿಗಳ ಕಡೆಗೂ ಬೊಟ್ಟು ಮಾಡಿ ತೋರಿಸುತ್ತಾರೆ.

     ಅಧಿಕಾರಿಗಳು ಒಬ್ಬರ ಮೇಲೋಬ್ಬರು ಜಬಾವ್ದಾರಿ ವರ್ಗಾಯಿಸಿ ನುಣುಚಿಕೊಳ್ಳುತ್ತಿದ್ದರೂ ನ್ಯಾಯಾಲಯದ ತಡೆಯಾಜ್ಞೆ ಇಲ್ಲಿ ಸ್ಪಷ್ಟವಾಗಿ ಉಲ್ಲಂಘನೆಯಾಗಿದೆ. ಇದು ತಡೆಯಾಜ್ಞೆ ತಂದವರ ನೆಮ್ಮದಿ ಕೆಡಿಸಿದೆ. ಅಲ್ಲದೆ ಪಪಂ ಅಧಿಕಾರಿಯ ತಾತ್ಕಾಲಿಕ ಸ್ಥಗಿತದ ಹೇಳಿಕೆ ನಂಬಿ ಅನೇಕರು ಇ-ಹರಾಜು ಪ್ರಕ್ರಿಯೆಯಿಂದ ವಂಚಿತರಾಗಿದ್ದಾರೆ. ಇದು ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಕೋರ್ಟ್ ಆಜ್ಞೆ ಉಲ್ಲಂಘನೆಯನ್ನು ಖಂಡಿಸಿ ಕೋರ್ಟ್ ಮೆಟ್ಟಿಲೇರಿದರೆ ಯಾವ ಅಧಿಕಾರಿಉಯ ತಲೆದಂಡವಾಗುತ್ತದೋ ಎನ್ನುವುದು ಪ್ರಸ್ತುತ ಹುಳಿಯಾರಿನ ಬಹು Z್ಪರ್ಚಿತ ವಿಷಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ