ತುಮಕೂರು
ವಿಶೇಷ ವರದಿ : ರಾಕೇಶ್ ವಿ
ನಗರದಲ್ಲಿರುವ ಪ್ರಮುಖ ಬಸ್ ನಿಲ್ದಾಣ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ. ಬರೊಬ್ಬರಿ 82.14 ಕೋಟಿ ರೂಗಳ ವೆಚ್ಚದಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಸ್ಮಾರ್ಟ್ ಸಿಟಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಸಜ್ಜಾಗಿದ್ದಾರೆ. ಇದರ ಜೊತೆಯಲ್ಲಿ ಸ್ಮಾರ್ಟ್ ಸಿಟಿಯಿಂದ ಲಕ್ಷಾಂತರ ಹಣ ವ್ಯರ್ಥ ಮಾಡಿ ನೂತನ ಬಸ್ ಶೆಲ್ಟರ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅದು ಬಳಕೆಗೆ ಬಾರದೆ ವ್ಯರ್ಥವಾಗಿದೆ.
ನಗರದಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‍ಗಳ ನಿಲುಗಡೆಗೆ ಹಾಗೂ ಜನರು ಹತ್ತಲು ಅಲ್ಲಲ್ಲಿ ಟೂಡಾದ ವತಿಯಿಂದ ಹಲವು ಬಸ್ ಶೆಲ್ಟರ್‍ಗಳನ್ನು ನಿರ್ಮಾಣ ಮಾಡಲಾಗಿತ್ತು. ಅದರಲ್ಲಿ ಸುಮಾರು ಬಸ್ ಶೆಲ್ಟರ್‍ಗಳು ದುಸ್ಥಿತಿಯಲ್ಲಿದ್ದು, ದುರಸ್ಥಿ ಮಾಡುವ ಅವಶ್ಯಕತೆಯಿದೆ. ಇಂತಹ ಬಸ್ ಶೆಲ್ಟರ್‍ಗಳನ್ನು ಆಯ್ಕೆ ಮಾಡಿಕೊಂಡು ಪುನರಾಭಿವೃದ್ಧಿ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಬದಲಿಗೆ ಪಕ್ಕದಲ್ಲಿಯೇ ಹೊಸದೊಂದು ಶೆಲ್ಟರ್ ನಿರ್ಮಾಣ ಮಾಡಿದರೆ ವ್ಯರ್ಥವಲ್ಲವೇ..?
ಬೆಂಗಳೂರಿನಂತಹ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ತುಮಕೂರಿನ ಜನಸಂಖ್ಯೆ ಕಡಿಮೆಯೇ ಇದೆ. ಬಸ್‍ಗಳಲ್ಲಿ ಓಡಾಡುವವರ ಸಂಖ್ಯೆಯೂ ಅಷ್ಟಕಷ್ಟೇ ಇದೆ. ಕೇವಲ ಶಾಲಾ ಕಾಲೇಜುಗಳ ಸಮಯದಲ್ಲಿ ಮಾತ್ರ ಹೆಚ್ಚಿನ ಪ್ರಯಾಣಿಕರನ್ನು ನೋಡಬಹುದೆ ಹೊರತು ಇತರೆ ಸಮಯದಲ್ಲಿ ಅಷ್ಟಾಗಿ ನಗರ ಸಾರಿಗೆಯಲ್ಲಿ ಜನಸಂದಣಿ ಕಾಣುವುದಿಲ್ಲ. ಇಂತಹ ಸಂದರ್ಭದಲ್ಲಿ ಬಸ್ ಶೇಲ್ಟರ್ ಇರುವ ಕಡೆಯೇ ಮತ್ತೊಂದು ನಿರ್ಮಾಣ ಮಾಡಿರುವುದು ವ್ಯರ್ಥ ಎಂಥಲೇ ಹೇಳುತ್ತಾರೆ ಸಾರ್ವಜನಿಕರು.
ವಿವಿ ಮುಂಭಾಗದಲ್ಲಿ ಎರಡು ಬಸ್ ಶೆಲ್ಟರ್
ತುಮಕೂರು ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಈಗಾಗಲೇ ಟೂಡಾ ವತಿಯಿಂದ ಒಂದು ಬಸ್ ಶೆಲ್ಟರ್ ಅನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ನಿರ್ವಹಣೆ ಇಲ್ಲದೆ ಸೊರಗಿ ಹೋಗಿತ್ತು. ಇದೀಗ ಸ್ಮಾರ್ಟ್ ಸಿಟಿಯಿಂದ ಅದರ ಪಕ್ಕದಲ್ಲೇ ಮತ್ತೊಂದು ಬಸ್ ಶೆಲ್ಟರ್‍ಅನ್ನು ನಿರ್ಮಾಣ ಮಾಡಿದ್ದಾರೆ. ಒಂದು ಬಸ್ ಶೆಲ್ಟರು ಬಳಕೆಯಾಗದೇ ಇದ್ದಾಗ ಅದರ ಪಕ್ಕದಲ್ಲೇ ಮತ್ತೊಂದು ನಿರ್ಮಾಣ ಮಾಡುವ ಅಗತ್ಯವೇನಿತ್ತು. ಇರುವುದನ್ನು ಸರಿಪಡಿಸಿದ್ದರೆ ಆಗುತ್ತಿರಲಿಲ್ಲವೇ..? ಇಲ್ಲಿ ನಿರ್ಮಾಣ ಮಾಡುವ ಬದಲು ಬಸ್ ಶೆಲ್ಟರ್ ಇಲ್ಲದ ಕಡೆ ನಿರ್ಮಾಣ ಮಾಡಿದ್ದರೆ ಅದರ ಉಪಯೋಗದ ಬಗ್ಗೆ ತಿಳಿಯುತ್ತಿತ್ತು.
18 ಲಕ್ಷ ರೂ ವ್ಯರ್ಥ..!
ಜನಸ್ನೇಹಿಯಾಗಿರಲಿ ಎಂಬ ಉದ್ದೇಶದಿಂದ ಮಾದರಿ ಬಸ್ ಶೆಲ್ಟರ್ ಅನ್ನು ನಿರ್ಮಾಣ ಮಾಡಲಾಗಿದೆ. ಅದು ಈಗಾಗಲೇ ಉದ್ಘಾಟನೆಯೂ ಆಗಿದೆ. ಕಳೆದ ಆಗಸ್ಟ್ 15ರಂದೇ ಪಾಲಿಕೆ ಸದಸ್ಯರು, ಮೇಯರ್, ಆಯುಕ್ತರು ಒಳಗಂಡಂತೆ ವಿವಿಧ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಗಿದೆ. ಆದರೆ ಅಲ್ಲಿ ಅಳವಡಿಸಬೇಕಾದ ಉಪಕರಣಗಳನ್ನು ಅಳವಡಿಸುವ ಕೆಲಸ ನಡೆಯುತ್ತಲೇ ಇತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದೆ ಎಂಬುದಾಗಿ ಸ್ಮಾರ್ಟ್ ಸಿಟಿಯ ವೆಬ್‍ಸೈಟ್‍ನಲ್ಲಿ ನೀಡಿದ್ದು, ಅದು ಕೇವಲ ದಾಖಲೆಗಳು, ವೆಬ್‍ಸೈಟ್‍ನಲ್ಲಿ ಮಾತ್ರ ಪೂರ್ಣಗೊಂಡಿದೆ ಎನ್ನಬಹುದು. ಪ್ರಾಯೋಗಿಕವಾಗಿ ಇನ್ನೂ ಬಸ್ ಶೆಲ್ಟರ್ ಬಳಕೆಯಾಗುತ್ತಿಲ್ಲ.
ಸುರಕ್ಷತೆಗಾಗಿ ಸಿಸಿಕ್ಯಾಮೆರಾ ಅಳವಡಿಕೆ
ಬಸ್ ಶೆಲ್ಟರ್‍ನಲ್ಲಿ ಸುರಕ್ಷತೆ ಇರಲಿ ಎಂಬ ಕಾರಣಕ್ಕೆ ಸಿಸಿ ಕ್ಯಾಮೆರಾವನ್ನು ಅಳವಡಿಕೆ ಮಾಡಿದ್ದಾರೆ. ಅದು ನಿಜಕ್ಕೂ ಕೆಲಸ ಮಾಡುವುದೋ ಇಲ್ಲವೋ ಏನೂ ತಿಳಿಯದಾಗಿದೆ. ಈಗ ನಗರದಲ್ಲಿ ಅಳವಡಿಸಲಾದ ಎಲ್ಲಾ ಕ್ಯಾಮೆರಾಗಳ ಕಾರ್ಯವೈಖರಿಯನ್ನು ಪಾಲಿಕೆ ಆವರಣದಲ್ಲಿರುವ ಕಮ್ಯಾಂಡ್ ಸೆಂಟರ್‍ನಲ್ಲಿ ವೀಕ್ಷಿಸಲಾಗುತ್ತದೆ. ಆದರೆ ಬಸ್ ಶೆಲ್ಟರ್‍ನಲ್ಲಿ ವಿದ್ಯುತ್ ಸೌಲಭ್ಯ ಇಲ್ಲ. ಹಾಗಾಗಿ ಇಲ್ಲಿ ಅಳವಡಿಸಲಾದ ಕ್ಯಾಮೆರಾ ಕೆಲಸ ನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ತೆರೆಯದ ಕಾಫಿ ಶಾಪ್
ಬಸ್ ಶೆಲ್ಟರ್‍ನ ಎಡಭಾಗದಲ್ಲಿ ಕಾಫಿ ಶಾಪ್ ಒಂದನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲಿ ತಂಪು ಪಾನೀಯಗಳು, ಪುಸ್ತಕಗಳು, ಲೇಖನಿಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಸ್ತುಗಳು ಸೇರಿದಂತೆ ಇನ್ನಿತರ ಪಾಠೋಪಕರಣಗಳು ಲಭ್ಯವಿರುತ್ತದೆ ಎಂದು ಹೇಳಲಾಗಿತ್ತು. ಜೊತೆಗೆ ಕಾಫಿ ಶಾಪ್ ನಡೆಸುವವರೇ ಈ ಬಸ್ ಶೆಲ್ಟರ್‍ನ ಸ್ವಚ್ಛತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗಿತ್ತು. ಉಪ್ಪಾರಹಳ್ಳಿಯ ಮೇಲ್ಸೇತುವೆ ಕೆಳಭಾಗದಲ್ಲಿನ ಮಳಿಗೆಗಳನ್ನು ಹರಾಜು ಮಾಡುವಾಗಲೇ ಈ ಬಸ್ ಶೆಲ್ಟರ್‍ನ ಮಳಿಗೆಯನ್ನೂ ಹರಾಜು ಮಾಡಲಾಗುತ್ತದೆ ಎಂದಿದ್ದರು. ಆದರೆ ಇಲ್ಲಿಯವರೆಗೆ ಯಾರೂ ಇಲ್ಲಿ ಶಾಪ್ ತೆರೆದಿಲ್ಲ. ಕಸವನ್ನು ಸ್ವಚ್ಛ ಮಾಡುವ ಗೋಜಿಗೆ ಹೋಗುತ್ತಿಲ್ಲ.
ಹೆಚ್ಚುವರಿ ಬಸ್ ಶೆಲ್ಟರ್ ನಿರ್ಮಾಣ
ತುಮಕೂರು ವಿವಿ ಬಳಿ ನಿರ್ಮಿಸಲಾದಂತಹ ಮಾದರಿ ಜನಸ್ನೇಹಿ ಬಸ್ ನಿಲ್ದಾಣದಂತೆ ನಗರದಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಅವಶ್ಯಕತೆಗಳಿಗನುಗುಣವಾಗಿ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ. ಅದರಲ್ಲಿ ಮೊದಲನೇ ಹಂತವಾಗಿ 5 ಕಡೆಗಳಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇವುಗಳನ್ನು ನಿರ್ಮಾಣ ಮಾಡುವಾಗ ಮಾದರಿ ಬಸ್ ಶೆಲ್ಟರ್‍ನಂತೆ ಇರುವ ಬಸ್ ಶೆಲ್ಟರ್ ಪಕ್ಕದಲ್ಲಿ ನಿರ್ಮಾಣ ಮಾಡಿದರೆ ಖಂಡಿತವಾಗಿಯೂ ವ್ಯರ್ಥವಾಗಲಿದೆ.
ವಿವಿಧ ಸೌಲಭ್ಯಗಳು ಮಂಗಮಾಯ
ಬಸ್ ಶೆಲ್ಟರ್‍ನಲ್ಲಿ ಉಚಿತ ಇಂಟರ್‍ನೆಟ್ ಸೌಲಭ್ಯ, ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ವೈಫೈ ಸೌಲಭ್ಯ, ಅಳವಡಿಕೆ ರೂಪಿಸಲಾಗಿತ್ತು. ಆದರೆ ಇದೀಗ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಬಸ್‍ಗಳ ಸಂಚಾರದ ಮಾಹಿತಿಯ ಬೋರ್ಡ್‍ಅನ್ನು ಅಳವಡಿಸಿದ್ದರೂ ಅದಕ್ಕೆ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ಯಾವ ಮಾಹಿತಿಯನ್ನು ಪ್ರದರ್ಶಿಸುತ್ತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಕಮ್ಯಾಂಡ್ ಸೆಂಟರ್‍ಗೆ ಮಾಹಿತಿ ನೀಡಲು ಪ್ಯಾನಿಕ್ ಬಟನ್ ಹಾಕಲಾಗುವುದು ಎಂದು ಹೇಳಿದ್ದರಾದರೂ ಅಳವಡಿಕೆಯಾಗಿಲ್ಲ.